ಪತ್ನಿ ಜತೆ ಪೈಲ್ವಾನ್​ನ ಜಗಳದಿಂದ ತಬ್ಬಲಿಯಾದವು ಮೂರು ಮಕ್ಕಳು!

ದಂಪತಿ ಸಾವು
Published on

ದಾವಣಗೆರೆ: ಆತ ಸದೃಢ ದೇಹ ಹೊಂದಿದ್ದ ಕುಸ್ತಿ ಪೈಲ್ವಾನ್. ಆದರೆ ಅದೊಂದು ದಿನ ಮಾಡಬಾರದ ಕೆಲಸ ಮಾಡಿ ಗ್ರಾಮಸ್ಥರಿಂದ ಬೈಸಿಕೊಂಡಿದ್ದ. ಇದು ಆತನ 12 ವರ್ಷಗಳ ದಾಂಪತ್ಯ ಜೀವನದಲ್ಲಿ ಕಲಹ ಏರ್ಪಡಲು ಕಾರಣವಾಗಿತ್ತು. ಇದೀಗ ಸಿಟ್ಟಿನಲ್ಲಿ ಹೆಂಡತಿಯನ್ನು ಕೊಲೆ ಮಾಡಿ, ತಾನೂ ನೇಣಿಗೆ ಶರಣಾಗಿದ್ದಾನೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಂಗಾಪುರ ಗ್ರಾಮದ ನಿವಾಸಿ ಹನಮಂತಪ್ಪ ಪತ್ನಿಯನ್ನು ಮನಬಂದಂತೆ ತಳಿಸಿ ಕೊಲೆ ಮಾಡಿ, ನೇಣು ಹಾಕಿಕೊಂಡ ಕುಸ್ತಿ ಪೈಲ್ವಾನ್. 12 ವರ್ಷದ ಹಿಂದೆ ಚೌಡಮ್ಮ ಎಂಬಾಕೆಯನ್ನು ಹನುಮಂತಪ್ಪ ಪ್ರೀತಿಸಿ ವಿವಾಹವಾಗಿದ್ದ. ಇದೀಗ ಇವರ ಮೂವರು ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಚೌಡಮ್ಮ ಹಾಗೂ ಹನಮಂತಪ್ಪ ತಮ್ಮ ಭೂಮಿಯಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಇಬ್ಬರ ನಡುವೆ ಕಲಹಗಳು ಉಂಟಾಗಿದ್ದು, ಗಂಡ ಹೆಂಡತಿ ಜಗಳವನ್ನು ಪಂಚಾಯತಿ ಮಾಡಿ ಸಮಾಧಾನ ಪಡಿಸಲಾಗುತ್ತು. ಆದರೆ ನಿನ್ನೆ(ಫೆ.12) ಇಬ್ಬರ ಮಧ್ಯೆ ಉಂಟಾದ ಕಲಹ ಮಾತ್ರ ಕೊಲೆ ಮತ್ತು ಆತ್ಮಹತ್ಯೆ ಹಂತಕ್ಕೆ ತಲುಪಿದೆ,

ಅಡುಗೆ ಊಟದ ವಿಷಯಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಏಕಾಏಕಿ ಪತ್ನಿ ಚೌಡಮ್ಮ ತನ್ನ ಕೆಲ ಬಟ್ಟೆಗಳನ್ನು ತುಂಬಿಸಿಕೊಂಡು ತವರು ಮನೆಗೆ ಹೊರಟಿದ್ದಾಳೆ. ಬೆನ್ನಟ್ಟಿ ಬಂದ ಹನುಮಂತಪ್ಪ ರಸ್ತೆ ಬದಿಯ ತಮ್ಮ ಸ್ವಂತ ಜಮೀನಿನಲ್ಲಿ ಎಳೆದೊಯ್ದು ಮನಬಂದಂತೆ ಬಾರುಕೋಲಿನಿಂದ ಹೊಡೆದಿದ್ದಾನೆ, ಗಂಡನ ವರ್ತನೆ ನೋಡಿ ಪತ್ನಿ ಚೌಡಮ್ಮ ಜೋಳದ ಹೊಲದ ತುಂಬ ಓಡಾಡಿ, ಕಾಪಾಡುವಂತೆ ಕೂಗಾಡಿದ್ದಾಳೆ, ತಾಳ್ಮೆ ಕಳೆದುಕೊಂಡ ಹನುಮಂತ ಬಾರುಕೋಲಿನಿಂದ ಕುತ್ತಿಗೆಗೆ ಬಿಗಿದು ಪತ್ನಿ ಚೌಡಮ್ಮಳನ್ನು ಕೊಲೆ ಮಾಡಿದ್ದಾನೆ.

ಹನುಮಂತಪ್ಪ ಪತ್ನಿಯನ್ನು ಕೊಲೆಗೈದ ನಂತರ ಘಟನೆಯ ಕುರಿತು ಫೋನ್ ಮಾಡಿ ಮನೆಯವರಿಗೆ ತಿಳಿಸಿದ್ದಾನೆ, ಕೂಡಲೇ ಚೌಡಮ್ಮಳ ಮೃತ ದೇಹವನ್ನು ಪಕ್ಕದ ತೆಲಗಿ ಗ್ರಾಮದ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ, ವಿಷಯ ತಿಳಿದ ಪೊಲೀಸರು ಹನುಮಂತಪ್ಪನಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಹೆಂಡತಿ ಮೃತಪಟ್ಟ ಸ್ಥಳದಲ್ಲೇ ಹನುಮಂತಪ್ಪ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net