ಪತ್ನಿಯನ್ನು ಕೊಂದ ಪತಿ ಬಂಧನ

Published on
  • ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಟ್ಟಾಗಿದ್ದ ಗಂಡ
    *ಯಾರೊಂದಿಗೆ ಓಡಿ ಹೋಗಿದ್ದಾಳೆಂದು ಬಿಂಬಿಸಲು ಯತ್ನ

ರಾಮನಗರ
ಮಾಗಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಪತ್ನಿಯನ್ನು ಕೊಲೆ ಮಾಡಿ, ಬಳಿಕ ಆರಾಮಾಗಿದ್ದ ಪತಿ ಹಾಗೂ ಆತನ ಸ್ನೇಹಿತರನ್ನು ಸಿಪಿಐ ಗಿರಿರಾಜ್​ ನೇತೃತ್ವದ ತಂಡ ಬಂಧಿಸಿ ಜೈಲಿಗಟ್ಟಿದೆ.


ಮಾಗಡಿಯ ಕುರುಬರ ಪಾಳ್ಯದ ಉಮೇಶ್​ ಹಾಗೂ ಮೂಲತಃ ರಾಯಚೂರಿನ ನಿವಾಸಿ, ತುಮಕೂರಿನಲ್ಲಿ ವಾಸವಿದ್ದ ದಿವ್ಯಾ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಈ ಮದುವೆ ಹೆಚ್ಚು ದಿನ ಉಳಿಯಲಿಲ್ಲ. ಗಂಡನನ್ನು ತೊರೆದು ಮುನಿರಾಜು ಎಂಬಾತನೊಂದಿಗೆ ಬೆಂಗಳೂರಿಗೆ ಹೋಗಿ ದಿವ್ಯಾ ಜೀವನ ಕಟ್ಟ್ಟಿಕೊಂಡಿದ್ದಳು.

ಕರೊನಾ ನಂತರ 2021ರಲ್ಲಿ ಮುನಿರಾಜು ಜತೆಗಿನ ಸಂಬಂಧವನ್ನೂ ಕಡಿದುಕೊಂಡಿದ್ದ ಈಕೆ, ನೆಲಮಂಗಲ ಬಳಿಯ ಮಾದನಾಯಕನಹಳ್ಳಿಯಲ್ಲಿ ಮಗುವಿನೊಂದಿಗೆ ಜೀವನ ನಡೆಸುತ್ತಿದ್ದಳು. ಮೊದಲ ಗಂಡ ಉಮೇಶ್​ನಿಂದ ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದ ದಿವ್ಯಾ, ಪುನಃ ಮುನಿರಾಜುವಿನೊಂದಿಗಿನ ಸಂಬಂಧ ಮುಂದುವರಿಸಿದ್ದಳು.


ಆದರೆ ಈ ಸಂಬಂಧ ಕಳೆದುಕೊಳ್ಳುವಂತೆ ಉಮೇಶ್​ ಪೀಡಿಸುತ್ತಿದ್ದ. ಆದರೂ ಇದಕ್ಕೆ ಪತ್ನಿ ಒಪ್ಪದಿದ್ದಕ್ಕೆ ಕೊಲೆ ಮಾಡಲು ಸಂಚು ರೂಪಿಸಿದ್ದ.

