

ಜೋಧ್ಪುರ: ಮಾಹಿತಿ ಹಕ್ಕು ಕಾನೂನು (ಆರ್ಟಿಐ) ಅನ್ವಯ ಪತಿಯ ಒಟ್ಟು ವೇತನ ಬಗ್ಗೆ ತಿಳಿಯುವ ಹಕ್ಕು ಪತ್ನಿಗೆ ಇದೆ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಮಹತ್ವದ ತೀರ್ಪು ನೀಡಿದೆ.
ಪತಿಯ ಒಟ್ಟು ಹಾಗೂ ತೆರಿಗೆ ಕಟ್ಟಬೇಕಾದ ಆದಾಯದ ಮಾಹಿತಿ ನೀಡುವಂತೆ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ತೆರಿಗೆ ಇಲಾಖೆ ನಿರಾಕರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಿಐಸಿ, ದೂರುದಾರ ಮಹಿಳೆಗೆ ಆದೇಶದ 15 ದಿನದೊಳಗೆ ಮಾಹಿತಿ ನೀಡುವಂತೆ ಐಟಿ ಇಲಾಖೆಯ ಜೋಧ್ಪುರ ಕಚೇರಿಗೆ ನಿರ್ದೇಶಿಸಿದೆ. ಇಂಥ ಮಾಹಿತಿಯು ಮೂರನೇ ವ್ಯಕ್ತಿಗೆ ಸಂಬಂಧಿಸಿದ್ದಾಗಿದ್ದು ಆರ್ಟಿಐ ಕಾನೂನಿನ ಮಾಹಿತಿ ವ್ಯಾಖ್ಯಾದಡಿ ಅದು ಬರುವುದಿಲ್ಲ ಎಂಬ ಐಟಿ ಇಲಾಖೆ ವಾದವನ್ನು ಸಿಐಸಿ ತಳ್ಳಿ ಹಾಕಿದೆ.
ಐಟಿ ಇಲಾಖೆಯ ನಿರಾಕರಣೆ ವಿರುದ್ಧ ಜೋಧ್ಪುರದ ರಹಮತ್ ಬಾನೊ ಎಂಬುವವರು ಸಿಐಸಿಗೆ ದೂರು ಸಲ್ಲಿಸಿದ್ದರು. ‘ಮಾಹಿತಿ ವೈಯಕ್ತಿಕವಾದುದು ಎಂದು ಹೇಳಿ ರಹಮತ್ ಬಾನೊ ಅವರ ಪತಿ ವೇತನದ ಮಾಹಿತಿ ನೀಡಲು ನಿರಾಕರಿಸಿದ್ದರು’ ಎಂದು ಬಾನೊ ಅವರ ವಕೀಲ ರಜಾಕ್ ಹೈದರ್ ಹೇಳಿದ್ದಾರೆ.