ಇಲಾಖೆ ಅಧಿಕಾರಿಗಳ ತರಾತುರಿ: ಅರಣ್ಯ ಸಚಿವ ಖಂಡ್ರೆ ಅನುಮಾನ !

Eshwar Khandre
Published on

ಬೆಂಗಳೂರು: ಇಲಾಖೆ ಹಿರಿಯ ಅಧಿಕಾರಿಗಳ ಕಾರ್ಯವೈಖರಿಗೆ ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆಗೆ ತೀವ್ರ ಸಿಟ್ಟು ತರಿಸಿದೆ. ಸಚಿವ ಸಂಪುಟದ ಅನುಮೋದೆನಯಿಲ್ಲದೆ ಎಚ್‌ಎಂಟಿ ಪ್ರದೇಶದ 599 ಎಕರೆ ಅರಣ್ಯ ಜಮೀನು ಡಿನೋಟಿಫೈಗೆ ಮುಂದಾಗಿರುವುದು ಖಂಡ್ರೆ ಸಿಟ್ಟಿಗೆ ಕಾರಣ.

ತರಾತುರಿಯಲ್ಲಿ ಸರ್ಕಾರಿ ಆದೇಶ ಮಾಡಿಸಿ, ಸಾವಿರಾರು ಕೋಟಿ ರೂ. ಬೆಲೆಬಾಳುವ ಅರಣ್ಯ ಜಮೀನುಡಿನೋಟಿಫೈಗಾಗಿ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಸಮಜಾಯಿಷಿ ಕೇಳಿ ನೋಟಿ ಜಾರಿ ಮಾಡಿದ್ದು, ಏಳು ದಿನಗಳೊಳಗೆ ಉತ್ತರಿಸಬೇಕೆಂಬ ಗಡುವು ವಿಧಿಸಿದ್ದಾರೆ.

ಜತೆಗೆ ಸುಪ್ರೀಂ ಕೋರ್ಟ್ ನಲ್ಲಿ ಅರಣ್ಯ ಇಲಾಖೆ ಸಲ್ಲಿಸಿರುವ ಮಧ್ಯಂತರ ಅರ್ಜಿ ಹಿಂಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಈ ಭೂಮಿಯನ್ನು ಇಲಾಖೆಗೆ ಮರಳಿ ಪಡೆದ ಬಳಿಕ ಲಾಲ್‌ಬಾಗ್ ಅಥವಾ ಕಬ್ಬನ್ ಉದ್ಯಾನದ ಮಾದರಿಯಲ್ಲಿ ಸಸ್ಯೋದ್ಯಾನ ಅಭಿವೃದ್ಧಿಪಡಿಸಲಾಗುವುದು ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ಅಸಲಿಗೆ ಆಗಿದ್ದೇನು ?

ಅರಣ್ಯ ಕಾಯ್ದೆ, ಕೈಪಿಡಿ, ನಿಯಮಾವಳಿ ಪ್ರಕಾರ ಅರಣ್ಯ ಭೂಮಿಯನ್ನು ಅರಣ್ಯ ಭೂಮಿಯಲ್ಲ ಎಂದು ಘೋಷಿಸಲು ವಿಧಾನ ಮಂಡಲದ ಉಭಯ ಸದನಗಳು ನಿರ್ಣಯಿಸಬೇಕು.

ಇತರ ಸರ್ಕಾರಿ ಇಲಾಖೆಗೆ ಸರ್ಕಾರಿ ಭೂಮಿ ವರ್ಗಾಯಿಸುವ ಸಂದರ್ಭದಲ್ಲಿ ಅದರ ಮೌಲ್ಯ ಐದು ಕೋಟಿ ರೂ.ಗಿಂತ ಹೆಚ್ಚಾಗಿದ್ದಲ್ಲಿ ಸಚಿವ ಸಂಪುಟದ ಪೂರ್ವಾನುಮತಿ ಪಡೆಯಬೇಕು ಎಂದಿದೆ.

ಆದರೆ ಕೆಲವು ಅಧಿಕಾರಿಗಳು ಸಚಿವರ ಗಮನಕ್ಕೂ ತಾರದೆ, ಸಚಿವ ಸಂಪುಟದ ಅನುಮತಿಯೂ ಇಲ್ಲದೆ ತಮ್ಮ ಮಟ್ಟದಲ್ಲೇ ಸರ್ಕಾರದ ಆದೇಶ ಮಾಡಿ ಸುಪ್ರೀಂಕೋರ್ಟ್‌ಗೆ ಐ.ಎ. ಸಲ್ಲಿಸಿರುವುದು ಸಚಿವ ಖಂಡ್ರೆ ಶಂಕೆಗೆ ಕಾರಣ.

ಅಲ್ಲದೆ ಎಚ್.ಎಂ.ಟಿ. ಅರಣ್ಯ ಭೂಮಿಯನ್ನು ಸರ್ಕಾರಿ ಮತ್ತು ಖಾಸಗಿಯವರಿಗೆ ಪರಭಾರೆ ಮಾಡಲು ನಿರಾಕ್ಷೇಪಣಾ ಪತ್ರವನ್ನೂ ನೀಡಿದೆ. ಇದರಿಂದಾಗಿ ಎಚ್.ಎಂ.ಟಿ. ಈವರೆಗೆ 313 ಕೋಟಿ ರೂ.ಗೂ. ಹೆಚ್ಚು ಬೆಲೆಬಾಳುವೆ 165 ಎಕರೆ ಜಮೀನು ಮಾರಾಟವಾಗಿದೆ.

ಈ ಮಧ್ಯೆ 2015ರಲ್ಲಿ ಅಂದಿನ ಎ.ಪಿ.ಸಿ.ಸಿ.ಎಫ್. ವೆಂಕಟಸುಬ್ಬಯ್ಯ ಅವರು ಎಚ್.ಎಂ.ಟಿ. ಪ್ರದೇಶದ ಅರಣ್ಯ ಭೂಮಿ ತೆರವಿಗೆ 64 ಎ ಪ್ರಕ್ರಿಯೆ ನಡೆಸಿ ಆದೇಶ ನೀಡಿರುತ್ತಾರೆ. ಈ ಆದೇಶದ ವಿರುದ್ಧ ಎಚ್.ಎಂ.ಟಿ. ನಿಗದಿತ ಕಾಲಮಿತಿಯಲ್ಲಿ ಮೇಲ್ಮನವಿಯನ್ನೂ ಸಲ್ಲಿಸಿರುವುದಿಲ್ಲ. ಹೀಗಾಗಿ ಇದು ಅರಣ್ಯ ಇಲಾಖೆಯ ಸ್ವತ್ತಾಗಿರುತ್ತದೆ.

ವಸ್ತುಸ್ಥಿತಿ ಹೀಗಿರುವಾಗ, ಕೆಲವು ಹಿರಿಯ ಅರಣ್ಯಾಧಿಕಾರಿಗಳು ಅಂದಿನ ಅರಣ್ಯ ಸಚಿವರಿಂದ ಲಿಖಿತ ಅನುಮತಿ ಪಡೆಯದೆ, ಸಚಿವ ಸಂಪುಟದ ಅನುಮೋದನೆ ಪಡೆಯದೆ ಎಚ್.ಎಂ.ಟಿ. ಪ್ರದೇಶದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಸುಪ್ರೀಂ ಕೋರ್ಟ್‌ಗೆ ಎ.ಐ. ಸಲ್ಲಿಸಿದ ಔಚಿತ್ಯವೇನು ? ಎಂದು ಸಚಿವ ಈಶ್ವರ ಖಂಡ್ರೆ ಕೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net