ವಿಹಾರಕ್ಕೆಂದು ಕುಟುಂಬವನ್ನು ಕರೆದೊಯ್ದ, ಆಮೇಲೆ ನಡೆದದ್ದು ಘನಘೋರ!

gangrape
Published on

ತಿರುವನಂತಪುರ: ವಿಹಾರಕ್ಕೆಂದು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದೊಯ್ಡ ವ್ಯಕ್ತಿಯೊಬ್ಬ, ನಂತರ ಪತ್ನಿಗೆ ಬಲವಂತವಾಗಿ ಮದ್ಯ ಕುಡಿಸಿದ. ಹಿರಿಯ ಮಗನೆದುರೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲು ತನ್ನ ನಾಲ್ವರು ಸ್ನೇಹಿತರಿಗೆ ಸಹಕರಿಸಿದ!

ಈ ಬಗ್ಗೆ 25 ವರ್ಷದ ಸಂತ್ರಸ್ತೆ ದಾಖಲಿಸಿರುವ ದೂರಿನನ್ವಯ ಕೇರಳದ ತಿರುವನಂತಪುರ ಬಳಿಯ ಕಡಿನಾಕುಲಂ ಠಾಣೆ ಪೊಲೀಸರು ಆಕೆಯ ಪತಿ ಹಾಗೂ ಆತನ ನಾಲ್ವರು ಸ್ನೇಹಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋವಿಡ್​-19 ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಗೇ ಸೀಮಿತಗೊಂಡಿದ್ದ ಸಂತ್ರಸ್ತೆ ಪತಿ ತನ್ನನ್ನು ಹಾಗೂ ಮಕ್ಕಳನ್ನು ಪುತ್ತುಚುರಿಚಿಗೆ ವಿಹಾರಕ್ಕೆ ಕರೆದೊಯ್ಯುವುದಾಗಿ ಹೇಳಿದಾಗ ಆನಂದತುಂದಿಲಳಾಗಿದ್ದಳು. ಅದರಂತೆ ಪಾಲಕರ ಜತೆ ವಿಹರಿಸಿದ್ದ ಮಕ್ಕಳ ಸಾಕಷ್ಟು ನಲಿದಾಡಿದ್ದರು. ಆನಂತರದಲ್ಲಿ ಪತಿ ಹತ್ತಿರದಲ್ಲೇ ಇದ್ದ ತನ್ನ ಸ್ನೇಹಿತನ ಮನೆಗೆ ಪತ್ನಿ ಹಾಗೂ ಮಕ್ಕಳನ್ನು ಕರೆದೊಯ್ದಿದ್ದ.

ಅಲ್ಲಿ ಪತ್ನಿಗೆ ಬಲವಂತವಾಗಿ ಮದ್ಯ ಕುಡಿಸಿದ ಆತ, ತಮ್ಮ 5 ವರ್ಷದ ಹಿರಿಯ ಪುತ್ರನೆದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲು ನಾಲ್ವರು ಸ್ನೇಹಿತರಿಗೆ ಸಹಕರಿಸಿದ. ಅತ್ಯಾಚಾರದ ಬಗ್ಗೆ ಯಾರ ಬಳಿಯಾದರೂ ಬಾಯ್ಬಿಟ್ಟರೆ ಅಥವಾ ಪೊಲೀಸರಿಗೆ ದೂರು ಕೊಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದ.

ಅದು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದ ಆಕೆ ಪಾನಮತ್ತ ಸ್ಥಿತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಯುವಕನೊಬ್ಬ ಆಕೆಯ ನೆರವಿಗೆ ಬಂದ. ತನ್ನ ವಾಹನದಲ್ಲಿ ಆಕೆಯನ್ನು ಆಕೆಯ ಮನೆಗೆ ತಲುಪಿಸಿ ಮಾನವೀಯತೆ ಮೆರೆದ.

ಮರುದಿನ ಪೊಲೀಸ್​ ಠಾಣೆಗೆ ತೆರಳಿದ ಸಂತ್ರಸ್ತೆ, ತನ್ನ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಗುಪ್ತಾಂಗಗಳು ಸೇರಿ ದೇಹದ ನಾನಾ ಭಾಗಗಳಲ್ಲಿ ಸಿಗರೇಟ್​ನಿಂದ ಸುಟ್ಟು ಗಾಯಗೊಳಿಸಲಾಗಿದೆ ಎಂದು ತಾನು ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಈಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಪರೀಕ್ಷೆಯ ಬಳಿಕ ಒಂದು ದಿನ ಅಲ್ಲಿಯೇ ಚಿಕಿತ್ಸೆ ನೀಡಿದ ವೈದ್ಯರು ಆಕೆಯನ್ನು ಮನೆಗೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net