ಹೆಸರು ಡಿಲೀಟ್​ ಮಾಡಿಸುವ ನೆಪ


ಆಧಾರ್​ ಕಾರ್ಡ್​ ಮತ್ತು ರೇಷನ್​ ಕಾರ್ಡ್​ನಲ್ಲಿ ಹೆಸರು ಡಿಲೀಟ್​ ಮಾಡಿಸಿದರೆ ವಿಚ್ಛೇದನ ಅರ್ಜಿಗೆ ಸಹಿ ಹಾಕುತ್ತೇನೆ ಎಂದು ದಿವ್ಯಾಳನ್ನು ನಂಬಿಸಿದ್ದ ಉಮೇಶ್​, ಆ.12ರಂದು ಆಕೆಯನ್ನು ಮಾದನಾಯಕನಹಳ್ಳಿಯಿಂದ ಕರೆತರಲು ಹೋಗಿದ್ದ. ಆದರೆ, ಅನುಮಾನದಿಂದ ಸ್ನೇಹಿತೆ ಜತೆಗೆ ಬಾಡಿಗೆ ಕಾರಿನಲ್ಲಿ ದಿವ್ಯಾ ಮಾಗಡಿಗೆ ಬಂದಿದ್ದಳು. ಹೆಸರು ಡಿಲೀಟ್​ ಪ್ರಕ್ರಿಯೆ ತಡವಾಗಿದೆ. ಅಷ್ಟರಲ್ಲಿ ಸ್ನೇಹಿತೆಗೆ ಮನೆಯಿಂದ ಕರೆ ಬಂದಿದ್ದರಿಂದ ಆಕೆಯನ್ನು ಕಾರಿನಲ್ಲಿ ವಾಪಾಸ್​ ಕಳುಹಿಸಿಕೊಟ್ಟಿದ್ದಳು. ಇದೇ ಅವಕಾಶವನ್ನು ಬಳಕೆ ಮಾಡಿಕೊಂಡು ಉಮೇಶ್​, ಪೂರ್ವಯೋಜನೆಯಂತೆ ಸಂಜೆ ವೇಳೆಗೆ ಮಾಗಡಿಯ ಬಳಿ ಹೂಜಗಲ್​ ಬೆಟ್ಟದ ಬಸವಣ್ಣನ ದೇವಸ್ಥಾನಕ್ಕೆ ಪೂಜೆ ಮಾಡಿಸುವ ನೆಪದಲ್ಲಿ ದಿವ್ಯಾಳನ್ನು ಕರೆತಂದಿದ್ದ. ಅಲ್ಲಿ ಸಹಚರರಾದ ಭರತ್​, ಶಶಾಂಕ್​, ರೋಹಿತ್​ ಮತ್ತು ಕಿರಣ್​ ಜತೆ ಸೇರಿ ದಿವ್ಯಾಳನ್ನು ಕೊಲೆ ಮಾಡಿದ್ದರು. ನಂತರ ಶವವನ್ನು ಬೈಕ್‌ನಲ್ಲಿ ಕಟ್ಟಿಕೊಂಡು 4 ಕಿಲೋಮೀಟರು ದೂರದ ಚೀಲೂರು ಬೆಟ್ಟದ ತಪ್ಪಲಿಗೆ ಕೊಂಡೊಯ್ಯುದು ಗುಂಡಿ ತೆಗೆದು ಹೂತು ಹಾಕಿ ಪರಾರಿಯಾಗಿದ್ದರು.

ಸ್ನೇಹಿತ ಕೊಟ್ಟ ಸುಳಿವು


ನನ್ನ ಹಾಗೂ ಪತ್ನಿ ಸಂಬಂಧ ಸರಿ ಹೋಗಿದೆ ಎಂದು ಸ್ನೇಹಿತ ಬಾಲರಾಜ್​ನನ್ನು ನಂಬಿಸಿ ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಎಂದು ಹೇಳಿ ಬೈಕ್​ ಪಡೆದಿದ್ದ ಉಮೇಶ್​, ಬೈಕ್​ ವಾಪಾಸ್​ ಮಾಡಲು ಬಂದಾಗ ಒಬ್ಬನೇ ಇದ್ದ್ದುದನ್ನು ಕಂಡ ಬಾಲರಾಜ್​, ದಿವ್ಯಾ ಬಗ್ಗೆ ವಿಚಾರಿಸಿದ್ದ. ಅವಳನ್ನು ಬೆಂಗಳೂರಿಗೆ ಬಸ್​ ಹತ್ತಿಸಿದ್ದೇನೆ ಎಂದು ಸುಳ್ಳು ಹೇಳಿ ಉಮೇಶ್​ ತೆರಳಿದ್ದ. ಆದರೆ ಸ್ನೇಹಿತನ ವರ್ತನೆಯಿಂದ ಅನುಮಾನಗೊಂಡ ಬಾಲರಾಜ್​, ಮಾಗಡಿ ಪೊಲೀಸರಿಗೆ ಮಾಹಿತಿ ನೀಡಿದ. ನಂತರ ಕಾರ್ಯ ಪ್ರವೃತ್ತರಾದ ಗಿರಿರಾಜ್​ ನೇತೃತ್ವದ ತಂಡ ಸ್ಥಳಕ್ಕೆ ಬಂದು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆಯಲಿಲ್ಲ. ಆದರೆ ಉಮೇಶ್​ ಕಾಲ್​ ಡೀಟೆಲ್​ನಲ್ಲಿ ಇತರ ಮೂವರು ಆರೋಪಿಗಳ ಸುಳಿವು ಸಿಕ್ಕಿ, ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದಿವ್ಯಾ ಮೃತ ದೇಹ ಪತ್ತೆ ಆಗಿತ್ತು.

