

ಹರಿಯಾಣ: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತನ್ನು ನಮ್ಮ ಹಿರಿಯರು ಸುಮ್ಮನೇ ಹೇಳಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಪತಿ-ಪತ್ನಿ ನಡುವೆ ಕ್ಷುಲಕ ಕಾರಣಕ್ಕೆ ಜಗಳಗಳಾಗುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ಕೆಲವೊಮ್ಮೆ ಕೊಲೆಗಳು ನಡೆದಿವೆ. ಇದೀಗ ಮೊಬೈಲ್ ಹಾಟ್ಸ್ಪಾಟ್ ಆನ್ ಮಾಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಹೆಂಡತಿಯನ್ನು ಕೊಲೆ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಹರಿಯಾಣದ ರೋಹ್ಟಕ್ನಲ್ಲಿ ನಡೆದಿದೆ.
ಹರಿಯಾಣದ ರೋಹ್ಟಕ್ನ ಮದೀನಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ರೇಖಾ ಎಂದು ಗುರುತಿಸಲಾಗಿದೆ. ಈಕೆಯ ಪತಿ ಅಜಯ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಜುಲೈ 30ರಂದು ಅಜಯ್ ಮೊಬೈಲ್ ಬಳಸುವಾಗ ಡೇಟಾ ಖಾಲಿಯಾಗಿದೆ. ತನ್ನ ಮೊಬೈಲ್ನಲ್ಲಿ ಡೇಟಾ ಖಾಲಿಯಾಗಿದ್ದು, ಹಾಟ್ಸ್ಪಾಟ್ ಆನ್ ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಪತ್ನಿ ಕೂಡ ತನ್ನ ಮೊಬೈಲ್ನಲ್ಲಿ ಕಡಿಮೆ ಡೇಟಾ ಇದ್ದು ಆನ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.
ಪತ್ನಿಯ ಮಾತನ್ನು ಕೇಳಿ ಕುಪಿತಗೊಂಡ ಅಜಯ್ ಆಕೆಯ ಜೊತೆ ಜಗಳವಾಡಲು ಶುರು ಮಾಡಿದ್ದಾನೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚೂಪಾದ ಆಯುಧದೊಂದಿಗೆ ಪತ್ನಿಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮೃತ ರೇಖಾ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ ತಲೆಮಾರಿಸಿಕೊಂಡಿದ್ದ ಅಜಯ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ್ಧಾಗಿ ತಪ್ಪೊಪ್ಪಿಕೊಂಡಿದ್ದಾನೆ. ಚಾರ್ಜ್ಶೀಟ್ ಸಿದ್ದಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.