ಅಪ್ಪ-ಅಮ್ಮನ ಜಗಳದಲ್ಲಿ ನಡದೇ ಹೋಯ್ತು ಘೋರ ದುರಂತ! ಬೀದಿಗೆ ಬಿದ್ದ ಮಕ್ಕಳು

murder
Published on

ಹೈದರಾಬಾದ್​: ಗಂಡು-ಹೆಂಡತಿ ಜಗಳ ಉಂಡು ಮಲಗುವವರೆಗೆ ಮಾತ್ರ ಎಂದು ಹಿರಿಯರು ಹೇಳುತ್ತಾರೆ. ಈ ಮಾತು ನಮ್ಮ ಪೂರ್ವಜರ ಕಾಲದಿಂದ ಇಂದಿನವರೆಗೂ ಸಾಗುತ್ತಲೇ ಬಂದಿದೆ. ಪತಿ-ಪತ್ನಿ ಅಂದಮೇಲೆ ಅಲ್ಲಿ ಜಗಳ ಇರಲೇಬೇಕು, ಇಲ್ಲದಿದ್ದರೆ ಅದು ಸುಖ ಸಂಸಾರ ಆಗಲು ಸಾಧ್ಯವೇ ಇಲ್ಲ ಎಂದು ಅನೇಕರು ಅಭಿಪ್ರಾಯಿಸುತ್ತಾರೆ. ಆದ್ರೆ, ಆ ಜಗಳ ಸಣ್ಣ-ಪುಟ್ಟದಾಗಿರಬೇಕು, ಉಂಡು ಮಲಗುವ ತನಕ ಮಾತ್ರ ಇದ್ದರೆ ಚೆಂದ ಎಂದು ಅನುಭವಸ್ಥರು ಹೇಳ್ತಾರೆ. ಇದೆಲ್ಲ ಸರಿ! ಆದರೆ, ಅದೇ ಜಟಾಪಟಿ ಪೊಲೀಸ್ ಠಾಣೆ ಮೆಟ್ಟಿಲೇರುವ ಹಂತ ತಲುಪಿದ್ರೆ ಖಂಡಿತ ಆ ಸಂಸಾರ ಬೀದಿಪಾಲು ಎಂಬುದರಲ್ಲಿ ಕಿಂಚಿತ್ತು ಅನುಮಾನವಿಲ್ಲ. ಸದ್ಯ ಇದೇ ರೀತಿ ಇಲ್ಲೊಂದು ಘೋರ ದುರಂತ ನಡೆದಿದ್ದು, ತಂದೆ-ತಾಯಿ ಜಗಳದಿಂದ (Husband Murder Wife ) ಇಂದು ಮಕ್ಕಳು ಅನಾಥರಾಗಿದ್ದಾರೆ.

ಆರ್ಥಿಕ, ಆರೋಗ್ಯ ಸಮಸ್ಯೆ, ಮನಸ್ತಾಪ, ಅನುಮಾನ, ಅನೈತಿಕ ಸಂಬಂಧ ಹೀಗೆ ನಾನಾ ವಿಷಯಗಳಿಗೆ ಗಂಡ-ಹೆಂಡತಿ ಮಧ್ಯೆ ವಿರಸ ಉಂಟಾಗಿ, ದೊಡ್ಡ ಜಟಾಪಟಿಗೆ ಕಾರಣವಾಗುತ್ತದೆ. ಇಂತಹ ಪ್ರಕರಣಗಳು ಆಗಾಗ್ಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗುವುದು, ಸುದ್ದಿಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ನಾವೆಲ್ಲ ನೋಡಿದ್ದೇವೆ. ಕೆಲವೊಂದು ಜಗಳಗಳು ಮನೆಯ ಹಿರಿಯರ ಮಧ್ಯಸ್ಥಿಕೆ, ಉಪಸ್ಥಿತಿಯಿಂದ ಬಗೆಹರಿದ ನಿದರ್ಶನಗಳು ಸಾಕಷ್ಟಿವೆ. ಆದ್ರೆ, ಇನ್ನೂ ಕೆಲವು ಘಟನೆಗಳಲ್ಲಿ ಯಾರೇ ಬಂದರೂ, ಎಷ್ಟೇ ಬುದ್ಧಿವಾದ ಹೇಳಿದ್ರೂ ಸಹ ಅದಕ್ಕೆ ಕಿಂಚಿತ್ತು ಆಸ್ಪದ, ಗೌರವ ಕೊಡದ ದಂಪತಿಗಳು, ಅಂತಿಮವಾಗಿ ಸಾವಿನಲ್ಲಿ ತಮ್ಮ ಕಲಹಕ್ಕೆ ತೆರೆ ಎಳೆಯುತ್ತಾರೆ. ಸದ್ಯ ಈ ದುರ್ಘಟನೆ ಕೂಡ ಇದೇ ಸಾಲಿಗೆ ಸೇರಿದೆ ಎಂಬುದೇ ವಿಷಾದ.

ಏನಿದು ಪ್ರಕರಣ?

