

ಹನಗೋಡು: ಹೋಬಳಿಯ ದೊಡ್ಡಹೆಜ್ಜೂರಿನಲ್ಲಿ ಭಾನುವಾರ ಸಂಜೆ ಬಿರುಗಾಳಿ ಮಳೆಗೆ 20ಕ್ಕೂ ಹೆಚ್ಚು ಮನೆಗಳ ಛಾವಣಿಯ ಹೆಂಚು, ಕಲ್ನಾರ್ ಶೀಟ್‌ಗಳು ಹಾರಿ ಹೋಗಿವೆ.
ಗ್ರಾಮದ ಸಿದ್ದಪ್ಪಾಜಿ, ಮಂಜುಳಾ, ಚೇತನ, ಸಣ್ಣಮ್ಮ, ನರಿಯಯ್ಯ, ಮರಲಿಂಗಮ್ಮ, ಪುಟ್ಟಲಕ್ಷ್ಮಮ್ಮ, ಚೆಲುವಮ್ಮ, ರವಿಕುಮಾರ್, ಸುಕನ್ಯಾ, ವೆಂಕಟರಮಣ, ಶೇಖರ್, ಮಹದೇವ್,ಪ್ರಸನ್ನ ಮತ್ತಿತರರ ಮನೆಗಳ ಛಾವಣಿಯ ಹೆಂಚು-ಕಲ್ನಾರ್ ಶೀಟ್ ಹಾರಿಹೋಗಿದೆ. ನಾಗಣ್ಣ ಅವರಿಗೆ ಸೇರಿದ ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದು ಮನೆಗೆ ಹಾನಿಯಾಗಿದೆ. ಕೃಷ್ಣೇಗೌಡರಿಗೆ ಸೇರಿದ ಬಾಳೆ ಬೆಳೆ ನೆಲಕ್ಕುರುಳಿದ್ದು, ಐದು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
ಅಧಿಕಾರಿಗಳ ಭೇಟಿ: ವಿಷಯ ತಿಳಿದ ತಹಸೀಲ್ದಾರ್ ಬಸವರಾಜ್, ರಾಜಸ್ವ ನಿರೀಕ್ಷಕ ರಾಜ್‌ಕುಮಾರ್ ಭೇಟಿ ನೀಡಿ ಹಾನಿ ಪರಿಶೀಲಿಸಿ, ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ವೇಳೆ ಗ್ರಾಪಂ ಸದಸ್ಯರಾದ ನಾಗೇಶ್, ಸುಭಾಷ್ ಹಾಜರಿದ್ದು, ಹಾನಿಗೊಳಗಾದ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದರು.ಶೀಘ್ರ ಪರಿಹಾರ ಹಣ ಬಿಡುಗಡೆ ಮಾಡಲಿ: ಕಳೆದ ವರ್ಷ ಆಗಸ್ಟ್‌ನಲ್ಲಿ ಬಂದಿದ್ದ ಮಹಾ ಮಳೆಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರ ಐದು ಲಕ್ಷ.ರೂ ಘೋಷಣೆ ಮಾಡಿತ್ತಾದರೂ ಈವರೆಗೆ ಎರಡು ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಅರ್ಧಂಬರ್ಧ ಮನೆ ನಿರ್ಮಿಸಿಕೊಂಡಿದ್ದು ಮಳೆಗಾಲ ಆರಂಭಕ್ಕೂ ಮುನ್ನ ಪೂರ್ಣ ಪ್ರಮಾಣದ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಹನಗೋಡು ಭಾಗದ ಸಂತ್ರಸ್ತರು ಮನವಿ ಮಾಡಿದ್ದಾರೆ.