

ಬೆಂಗಳೂರು: ತನ್ನ ಪತಿ ದಾಂಪತ್ಯದ ರಹಸ್ಯಗಳನ್ನು ತನ್ನ ಸ್ನೇಹಿತರೊಂದಿಗೆ ಚರ್ಚಿಸುತ್ತಾನೆ ಹಾಗೂ ಸ್ನೇಹಿತರೊಂದಿಗೆ ದೈಹಿಕ ಸಂಬಂಧ ಹೊಂದುವಂತೇ ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿದ ಪತ್ನಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾಳೆ.
೪೨ ವರ್ಷದ ಮಹಿಳೆಯೊಬ್ಬರು ನೀಡಿರುವ ದೂರಿನನ್ವಯ ಆಕೆಯ ಪತಿಯ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಹಾಗೂ ಆರೋಪಿ ಸುಧೀರ್‌ಪೈಗೆ ೨೦೦೭ರಲ್ಲಿ ಹಿರಿಯರ ನಿಶ್ಚಯದಂತೆ ಮದುವೆಯಾಗಿತ್ತು. ದಂಪತಿಗೆ ೧೧ ವರ್ಷದ ಮಗ ಹಾಗೂ ೧೦ ವರ್ಷದ ಮಗಳಿದ್ದು, ಇಬ್ಬರೂ ಸಹ ಬೆಂಗಳೂರಿನಲ್ಲಿ ವಾಸವಿದ್ದರು. ಆದರೆ ಅಚಾನಕ್ಕಾಗಿ ಗಂಡನ ಮೊಬೈಲ್‌ನಲ್ಲಿದ್ದ ವಾಟ್ಸ್‌ಆ್ಯಪ್ ಚಾಟ್ ಪರಿಶೀಲಿಸಿದಾಗ, ಆತ ತಮ್ಮಿಬ್ಬರ ದೈಹಿಕ ಸಂಬಂಧದ ಕುರಿತು ತನ್ನ ಸ್ನೇಹಿತರೊಂದಿಗೆ ಮಾತನಾಡಿರುವುದು, ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಚರ್ಚಿಸಿರುವುದು ಪತ್ತೆಯಾಗಿತ್ತು. ಅದರ ಬಗ್ಗೆ ಪ್ರಶ್ನಿಸಿದಾಗ ಆರೋಪಿಯು ‘ನಿನಗೆ ನಿನ್ನ ಮಕ್ಕಳಿಗೆ ಜೀವನಾಂಶ ಕೊಡುವುದಿಲ್ಲವೆಂದು’ ಗಲಾಟೆ ಮಾಡಿ, ಸಾಯಿಸುವುದಾಗಿ ಬೆದರಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದಾದ ನಂತರವೂ ಸಹ ಮಹಿಳೆಯರ ಪಾಲಕರು ಹಾಗೂ ಹಿರಿಯರ ಸಮ್ಮುಖದಲ್ಲಿ ಸಂಧಾನ ಮಾಡಲಾಗಿತ್ತು. ದಂಪತಿ ಬಳ್ಳಾರಿ ರಸ್ತೆ ಅಮೃತಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಆದರೆ ಕಳೆದ ಕೆಲ ತಿಂಗಳಿಂದ ಗಂಡ ತನ್ನ ಸ್ನೇಹಿತ ಜತೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸುತ್ತಿದ್ದಾನೆ ಎಂದು ನೊಂದ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ. ಸದ್ಯ ನೊಂದ ಮಹಿಳೆಯ ದೂರಿನನ್ವಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.