ನರ ಸಮಸ್ಯೆಯಿಂದ 9 ತಿಂಗಳಿಂದ ಕೋಮಾದಲ್ಲಿರುವ ಪತಿ : ಪತಿಯ ಬ್ಯಾಂಕ್ ಖಾತೆ ನಿರ್ವಹಿಸಲು ಅನುಮತಿ

highcourt
Published on

ಬೆಂಗಳೂರು: ನರ ಸಮಸ್ಯೆಗೆ ತುತ್ತಾಗಿರುವ ಪತಿ ಕಳೆದ ಒಂಬತ್ತು ತಿಂಗಳಿಂದ ಕೋಮಾ ಸ್ಥಿತಿಯಲ್ಲಿರುವುದರಿಂದ ಚಿಕಿತ್ಸೆ ಮತ್ತು ಕುಟುಂಬ ನಿರ್ವಹಣೆಗೆ ಅವರ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ಸಲುವಾಗಿ ಪತ್ನಿಯನ್ನು ಪೋಷಕಿಯನ್ನಾಗಿ ಹೈಕೋರ್ಟ್ ನೇಮಕ ಮಾಡಿದೆ.

ಅನಾರೋಗ್ಯ ಪೀಡಿತರಾಗಿರುವ ಪತಿಯ ಬ್ಯಾಂಕ್ ಖಾತೆಗಳ ನಿರ್ವಹಣೆ ಕೋರಿ ಅವರ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರರ ಪತಿಯ ಪರಿಸ್ಥಿತಿ ಅರ್ಥ ಮಾಡಿಕೊಂಡು ಅವರು ನಿರ್ವಹಿಸುತ್ತಿದ್ದ ರೀತಿಯಲ್ಲಿಯೇ ಅವರ ಪತ್ನಿ ಬ್ಯಾಂಕ್ ಖಾತೆ ನಿರ್ವಹಣೆ ಮುಂದುವರಿಸಲು ಅನುಮತಿ ನೀಡಲಾಗಿದೆ. ಪತ್ನಿಯನ್ನು ಪತಿಗೆ ಪೋಷಕಿಯನ್ನಾಗಿ ನೇಮಕ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಬೆಂಗಳೂರು ಮತ್ತು ಶಿವಮೊಗ್ಗದಲ್ಲಿನ ಶಾಖೆ) ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳು ಪತಿಯ ಚಿಕಿತ್ಸೆ ಮತ್ತು ಕುಟುಂಬದ ನಿರ್ವಹಣೆಗೆ ಖಾತೆಯಿಂದ ಹಣ ತೆಗೆದುಕೊಳ್ಳಲು ಪತ್ನಿಗೆ ಅನುಮತಿಸಬೇಕು. ಪ್ರತಿವಾದಿ ಬ್ಯಾಂಕ್‌ಗಳು ವಿಳಂಬ ಮಾಡದೆ ವ್ಯವಹರಿಸಲು ಅನುಮತಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

2024ರ ಜೂ.23ರಿಂದ ಪತಿಯು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ನ.29ರಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನರ ವಿಜ್ಞಾನ ವಿಭಾಗವು ಅರ್ಜಿದಾರರ ಪತಿಯು ಗ್ವಿಯೆನ್ ಬ್ಯಾರೆ ಸಿಂಡ್ರೋಮ್ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರಿಸಬೇಕಿದೆ ಎಂದು ವರದಿ ನೀಡಿದೆ. 2025ರ ಫೆ .22ರಿಂದ ಮಾ.18ರವರೆಗೆ ಪತಿಯನ್ನು ಐಸಿಯುನಲ್ಲಿ ಇರಿಸಲಾಗಿದ್ದು, ಅವರಿಗೆ ವೆಂಟಿಲೇಟರ್ ಅಳವಡಿಕೆ ಶಾಶ್ವತವಾಗಿದೆ.

ಇದರಿಂದ ಚಿಕಿತ್ಸೆ ಮತ್ತು ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿರುವುದರಿಂದ ಪತಿಯ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಅನುಮತಿ ನೀಡಬೇಕು ಎಂದು ಪತ್ನಿ ಸಂಬಂಧಿತ ಬ್ಯಾಂಕ್‌ಗಳಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಬ್ಯಾಂಕ್‌ಗಳು ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರು ನಿರ್ದೇಶನ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರ್ಕಾರ ಮತ್ತು ಸಂಬಂಧಿತ ಬ್ಯಾಂಕ್‌ಗಳು ನ್ಯಾಯಾಲಯದ ನಿರ್ದೇಶನಕ್ಕೆ ತಲೆಬಾಗುವುದಾಗಿ ತಿಳಿಸಿವೆ. ವೈದ್ಯಕೀಯ ವರದಿಗಳನ್ನು ಪರಿಗಣಿಸಿ ನ್ಯಾಯಾಲಯವು ಪತ್ನಿಗೆ ಬ್ಯಾಂಕ್ ಖಾತೆ ನಿರ್ವಹಿಸಲು ಅನುಮತಿಸಿ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net