ಸ್ಮಾರ್ಟ್​ಫೋನ್​ನಿಂದ ಸಂಸಾರದಲ್ಲಿ ಅಪಸ್ವರ; ಪತಿ-ಪತ್ನಿ ಮಧುರ ಬಾಂಧವ್ಯಕ್ಕೆ ಅಡ್ಡಿ

Smart phone
Published on

ನವದೆಹಲಿ: ಸ್ಮಾರ್ಟ್​ಫೋನ್​ಗಳ ವಿಪರೀತ ಬಳಕೆ ದಾಂಪತ್ಯ ಸಂಬಂಧದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಸ್ಮಾರ್ಟ್​ಫೋನ್ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದ್ದರೂ , ಅದರ ಮಿತಿಮೀರಿದ ಬಳಕೆಯಿಂದಾಗಿ ಸತಿ-ಪತಿ ಬಾಂಧವ್ಯ ಕೆಡುತ್ತಿದೆ ಎಂದು ಬೆಂಗಳೂರು ಸಹಿತ ದೇಶದ ಹಲವು ಪ್ರಮುಖ ನಗರಗಳಲ್ಲಿ ನಡೆಸಿದ ಸಮೀಕ್ಷೆ ಹೇಳಿದೆ. ಅದರಲ್ಲೂ ಶೇಕಡ 88ರಷ್ಟು ಸಮೀಕ್ಷಿತರು ಸ್ಮಾರ್ಟ್​ಫೋನ್​ಗಳ ಬಳಕೆಯ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ಸಂಘಟಿಸಿದ್ದ ವಿವೋ ಸಂಸ್ಥೆ ಸೋಮವಾರ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ. ಸೈಬರ್​ವಿುೕಡಿಯಾ ರೀಸರ್ಚ್ ಸಂಸ್ಥೆಯೊಂದಿಗೆ ಸೇರಿಕೊಂಡು ‘ಸ್ವಿಚ್ ಆಫ್’ ಶೀರ್ಷಿಕೆಯಡಿ ಈ ಅಧ್ಯಯನ ನಡೆಸಿತ್ತು.

‘ಸ್ಮಾರ್ಟ್​ಫೋನ್​ಗಳು ಮತ್ತು ಮಾನವ ಸಂಬಂಧಗಳ ಮೇಲೆ ಅವುಗಳ ಪರಿಣಾಮಗಳು-2022’ ಎನ್ನುವುದು ಅಧ್ಯಯನದ ವಿಷಯವಾಗಿತ್ತು. ದಾಂಪತ್ಯ ಸಂಗಾತಿಯೊಂದಿಗೆ ಸಮಯ ಕಳೆಯುತ್ತಿರುವಾಗಲೂ ತಾವು ಫೋನ್ ಬಳಸುತ್ತಿರುವುದಾಗಿ ಶೇಕಡ 67 ಜನರು ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಸಂಗಾತಿ ಜತೆ ಸಮಯ ಕಳೆಯಲು ಸಾಧ್ಯ ಇರುವುದಕ್ಕಿಂತಲೂ ಕಡಿಮೆ ವೇಳೆಯನ್ನು ವ್ಯಯಿಸುತ್ತಿರುವುದಾಗಿ ಶೇ.89ರಷ್ಟು ಜನರು ಹೇಳಿದ್ದಾರೆ.

1.5 ತಾಸಷ್ಟೇ ಬಿಡುವು: ಪ್ರತಿ ಸ್ಮಾರ್ಟ್​ಫೋನ್ ಬಳಕೆದಾರರಿಗೆ ದೈನಿಕ 1.5 ಗಂಟೆ ಬಿಡುವಿನ ವೇಳೆ ದೊರೆಯುತ್ತದೆ. ಅವರಲ್ಲಿ ಬಹಳಷ್ಟು ಜನರು ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ವ್ಯವಹಾರಕ್ಕೆ ಹಾಗೂ ವಿರಾಮವಾಗಿ ನಡೆಸುವ ಸಂಭಾಷಣೆ ಅವಧಿ ಬಹುತೇಕ ಒಂದೇ, ಅಂದರೆ ಅಂದಾಜು 2 ಗಂಟೆಯಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ.

ಎಲ್ಲಿ ಸಮೀಕ್ಷೆ?: ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆ ನಗರಗಳ ಒಟ್ಟು 1,000 ಗ್ರಾಹಕರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಗಮನ ಭಂಗ: ಸ್ಮಾರ್ಟ್​ಫೋನ್​ನಿಂದಾಗಿ ತಮ್ಮ ಗಮನ ಆಗಾಗ ಬೇರೆಡೆ ಹೋಗುತ್ತದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 69ರಷ್ಟು ಮಂದಿ ಹೇಳಿದ್ದಾರೆ. ಇದಲ್ಲದೆ, ಜೀವನ ಸಂಗಾತಿಗೆ ಸಾಕಷ್ಟು ಗಮನ ಕೊಡಲಾಗುತ್ತಿಲ್ಲ ಎಂದೂ ಹೇಳಿದ್ದಾರೆ. ಜೀವನ ಸಂಗಾತಿಗಳು ಒಟ್ಟಿಗೆ ಸಮಯ ಕಳೆಯುತ್ತಿದ್ದಾಗ ಸ್ಮಾರ್ಟ್​ಫೋನ್ ರಿಂಗಣದಿಂದಾಗಿ ಗಮನ ಭಂಗವಾಗುತ್ತದೆ ಎಂದವರು ಶೇಕಡ 68 ಮಂದಿ. ಬಿಡುವಿನ ಸಮಯವನ್ನು ಸ್ಮಾರ್ಟ್​ಫೋನ್ ಜತೆ ಕಳೆಯುತ್ತಿದ್ದು, ತಮ್ಮ ವರ್ತನೆಯ ಭಾಗವಾಗಿರುವುದಾಗಿ ಶೇಕಡ 88 ಜನರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ. ಶೇಕಡ 90ರಷ್ಟು ಸಮೀಕ್ಷಿತರಿಗೆ ಸ್ಮಾರ್ಟ್​ಫೋನೇ ವಿರಾಮವಾಗಿರಲು ಸಾಧನವಂತೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net