ಹೈದರಾಬಾದ್​ನ ರಾಜೇಂದ್ರ ನಗರದ ಹೈದರ್ ಶಾಕೋಟ್​ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದಿಂದ ಮಧ್ಯರಾತ್ರಿ ಮಲಗಿದ್ದ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆ ಮಾಡಿ, ಇದೀಗ ಜೈಲುಪಾಲಾಗಿದ್ದಾನೆ. ಈ ಘಟನೆ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದ್ದು, ಭಯಭೀತರಾಗುವಂತೆ ಮಾಡಿದೆ. ಪೊಲೀಸರ ಪ್ರಕಾರ, ಅಪರಾಧಿ ಶ್ರೀನಿವಾಸ್ ಶಾಕೋಟ್‌ನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಎಲ್ಲರಂತೆ ಆರಂಭದಲ್ಲಿ ಚೆನ್ನಾಗಿದ್ದ ದಂಪತಿಗಳು ತುಂಬಾ ಅನ್ಯೋನ್ಯವಾಗಿದ್ದರು. ಮಕ್ಕಳು ಜನಿಸಿದ ನಂತರ ಆರ್ಥಿಕ ಸಮಸ್ಯೆಗಳು ಕಾಡಲಾರಂಭಿಸಿತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಕೆಲಕಾಲ ಕುಡಿತದ ಚಟಕ್ಕೆ ದಾಸನದ. ಹಣಕ್ಕಾಗಿ ಪತ್ನಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ. ಈ ಕಾರಣದಿಂದ ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿತ್ತು. ಪ್ರತಿ ಬಾರಿ ಹಿರಿಯರು ಮತ್ತು ಸ್ಥಳೀಯರು ಮಧ್ಯಪ್ರವೇಶಿಸಿ ಪತಿ-ಪತ್ನಿಯನ್ನು ಸಮಾಧಾನ ಮಾಡಿ ಹೋಗುತ್ತಿದ್ದರು. ಆದ್ರೆ, ಇದ್ಯಾವುದು ಪ್ರಯೋಜನ ಕಾಣಲಿಲ್ಲ. ಮತ್ತೊಂದೆಡೆ ಶ್ರೀನಿವಾಸ್ ತನ್ನ ಪತ್ನಿಗೆ ಯಾವುದೋ ರೀತಿಯಲ್ಲಿ ಚಿತ್ರಹಿಂಸೆ ನೀಡಲಾರಂಭಿಸಿದ. ಪತಿಯ ಚಿತ್ರಹಿಂಸೆ ತಾಳಲಾರದೆ ಪತ್ನಿ ಹಲವು ಬಾರಿ ಪೊಲೀಸರಿಗೂ ದೂರು ನೀಡಿದ್ದಳು.

ಮಕ್ಕಳು ಕಣ್ಣೀರು

ಪತ್ನಿ ದೂರಿನನ್ವಯ ಪೊಲೀಸರು ಶ್ರೀನಿವಾಸ್​ನನ್ನು ಕೌನ್ಸೆಲಿಂಗ್ ಮಾಡಿ ಮನೆಗೆ ಕಳುಹಿಸಿದ್ದರು. ಇಷ್ಟಾದರೂ ಪತಿಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಪದೇ ಪದೇ ತನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರಿಂದ ಶ್ರೀನಿವಾಸ್ ಪತ್ನಿ ಮೇಲೆ ತೀವ್ರ ಕೆರಳಿದ್ದ. ಇದೇ ವಿಷಯಕ್ಕೆ ಸೋಮವಾರ (ಅ.07) ರಾತ್ರಿ ಮನೆಯಲ್ಲಿ ಮಲಗಿದ್ದ ಹೆಂಡತಿಯ ತಲೆಗೆ ಬಲವಾಗಿ ಸುತ್ತಿಗೆಯಿಂದ ಹೊಡೆದಿದ್ದಾನೆ. ಆಕೆ ಸಾವಿಗೀಡಾಗಿದ್ದರ ಬಗ್ಗೆ ಖಚಿತ ಪಡಿಸಿಕೊಂಡ ನಂತರ ಮಕ್ಕಳೊಂದಿಗೆ ನೇರವಾಗಿ ಪೊಲೀಸ್​ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಸಾಕ್ಷ್ಯ ಸಂಗ್ರಹಿಸಿ, ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಪ್ರಕರಣ ದಾಖಲು

ಹತ್ಯೆ ಮಾಡಿದ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಒಂದೆಡೆ ತಾಯಿ ಸಾವನ್ನಪ್ಪಿದ್ದರೆ, ತಂದೆ ಜೈಲುಪಾಲಾಗಿದ್ದಾರೆ. ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳು ಇದೀಗ ತಬ್ಬಲಿಗಳಾಗಿರುವುದು ಕುಟುಂಬಸ್ಥರು ಮತ್ತು ಸ್ಥಳೀಯರಲ್ಲಿ ಕಣ್ಣೀರು ತರಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net