ಪತಿ ಸುಖವಾಗಿರಲೆಂದು ಜಾಮೀನು ಕೊಡಿಸಿದ ಪತ್ನಿ: ಗುಂಡಿಕ್ಕಿ ಆಕೆಯ ಪ್ರಾಣ ತೆಗೆದ ಗಂಡ..

husband wife1
ಸಾಂದರ್ಭಿಕ ಚಿತ್ರ
Published on

ಬರೇಲಿ: ಜೈಲಿನಿಂದ ಹೊರತಂದ ಹೆಂಡತಿಯನ್ನೇ ಗಂಡ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬರೇಲಿ ಬಳಿ ನಡೆದಿದೆ.

ಆರೋಪಿಯನ್ನು ಕೃಷ್ಣಪಾಲ್ ಲೋಧಿ ಎಂದು ಗುರುತಿಸಲಾಗಿದ್ದು, ಈತ ತನ್ನ ಪತ್ನಿ ಪೂಜಾಗೆ ಹಲವು ಬಾರಿ ಗುಂಡು ಹಾರಿಸಿದ್ದಲ್ಲದೆ, ಆಕೆಯ ಸ್ನೇಹಿತ ಮುನ್ನಾ ಎಂಬಾತನ ಮೇಲೂ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಪೂಜಾ ಸಾವಿಗೀಡಾಗಿದ್ದು, ಮುನ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 2012ರಲ್ಲಿ ತಮ್ಮ ಎರಡೂ ಕುಟುಂಬದವರ ಅಪೇಕ್ಷೆಗೆ ವಿರುದ್ಧವಾಗಿ ಆರೋಪಿಯು ಮತ್ತು ಪೂಜಾ ರಹಸ್ಯವಾಗಿ ವಿವಾಹವಾಗಿದ್ದು, ತನ್ನ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಪೂಜಾ ಬ್ಯೂಟಿ ಸಲೂನ್ ನಡೆಸುತ್ತಿದ್ದಳು. ಈ ಹಿಂದೆ ಕೃಷ್ಣಪಾಲ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದು, ಅವಳು ಅವನನ್ನು ಒಂದೆರಡು ವಾರಗಳ ಹಿಂದೆ ಜಾಮೀನಿನ ಮೇಲೆ ಹೊರತರುವಲ್ಲಿ ಯಶಸ್ವಿಯಾಗಿದ್ದಳು.

ಇದನ್ನೂ ಓದಿ: ಈ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಕುಡಿದ ಅಮಲಿನಲ್ಲಿ ಕೃಷ್ಣಪಾಲ್ ಮನೆಗೆ ನುಗ್ಗಿ ತಮ್ಮ ಅಪ್ರಾಪ್ತ ಮಕ್ಕಳ ಮುಂದೆ ಪೂಜಾಳ ಮೇಲೆ ಹರಿಹಾಯ್ದಿದ್ದಾನೆ. ಆಕೆ ಆತನಿಗೆ ವಿರೋಧ ವ್ಯಕ್ತಪಡಿಸಿದಾಗ ಆತ ಕೋಪಗೊಂಡು ದೇಶ ನಿರ್ಮಿತ ರಿವಾಲ್ವರ್ ತೆಗೆದುಕೊಂಡಿದ್ದಾನೆ. ಈ ವೇಳೆ ಪೂಜಾ ಭಯಭೀತಳಾಗಿ ಮನೆಯಿಂದ ಓಡಿಹೋದರೂ ಆತ ಬೆನ್ನಟ್ಟಿ ಆಕೆಗೆ ಗುಂಡು ಹಾರಿಸಿದ್ದಾನೆ.

ಪೊಲೀಸರು ಪೂಜಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆತ ತನ್ನ ಪತ್ನಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಭಾವಿಸಿ ಗುಂಡು ಹಾರಿಸಿರುವುದಾಗಿ ಹೇಳಿದ್ದಾನೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net