

ಲಖೌನ: ಪತಿ ಮತ್ತು ಮಾವ ಸೇರಿ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ನಡೆಸಿ ಆಕೆಯ ಬಾಯಿಗೆ ಕೀಟನಾಶಕವನ್ನು ಸರಿದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಹಾಪುರ ಜಿಲ್ಲೆಯಲ್ಲಿ ನಡೆದಿದೆ.
ಪತಿ ಮತ್ತು ಮಾವ ಸೇರಿ ಮಹಿಳೆಗೆ ಥಳಿಸಿದ್ದಲ್ಲದೆ, ಆಕೆಯನ್ನು ಸಾಯಿಸುವ ಉದ್ದೇಶದಿಂದ ಬೆಳೆಗೆ ಬಳಸುವ ಕೀಟನಾಶಕವನ್ನು ಆಕೆಯ ಬಾಯಿಗೆ ಸುರಿದಿದ್ದಾರೆ. ಈ ವೇಳೆ ಸಹೋದರ ವಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ಆತನಿಗೂ ಥಳಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಪುರ್ ಜಿಲ್ಲೆಯ ಗರ್ಮುಕ್ತೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಗದ್ಪುರ ಗ್ರಾಮದ ನಿವಾಸಿ ಶೀಲಾ, ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಫಿರೋಜ್‌ಪುರ ಗ್ರಾಮದ ಸುರೇಂದ್ರ ಎಂಬಾತನನ್ನು ವಿವಾಹವಾಗಿದ್ದರು. ಮಂಗಳವಾರ ರಾತ್ರಿ 8.30ರ ಸುಮಾರಿಗೆ ಶೀಲಾಳ ಪೋಷಕರಿಗೆ ಅತ್ತೆಯಂದಿರು ಥಳಿಸುವ ಮಾಹಿತಿ ಲಭಿಸಿತ್ತು.
ಮಾಹಿತಿ ತಿಳಿಯುತ್ತಿದ್ದಂತೆ ಶೀಲಾಳ ಸಹೋದರ ಜಯಪ್ರಕಾಶ್ ತನ್ನ ಸ್ನೇಹಿತನ ಜೊತೆ ನೇರವಾಗಿ ಆಕೆಯ ಮನೆಗೆ ಬಂದರು. ಈ ವೇಳೆ ಸಹೋದರ ಮುಂದೆಯೇ ಪತಿ ಹಾಗೂ ಮಾವ ಸೇರಿ ಮಹಿಳೆಯ ಕೈಕಾಲು ಕಟ್ಟಿ ಥಳಿಸಿದ್ದಾರೆ. ಇದನ್ನು ಕಂಡ ಸಹೋದರ ತಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತನ ಮೇಲೂ ಹೆಲ್ಲೆ ಮಾಡಿದ್ದಾರೆ.
ಅಲ್ಲದೇ ಸಹೋದರನ ಸಮ್ಮುಖದಲ್ಲಿಯೇ ಆರೋಪಿಗಳಿಬ್ಬರೂ ಬೆಳೆಗೆ ಬಳಸುವ ಕೀಟನಾಶಕವನ್ನು ಆಕೆಯ ಬಾಯಿಗೆ ಬಲವಂತವಾಗಿ ಸುರಿದಿದ್ದಾರೆ. ಪರಿಣಾಮ ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೂಡಲೇ ಮಹಿಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರಿ ಇನ್ಸ್‌ಪೆಕ್ಟರ್ ಹರೀಶ್ ವರ್ಧನ್ ಸಿಂಗ್ ಹೇಳಿದ್ದಾರೆ.