

ಬೆಳಗಾವಿ: ಕೆಎಎಸ್ ಅಧಿಕಾರಿಯೊಬ್ಬರ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಜಮ್ ನಗರದ ನಿವಾಸದಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಮನೆಯ ಕೋಣೆಯಲ್ಲಿ ಎಫ್‌ಡಿಎ ಜಾಫರ್ ಫೀರ್ಜಾದೆ(39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಿಡಕಲ್ ಡ್ಯಾಂ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರೇಷ್ಮಾ ತಾಳಿಕೋಟೆ ಅವರ ಪತಿ ಜಾಫರ್ ಫೀರ್ಜಾದೆ. ಇವರು ಡಿಟಿಐನಲ್ಲಿ ಎಫ್‌ಡಿಎ ತರಬೇತಿಯಲ್ಲಿದ್ದರು. ಇದೀಗ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಜಾಫರ್ ಫೀರ್ಜಾದೆ ಅವರ ಮೃತದೇಹವನ್ನು ಕೊಂಡೊಯ್ಯಲಾಗಿದೆ.
ಪತ್ನಿ ರೇಷ್ಮಾ ತಾಳಿಕೋಟಿ ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದಾಗ ಜಾಫರ್ ಆತ್ಮಹತ್ಯೆ ಶರಣಾಗಿದ್ದಾರೆ. ಈವರೆಗೆ ಜಾಫರ್ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.