ಪ್ರೀತಿಸಿ ಮದ್ವೆಯಾದ 23 ವರ್ಷಗಳ ಬಳಿಕ ಮಗಳ ಕಣ್ಮುಂದೆಯೇ ಪತ್ನಿಯನ್ನು ಕೊಂದ!

Murder
Published on

ಮಂಡ್ಯ: ಪಾಲಕರ ವಿರೋಧದ ನಡುವೆಯೂ ಪ್ರೀತಿಸಿದವಳನ್ನೇ ಮದುವೆಯಾಗಿದ್ದ ಪ್ರಿಯಕರ ಅದಾಗಿ 23 ವರ್ಷಗಳ ಬಳಿಕ ಮಗಳ ಕಣ್ಮುಂದೆಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಮಂಡ್ಯ ಜಿಲ್ಲೆಯಲ್ಲಿ ಈ ಕೊಲೆ ಪ್ರಕರಣ ನಡೆದಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಶೋಭಾ (43) ಪತಿಯಿಂದಲೇ ಕೊಲೆಗೀಡಾದ ಮಹಿಳೆ. ಮನೋಹರ್ (48) ಕೊಲೆ ಆರೋಪಿ. ಒಂದೇ ಗ್ರಾಮದವರಾಗಿದ್ದ ಇವರು 23 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಶೋಭಾ ಪಾಲಕರ ವಿರೋಧವಿದ್ದರೂ ಇಬ್ಬರೂ ಅದನ್ನು ಲೆಕ್ಕಿಸದೆ ಮದುವೆಯಾಗಿದ್ದರು.

ಪತಿ ಇತ್ತೀಚೆಗೆ ಕೆಲಸಕ್ಕೆ ಹೋಗದೆ ಉಂಡಾಡಿ ಗುಂಡನ ರೀತಿ ಓಡಾಡಿ ಕೊಂಡಿದ್ದ, ಇಬ್ಬರು ಮಕ್ಕಳಿದ್ದರೂ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದ. ಪ್ರತಿನಿತ್ಯ ಕಂಠಪೂರ್ತಿ ಕುಡಿದು ಬಂದು ಪತ್ನಿ ಜೊತೆ ಗಲಾಟೆ‌ ಮಾಡುತ್ತಿದ್ದ. ನಿನ್ನೆಯೂ ಬೈಕ್ ಸಾಲದ ವಿಚಾರವಾಗಿ ದಂಪತಿ ಮಧ್ಯೆ ಜಗಳವಾಗಿತ್ತು.

ಮಗನಿಗೆ ತಾಯಿ ಶೋಭಾ ಸಾಲದ ಮೇಲೆ ಬೈಕ್ ಕೊಡಿಸಿದ್ದು, ಅದರ ಕಂತನ್ನು ಮೂರು ತಿಂಗಳಿನಿಂದ ಪಾವತಿಸಿರಲಿಲ್ಲ. ಖಾಸಗಿ ಫೈನಾನ್ಸ್​ನವರು ನಿನ್ನೆ ಮನೋಹರ್‌ಗೆ ಕರೆ ಮಾಡಿ ಕಂತು ಕಟ್ಟುವಂತೆ ಹೇಳಿದ್ದರು. ಅಲ್ಲದೆ, ಮನೆ ಬಳಿಗೆ ಬಂದು ಹಣ ಕಟ್ಟುವಂತೆ ಒತ್ತಡ ಹೇರಿದ್ದರು. ಪಾನಮತ್ತನಾಗಿದ್ದ ಮನೋಹರ್ ಈ ವಿಚಾರದಿಂದ ಸಿಟ್ಟಾಗಿದ್ದು, ಕುಡಿದ ಮತ್ತಿನಲ್ಲಿ ಪತ್ನಿಗೆ ಮನಬಂದಂತೆ ಬೈದಿದ್ದಾನೆ.

ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಕುಡಿದ ಅಮಲಿನಲ್ಲಿದ್ದ ಮನೋಹರ್ ಪತ್ನಿ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದ. ಮಗಳ ಕಣ್ಣೆದುರೇ ಹೆಂಡತಿಯ ತೊಡೆಭಾಗಕ್ಕೆ ಕುಡುಗೋಲು ಬೀಸಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಶೋಭಾ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದು, ಸ್ಥಳೀಯರೂ ನೆರವಿಗೆ ಬರಲಿಲ್ಲ ಎನ್ನಲಾಗಿದೆ. ಮಗಳು ಕೇಳಿಕೊಂಡರೂ ಯಾರೂ ನೆರವಾಗಲಿಲ್ಲ. ಕೊನೆಗೆ ಆ್ಯಂಬುಲೆನ್ಸ್ ಕೂಡ ಸರಿಯಾದ ಸಮಯಕ್ಕೆ ಬಾರದ್ದರಿಂದ ಶೋಭಾ ಸಾವಿಗೀಡಾಗಿದ್ದಳು.

ಪತ್ನಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಮನೋಹರನನ್ನು ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಂದೆಗೆ ಕಠಿಣ ಶಿಕ್ಷೆ ನೀಡಬೇಕು, ಸಾಯೋವರೆಗೂ ಜೈಲಲ್ಲೇ ಕೊಳೆಯುವ ರೀತಿ ಮಾಡಬೇಕು ಎಂದು ಪುತ್ರಿ ಮನವಿ ಮಾಡಿಕೊಂಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net