ಹೆಂಡತಿಯನ್ನೇ ಉಸಿರುಗಟ್ಟಿಸಿ ಪರಲೋಕಕ್ಕೆ ಕಳಿಸಿದ ಗಂಡನನ್ನು ಜೈಲಿಗೆ ಅಟ್ಟಿದ ನ್ಯಾಯಾಲಯ

crime
Published on

ಬೆಂಗಳೂರು: ಪತ್ನಿಯನ್ನು ಕೊಲೆಗೈದು ಸಾಕ್ಷ್ಯ ನಾಶ ಮಾಡಿದ್ದ ಪತಿಗೆ 46ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಜತೆ 7 ವರ್ಷಗಳ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಕೈಲಾಸ್ ಚಂದ್ ಬೆಹರ್(45) ಶಿಕ್ಷೆಗೊಳಗಾದ ಅಪರಾಧಿ. ಈತ 2008 ಜೂನ್ 19ರಂದು ಪತ್ನಿ ಮಾಲತಿ ಸಾಹು ಎಂಬಾಕೆಯ್ನು ಉಸಿರುಗಟ್ಟಿಸಿ ಕೊಲೆಗೈದಿದ್ದ. ಉತ್ತರ ಭಾರತ ಮೂಲದ ಕೈಲಾಶ್ ಚಂದ್ ಬೆಹರ್ ಆರು ವರ್ಷಗಳ ಹಿಂದೆ ಮಾಲತಿ ಸಾಹು ಎಂಬಾಕೆಯನ್ನು ಮದುವೆಯಾಗಿದ್ದು, ಕಾಮಾಕ್ಷಿಪಾಳ್ಯದ ಮುನಿಯಪ್ಪ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಾಲತಿ ಸಾಹು ತನ್ನ ಅಕ್ಕ ಮತ್ತು ಸಹೋದರನ ಜತೆ ಹೆಚ್ಚಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಹೀಗಾಗಿ ಈಕೆ ಬೇರೆಯವರ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡಿದ್ದ.

ಜತೆಗೆ ಆರೋಪಿಯು ತನ್ನ ತಂದೆಗೆ ಕೊಡಲು ಇಟ್ಟಿದ್ದ 2500 ರೂ.ಯ ಕಟ್ಟಿನಿಂದ ಪತಿಯ ಅನುಮತಿ ಪಡೆಯದೆ ಒಂದು ಸಾವಿರ ರೂ. ಆಕೆ ತೆಗೆದುಕೊಂಡಿದ್ದಳು. ಈ ವಿಚಾರವಾಗಿ ಜು. 19ರಂದು ಪತ್ನಿ ಸಾಹು ಜತೆ ಜಗಳ ತೆಗೆದು, ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದ.

ಈ ಬಳಿಕ ಮೃತದೇಹವನ್ನು ಮಲಗಿಸಿ ಮೈಮೇಲೆ ಬೆಡ್‌ಶೀಟ್ ಹೊದಿಸಿ ಸಾಕ್ಷ್ಯ ನಾಶಪಡಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಕಾಮಾಕ್ಷಿಪಾಳ್ಯ ಠಾಣೆಯ ಅಂದಿನ ಠಾಣಾಧಿಕಾರಿ ಆರ್.ಜಿ.ರವಿಕುಮಾರ್ ಆರೋಪಿಯನ್ನು ಬಂಧಿಸಿ ಕೊಲೆ ಆರೋಪದಡಿ ಆರೋಪಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್‌ನ ನ್ಯಾಯಾಧೀಶರಾದ ಮಂಜುನಾಥ್ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಜತೆ 7 ವರ್ಷಗಳ ಸಜೆ ಮತ್ತು 1 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಸರ್ಕಾರಿ ಅಭಿಯೋಜಕರಾಗಿ ಕೆ.ಎಸ್.ಲತಾ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net