

ಕೋಲಾರ: ಜಿಲ್ಲೆಯಲ್ಲಿ ಮಳೆ ಬಂದರೆ ಶಿಕ್ಷಣ ಇಲಾಖೆ ರಜೆ ಘೋಷಿಸಬೇಕೋ ಬೇಡವೋ ಎಂಬ ಜಿಜ್ಞಾಸೆಗೆ ಬೀಳುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. 9 ಸಾವಿರ ಶಾಲಾ ಕೊಠಡಿಗಳ ಪೈಕಿ 350 ಕೊಠಡಿಗಳು ಬೀಳುವ ಹಂತದಲ್ಲಿವೆ. ಇನ್ನೂ ನೂರಾರು ಕೊಠಡಿಗಳು ಸೋರುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರು ಎಂಬಂತೆ ಆರು ತಿಂಗಳ ಹಿಂದೆ ಅಧಿಕ ಪ್ರಮಾಣದಲ್ಲಿ ಮಳೆಬಂದಾಗ ಸೋರುವ ಕೊಠಡಿಗಳ ದುರಸ್ತಿಗೆ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿತು. ಸರ್ಕಾರ ಪ್ರತಿ ತಾಲೂಕಿಗೆ ಕೇವಲ 30 ಲಕ್ಷ ರೂ. ಒದಗಿಸಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
ಜಿಲ್ಲೆಯಲ್ಲಿ ಮಕ್ಕಳು, ಶಿಕ್ಷಕರು ಮಳೆಗೆ ಹೆದರುತ್ತಾರೆ. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ಕೆಡವಿ ವಿವೇಕ ಶಾಲಾ ಕೊಠಡಿ ನಿಮಾರ್ಣ ಯೋಜನೆಯಲ್ಲಿ ಹೊಸ ಕೊಠಡಿ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೆ ಅಪಾಯಕ್ಕೆ ಆಹ್ವಾನಿಸುವಂತಿರುವ ಈ ಹಳೆಯ ಕೊಠಡಿಗಳನ್ನು ಕೆಲವು ಕಡೆ ನೆಲಸಮ ಮಾಡದಿರುವುದರಿಂದ ಅವು ಯಾವ ಸಂದರ್ಭದಲ್ಲಿ ಬೀಳುತ್ತವೆಯೋ ಎಂಬ ಆತಂಕ ಎದುರಾಗಿದ್ದು, ಮಕ್ಕಳು ಮತ್ತು ಶಿಕ್ಷಕರು ಜೀವ ಕೈಯ್ಯಲ್ಲಿ ಹಿಡಿದು ಶಾಲಾವರಣ ಪ್ರವೇಶಿಸುವಂತಾಗಿದೆ.
ತಾಲೂಕೊಂದಕ್ಕೆ 30ಲಕ್ಷ ರೂ.ಅನುದಾನ: ಮುಂಗಾರು ಪ್ರಾರಂಭದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆ ಬಂದಿದ್ದರಿಂದ ನೂರಾರು ಶಾಲಾ ಕೊಠಡಿಗಳು ಸೋರಲಾರಂಭಿಸಿದವು. ಶಿಕ್ಷಣ ಇಲಾಖೆ ಆಗ ಎಚ್ಚೆತ್ತುಕೊಂಡು ಕೊಠಡಿಗಳ ದುರಸ್ತಿಗೆ ಹಣ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸರ್ಕಾರ ಪ್ರತಿ ತಾಲೂಕಿನಲ್ಲಿ ಮುನ್ನೂರಕ್ಕೂ ಹೆಚ್ಚು ಕೊಠಡಿಗಳು ಸೋರುತ್ತಿದ್ದರೂ, ತಾಲೂಕೊಂದಕ್ಕೆ ಕೇವಲ 30ಲಕ್ಷ ರೂ. ಒದಗಿಸಿದೆ. ಇದರಿಂದಾಗಿ ಆಯಾ ತಾಲೂಕಿನಲ್ಲಿ 30ರಿಂದ 40 ಕೊಠಡಿಗಳಷ್ಟನ್ನು ಮಾತ್ರ ದುರಸ್ತಿಪಡಿಸಬಹುದಾಗಿದ್ದು, ಸಮರೋಪಾದಿಯಲ್ಲಿ ಎಲ್ಲ ಕೊಠಡಿಗಳ ದುರಸ್ತಿ ಮಾಡಲು ಸಾಧ್ಯವಾಗುತ್ತಿಲ್ಲ.
