

ಉತ್ತರಪ್ರದೇಶ: ಕಳೆದುಹೋದ ಮೊಬೈಲ್ಗಾಗಿ(Mobile) ಗಂಡ-ಹೆಂಡತಿ ನಡುವೆ ಪದೇ ಪದೇ ಜಗಳ ನಡೆದಿದ್ದು, ಒಂದೇ ಬುಲೆಟ್ನಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಇದೀಗ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ಉತ್ತರಪ್ರದೇಶದ(Uttarpradesh) ಮೊರಾದಾಬಾದ್‌ನಲ್ಲಿ ಗಂಡ ತನ್ನ ಹೆಂಡತಿಯನ್ನು ತಬ್ಬಿಕೊಂಡು ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಹೆಂಡತಿಗೆ ತಗುಲಿದ ಗುಂಡು ಗಂಡನಿಗೂ ತಗುಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ದಂಪತಿಗಳನ್ನು ಅನೇಕ್ ಪಾಲ್(40) ಮತ್ತು ಆತನ ಪತ್ನಿ ಸುಮನ್ ಪಾಲ್(38) ಎಂದು ಗುರುತಿಸಲಾಗಿದ್ದು, ದಂಪತಿಗಳು ಕಳೆದುಹೋದ ಮೊಬೈಲ್ ಫೋನ್‌ಗಾಗಿ ವಿಪರೀತ ಜಗಳ ಮಾಡುತ್ತಿದ್ದರು. ಜಗಳ ತೀವ್ರವಾದ ಬೆನ್ನಲ್ಲೇ ಗುಂಡು ಹಾರಿಸಿಕೊಂಡು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ವರದಿಯಲ್ಲಿ(Report) ತಿಳಿಸಿದ್ದಾರೆ.
"ಜೂನ್ 13ರ ರಾತ್ರಿ, ಅನೇಕ್ ಪಾಲ್ ತನ್ನ ಮನೆಯಲ್ಲಿ ಎಂದಿನಂತೆ ಪ್ರಾರ್ಥನೆಯನ್ನು ಮುಗಿಸಿದ್ದಾನೆ. ತದನಂತರ ಹೆಂಡತಿಯನ್ನು ತಬ್ಬಿಕೊಂಡ ಅನೇಕ್, ಹಿಂದಿನಿಂದ ಹೆಂಡತಿಗೆ ಗುಂಡು ಹಾರಿಸಿದ್ದಾನೆ. ಗುಂಡು ಮೊದಲು ಹೆಂಡತಿಯ ದೇಹಕ್ಕೆ ನುಗ್ಗಿದೆ, ಬಳಿಕ ಆತನ ದೇಹಕ್ಕೆ ನುಗ್ಗಿದೆ. ದಂಪತಿಗಳು ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದರು, ಕೂಡಲೇ ಸ್ಥಳೀಯರು ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. ಆದ್ರೆ, ಆಸ್ಪತ್ರೆಗೆ ಹೋಗುವ ಮುನ್ನವೇ ದಂಪತಿಗಳು ಸಾವನ್ನಪ್ಪಿದ್ದಾರೆ" ಎಂದು ಮೊರಾದಾಬಾದ್ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಹೇಳಿದ್ದಾರೆ.
ಮೃತ ದಂಪತಿಗಳಿಗೆ ನಾಲ್ಕು ಮಕ್ಕಳಿದ್ದು, ಒಬ್ಬ ಮಗಳು ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಅನೇಕ್ ಪಾಲ್ ಬಳಸಿದ ಬಂದೂಕು ದೇಶ ನಿರ್ಮಿತ ಆಯುಧವಾಗಿತ್ತು!ಅದನ್ನು ಹೇಗೆ ಸಂಗ್ರಹಿಸಲಾಗಿದೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ,(ಏಜೆನ್ಸೀಸ್).