30 ಕೆಜಿಯ ಕಬ್ಬಿಣದ ಚೈನ್​ನಲ್ಲಿ ಹೆಂಡತಿಯನ್ನು ಕಟ್ಟಿಟ್ಟ ಗಂಡ! 3 ತಿಂಗಳ ಕಾಲ ಒದ್ದಾಡಿದ ಮಹಿಳೆ

wife
Published on

ಜೈಪುರ: ದಂಪತಿಗಳ ನಡುವೆ ಅನುಮಾನ ಸಲ್ಲ ಎನ್ನುತ್ತಾರೆ. ಆದರೆ ಕೈ ಹಿಡಿದಿದ್ದ ಹೆಂಡತಿ ಮೇಲೇ ಅನುಮಾನ ಬೆಳೆಸಿಕೊಂಡ ಗಂಡನೊಬ್ಬ ಆಕೆಯನ್ನು 30 ಕೆಜಿ ತೂಕದ ಕಬ್ಬಿಣದ ಚೈನ್​ನಲ್ಲಿ ಕಟ್ಟಿಟ್ಟಿದ್ದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಪ್ರತಾಪ್​ಗಢ ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಜೀವಾ ಬಾಯ್ ಹೆಸರಿನ ಮಹಿಳೆಗೆ ಮದುವೆಯಾಗಿ ಮಗ ಕೂಡ ಇದ್ದಾನೆ. ಆಕೆಯ ತಾಯಿ ಮನೆಯಲ್ಲಿ ಒಬ್ಬಂಟಿಯಾಗಿದ್ದು, ಆಕೆಯ ಸಹಾಯಕ್ಕೆಂದು ಜೀವಾ ಆಗಾಗ ತಾಯಿ ಮನೆಗೆ ಹೋಗಿ ಬರುತ್ತಿದ್ದಳಂತೆ. ಆದರೆ ಆ ವೇಳೆ ಗಂಡ ಆಕೆಗೆ ಹೊಡೆಯುತ್ತಿದ್ದನಂತೆ. ನೀನು ಬೇರಾರದ್ದೋ ಜತೆಗೆ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ಬೈದು, ಹಲ್ಲೆ ಮಾಡುತ್ತಿದ್ದನಂತೆ.

ಅಷ್ಟಕ್ಕೇ ನಿಲ್ಲದ ಆತನ ಹಿಂಸಾಚಾರ ಇನ್ನಷ್ಟು ಮುಂದುವರಿದಿದೆ. 30 ಕೆಜಿಯ ಕಬ್ಬಿಣದ ಚೈನ್​ ಅನ್ನು ತಂದು ಅದರಲ್ಲಿ ಹೆಂಡತಿಯ ಕೈ ಕಾಲುಗಳಿಗೆ ಕಟ್ಟಿ ಬಿಟ್ಟಿದ್ದಾನೆ. ಸುಮಾರು ಮೂರು ತಿಂಗಳ ಕಾಲ ಆಕೆ ಆ ಚೈನ್​ನೊಂದಿಗೇ ಜೀವನ ಸಾಗಿಸಿದ್ದಾಳೆ. ಈ ವಿಚಾರ ಸ್ಥಳೀಯ ಪೊಲೀಸ್ ಠಾಣೆಗೂ ಮುಟ್ಟಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದು, ಮಹಿಳೆಯನ್ನು ಚೈನ್​ನಿಂದ ಬಿಡುಗಡೆಗೊಳಿಸಿದ್ದಾರೆ. ಆಗ ಆಕೆ ತನ್ನ ಕಥೆಯನ್ನು ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net