

ಬೆಂಗಳೂರು: ತಂಗಿಯ ನಿಶ್ಚಿತಾರ್ಥಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಸುಂಕದಕಟ್ಟೆಯ ಸೊಲ್ಲಾಪುರದಮ್ಮದೇವಸ್ಥಾನ ಸಮೀಪದ ನಿವಾಸಿ ಜಯಪ್ರಕಾಶ್ (32) ಬಂಧಿತ. ಫೆ.5ರ ಬೆಳಗ್ಗೆ 9 ಗಂಟೆಗೆ ಪತ್ನಿ ದಿವ್ಯಾಶ್ರೀ (26) ಎಂಬಾಕೆ ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ಮೂಲದ ಜಯಪ್ರಕಾಶ್ ಮತ್ತು ದಿವ್ಯಾಶ್ರೀ 2109ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಸುಂಕದಕಟ್ಟೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಕೇಟರಿಂಗ್ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಜಯಪ್ರಕಾಶ್ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ಮನೆಯಲ್ಲೇ ಇರುತ್ತಿದ್ದ.
ಚಿಕಿತ್ಸಾ ವೆಚ್ಚ, ಮನೆ ಖರ್ಚಿಗೆ ದಿವ್ಯಾಶ್ರೀ ದುಡಿಯಬೇಕಾಗಿತ್ತು. ಆರಂಭದಿಂದಲೂ ದಂಪತಿ ನಡುವೆ ಸಣ್ಣ ವಿಚಾರಗಳಿಗೆ ಜಗಳ-ಗಲಾಟೆಗಳು ನಡೆಯುತ್ತಿದ್ದವು. ಇತ್ತೀಚೆಗೆ ಪತ್ನಿ ಶೀಲ ಶಂಕಿಸಿ ಜಗಳ ಮಾಡುತ್ತಿದ್ದ. ಫೆ.15ರಂದು ಬೆಳಗ್ಗೆ ಜಯಪ್ರಕಾಶ್, ನನ್ನ ತಂಗಿಯ ವಿವಾಹ ನಿಶ್ಚಿತಾರ್ಥಕ್ಕೆ ಬರಲಿಲ್ಲ ಎಂಬ ವಿಷಯ ಪ್ರಸ್ತಾಪಿಸಿ ದಿವ್ಯಾಶ್ರೀ ಜತೆಗೆ ಜಗಳ ಶುರು ಮಾಡಿದ್ದಾನೆ. ವಿಕೋಪಕ್ಕೆ ತಿರುಗಿ ಚಾಕು ತೆಗೆದು ಇರಿಯಲು ಮುಂದಾಗಿದ್ದಾನೆ. ದಿವ್ಯಾಶ್ರೀಯ ಕಾಲಿಗೆ ಚಾಕು ಚುಚ್ಚಿಕೊಂಡಿದೆ.
ಆದರೂ ಬಿಡದೆ ಕೈಗಳಿಂದ ಆಕೆಯ ಮೇಲೆ ಹಲ್ಲೆಗೆ ಮುಂದಾದಾಗ ತಪ್ಪಿಸಿಕೊಂಡು ಸ್ನೇಹಿತರಿಗೆ ಕರೆ ಮಾಡಿದ್ದಳು. ಮನೆ ಬಳಿ ಬಂದ ಸ್ನೇಹಿತರು, ಗಾಯಾಳು ದಿವ್ಯಾಶ್ರೀಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ದಿವ್ಯಾಶ್ರೀ ನೀಡಿದ ದೂರಿನ ಮೇರೆಗೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿ ಜಯಪ್ರಕಾಶ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.