ನಾಪತ್ತೆಯಂತೆ ಬಿಂಬಿಸುವ ಯತ್ನ


ಕೊಲೆ ಮಾಡಿ ಸುಮ್ಮನಾಗದ ಉಮೇಶ್​, ಪತ್ನಿ ದಿವ್ಯಾ ಯಾರೊಂದಿಗೆ ಓಡಿ ಹೋಗಿದ್ದಾಳೆ ಎಂದು ಬಿಂಬಿಸುವ ಯತ್ನವನ್ನು ಮಾಡಿದ್ದ. ದಿವ್ಯಾಳ ಎರಡು ಮೊಬೈಲ್​ಗಳನ್ನು ಆಂಧ್ರಪ್ರದೇಶ ಇಲ್ಲವೇ ಮಹಾರಾಷ್ಟ್ರಕ್ಕೆ ಹೋಗುವ ಲಾರಿಗಳಲ್ಲಿ ಎಸೆಯುವಂತೆ ಸ್ನೇಹಿತರಿಗೆ ಸೂಚಿಸಿದ್ದ. ಇಬ್ಬರು ಸ್ನೇಹಿತರು ಚನ್ನೇನಹಳ್ಳಿ ಬಳಿ ಅನ್​ ಲೋಡ್​ ಮಾಡಿ ನಿಂತಿದ್ದ ಆಂಧ್ರಪ್ರದೇಶದ ಲಾರಿ ಒಂದರಲ್ಲಿ ಎಸೆದು ಹೋಗಿದ್ದರು. ಆದರೆ ಲಾರಿ ಚಾಲಕ ವಿಶ್ರಾಂತಿ ಪಡೆಯುತಿದ್ದುದರಿಂದ ಪ್ರಯಾಣ ವಿಳಂಬವಾಯಿತು ಅಷ್ಟರಲ್ಲಾಗಲೇ ಮೊಬೈಲ್​ಗಳ ಲೊಕೇಷನ್​ ಪತ್ತೆ ಮಾಡಿದ್ದ ಪೊಲೀಸರು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಸ್ನೇಹಿತನೇ ಮಾಸ್ಟರ್ ಮೈಂಡ್

ದಿವ್ಯಾಳನ್ನು ಕೊಲೆ ಮಾಡಲೇಬೇಕು ಎಂದು ಹಠಕ್ಕೆ ಬಿದ್ದಿದ್ದ ಉಮೇಶ್​ಗೆ ಮಾಸ್ಟರ್​ ಮೈಂಡ್​ ಆಗಿ ಕೆಲಸ ಮಾಡಿದವನು ಮತ್ತೊಬ್ಬ ಆರೋಪಿ ಕಿರಣ್​. ಆತ, ಅದಾಗಲೇ ಪತ್ನಿಯನ್ನು ಕೊಲೆ ಮಾಡಿ, ಯಾರೊಂದಿಗೋ ಓಡಿ ಹೋಗಿದ್ದಾಳೆ ಎಂದು ಬಿಂಬಿಸಿ ಆರಾಮಾಗಿದ್ದ. ಆತನೇ ಉಮೇಶ್​ನಿಗೂ ಇದೇ ಐಡಿಯಾ ಕೊಟ್ಟಿದ್ದ. ಅದರಂತೆ ರ್ನಿಜನ ಪ್ರದೇಶದಲ್ಲಿಯೇ ಕೊಲೆ ನಡೆದಿತ್ತು. ಅಲ್ಲಿಯೇ ಮೃತದೇಹವನ್ನು ಹೂತು ಹಾಕಲಾಗಿತ್ತು. ಆದರೆ ಮತ್ತೊಬ್ಬ ಸ್ನೇಹಿತ ನೀಡಿದ ಸುಳಿವು ಇಡೀ ಪ್ರಕರಣವನ್ನು ಬೆಳಕಿಗೆ ತಂದಿತು. ಈ ಪ್ರಕರಣ ತನ್ನ ಪಾಲಿಗೂ ಉರುಳಾಗುತ್ತದೆ ಎನ್ನುವುದನ್ನು ಎಣಿಸದ ಕಿರಣ್​, ವಿಚಾರಣೆ ವೇಳೆ ತಾನೇ ಪೊಲೀಸರಿಗೆ ನೀಡಿದ ಮಾಹಿತಿಯಿಂದ ಆತನ ಪತ್ನಿಯ ಕೊಲೆ ರಹಸ್ಯ ಸುಮಾರು 6 ವರ್ಷಗಳ ನಂತರ ಬೆಳಕಿಗೆ ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net