ಇನ್ನೂ ಬಹುತೇಕ ಕಡೆ ಸೋರುವ ಕೊಠಡಿಗಳಲ್ಲಿಯೇ ಮಕ್ಕಳು ಪಾಠ ಕೇಳುವ ಸ್ಥಿತಿ ಇದೆ. ಅಂತಹ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಬಾರದು ಎಂದು ಶಿಕ್ಷಕರಿಗೆ ಇಲಾಖೆ ಸೂಚಿಸಿದೆ. ಹೀಗಾಗಿ ಅಂತಹ ಕಡೆ ಮಳೆ ಬಂದರೆ ಶಿಕ್ಷಕರು ರಜೆ ಕೊಡಲೇಬೇಕಾದ ದು@ಸ್ಥಿತಿ ಅಲ್ಲಗಳೆಯುವಂತಿಲ್ಲ. ಒಟ್ಟಾರೆ ಹೇಳುವುದಾದರೆ ಸರ್ಕಾರದ ರ್ನಿಲಕ್ಷ$್ಯವೋ, ಶಿಕ್ಷಣ ಇಲಾಖೆ ಬೇಜವಾಬ್ದಾರಿತನವೋ ಮಳೆ ಬಂದರೆ ಮಕ್ಕಳು, ಶಿಕ್ಷಕರಂತೂ ಬಹುತೇಕ ಶಾಲೆಗಳಿಗೆ ಹಾಜರಾಗುವ ಪರಿಸ್ಥಿತಿಯಿಲ್ಲ.
ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿದ್ದರೂ ಇಷ್ಟು ವರ್ಷ ಶಿಕ್ಷಣ ಇಲಾಖೆ ಕಣ್ಣುಮುಚ್ಚಿ ಕುಳಿತಿದ್ದುದು ಏಕೆ? ಆಯಾ ಗ್ರಾಮ ಪಂಚಾಯಿತಿಗಳಿಂದ ನರೇಗಾ ಮತ್ತಿತರ ಯೋಜನೆಗಳಲ್ಲಿ ದುರಸ್ತಿ ಮತ್ತು ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಮುಂದಾಗದಿರುವುದು ಸರಿಯೇ? ಆಯಾ ಕ್ಷೇತ್ರಗಳ ಶಾಸಕರು ಮಾಡಿದ್ದಾದರೂ ಏನು ಎಂದು ಶಿಕ್ಷಣಾಸಕ್ತರು ಪ್ರಶ್ನಿಸುತ್ತಿದ್ದಾರೆ.
ಸುಸಜ್ಜಿತ ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳನ್ನು ಓದಿಸಲು ಪಾಲಕರು ಇಷ್ಟಪಡುವುದಿಲ್ಲ. ಅಂತಹುದರಲ್ಲಿ ಸೋರುವ, ಬೀಳುವ ಹಂತದಲ್ಲಿರುವ ಕೊಠಡಿಗಳನ್ನು ನೋಡಿಯೂ ಯಾರಾದರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವರೇ? ಶಿಕ್ಷಣದ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಕನಿಷ್ಠ ಶಾಲಾ ಕೊಠಡಿಗಳ ದುರಸ್ತಿಗೆ ಮುಂದಾಗದಿರುವುದು ಸರಿಯೇ? ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸಲು ಇವರಿಗೆ ಇರುವ ಸಮಸ್ಯೆಯಾದರೂ ಏನು ಎಂಬುದಕ್ಕೆ ಬಹುಶ@ ಯಾರ ಬಳಿಯೂ ಉತ್ತರವಿರಲಿಕ್ಕಿಲ್ಲ.
ಬೀಳುವ ಹಂತದಲ್ಲಿರುವ ಕೊಠಡಿಗಳನ್ನು ಕೆಡವಲು ಆದೇಶಿಸಲಾಗಿದೆ. ಅಂತಹ ಕೊಠಡಿಗಳ ಜಾಗದಲ್ಲಿ ವಿವೇಕ ಕೊಠಡಿಗಳನ್ನು ನಿರ್ಮಿಸಲಾಗುವುದು. ಸೋರುತ್ತಿರುವ ಕೊಠಡಿಗಳನ್ನು ಹಂತಹಂತವಾಗಿ ದುರಸ್ತಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. | ಯುಕೇಶ್ ಕುಮಾರ್, ಸಿಇಒ, ಜಿಪಂ, ಕೋಲಾರ
ರಾಯಲ್ಪಾಡು: ಸತತ ಮಳೆಯಿಂದಾಗಿ ಶ್ರೀನಿವಾಸಪುರ ತಾಲೂಕಿನ ಗಂಗನಗಾರಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಸೋರುತ್ತಿದ್ದು, ಮಕ್ಕಳು ಭಯದಲ್ಲೇ ಪಾಠ ಕೇಳುವಂತಾಗಿದೆ.
ಮೂರು ಕಟ್ಟಡಗಳಿರುವ ಈ ಶಾಲೆಯಲ್ಲಿ ನಲಿಕಲಿ ಕಟ್ಟಡವೊಂದೇ ಸುಸ್ಥಿತಿಯಲ್ಲಿದೆ. ಇನ್ನುಳಿದ ಎರಡು ಕಟ್ಟಡಗಳಲ್ಲಿ ಒಂದು 20 ವರ್ಷದ ಹಿಂದೆ ಹಾಗೂ ಇನ್ನೊಂದು 15 ವರ್ಷದ ಹಿಂದೆ ನಿರ್ಮಾಣಗೊಂಡಿರುವ ಅನ್ನಪೂರ್ಣ ಕಟ್ಟಡವು ದು@ಸ್ಥಿತಿಯಲಿದೆ.
ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಒಟ್ಟು ಮಕ್ಕಳು 16 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಲಿಕಲಿ ಕಟ್ಟಡದಲ್ಲಿ 1ರಿಂದ 3ನೇ ತರಗತಿ, ಹಳೆಯ ಕಟ್ಟಡದಲ್ಲಿ 4ರಿಂದ 5ನೇ ತರಗತಿ ನಡೆಯುತ್ತಿದ್ದು, ಮತ್ತೊಂದು ಅನ್ನಪೂರ್ಣ ಕೊಠಡಿಯಲ್ಲಿ ಅಡುಗೆ ಮಾಡಲಾಗುತ್ತದೆ. 4ರಿಂದ 5ನೇ ತರಗತಿ ವಿದ್ಯಾರ್ಥಿಗಳ ಕೊಠಡಿ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಪಾಠಕ್ಕೆ ಅಡ್ಡಿಯಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡದೆ, ಅವಘಡ ನಡೆಯುವ ಮುನ್ನ ಎಚ್ಚೆತ್ತು, ಶಾಲಾ ಕಟ್ಟಡವನ್ನು ದುರಸ್ತಿಗೊಳಿಸುವಂತೆ ಎಂದು ಪಾಲಕರು ಒತ್ತಾಯಿಸಿದ್ದಾರೆ.
ಶಾಲೆಯ ಹಳೇ ಕಟ್ಟಡವು ಮಳೆ ಬಂತೆಂದರೆ ಸೋರುತ್ತದೆ. ಮಳೆ ಬಂದಾಗ ಮಕ್ಕಳನ್ನು ಬೇರೆ ಕಟ್ಟಡದಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದ್ದು, ಕಟ್ಟಡ ದುಸ್ಥಿತಿಯ ಕುರಿತು ಬಿಇಒ ಅವರಿಗೆ ಮಾಹಿತಿ ನೀಡಲಾಗಿದೆ. | ವೆಂಕಟರಮಣಪ್ಪ, ಮುಖ್ಯಶಿಕ್ಷಕ ಗಂಗನಗಾರಿಪಲ್ಲಿ. ತಾಲೂಕಿನಾದ್ಯಂತ 90 ಶಾಲೆಗಳಲ್ಲಿನ 151 ಕೊಠಡಿಗಳ ದುರಸ್ತಿಯಿದ್ದು, ಈ ಕುರಿತು ಶಾಸಕರು ಹಾಗೂ ತಾಪಂ ಇಒ ಗಮನಕ್ಕೆ ತರಲಾಗಿದೆ. ದುರಸ್ತಿ ಕೊಠಡಿಗಳ ಪಟ್ಟಿ ಸಲ್ಲಿಸಿದ್ದು, ಕೊಠಡಿಗಳ ರಿಪೇರಿ ಮಾಡಲು ಸದ್ಯಕ್ಕೆ ಯಾವುದೇ ಅನುದಾನವಿಲ್ಲ ಎಂದು ಇಒ ಮಾಹಿತಿ ನೀಡಿದ್ದು, ಅನುದಾನ ಬಂದ ಬಳಿಕ ತಾಲೂಕಿನ ಎಲ್ಲ ಶಾಲಾ ಕೊಠಡಿಗಳನ್ನು ದುರಸ್ತಿಪಡಿಸಲಾಗುವುದು. | ವಿ.ಉಮಾದೇವಿ. ಬಿಇಒ. ಶ್ರೀನಿವಾಸಪುರ.
ಕೋಲಾರ: ಜಡಿ ಮಳೆ, ಚಳಿ ವಾತಾವರಣ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಮಕ್ಕಳ ಸುರಕ್ಷತೆಗೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಮತ್ತು ಶಿಥಿಲ ಕಟ್ಟಡಗಳಲ್ಲಿ ತರಗತಿ ನಡೆಸದಿರುವಂತೆ ಎಂದು ೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಸೂಚಿಸಿದರು.
ಮಳೆಯಿಂದ ಹಾನಿಗೊಳಗಾದ ತಾಲೂಕಿನ ಯಳಚಿಪುರ, ಯಲವಾರ,ಪೂವಾಂಡಹಳ್ಳಿ, ಶ್ಯಾನುಭೋಗನಹಳ್ಳಿ ಶಾಲೆಗಳಿಗೆ ಮಂಗಳವಾರ ಭೇಟಿ ನೀಡಿ ಶಾಲೆಯ ಶಿಥಿಲ ಕಟ್ಟಡಗಳ ಪರಿಶೀಲಿಸಿ ಮಾತನಾಡಿದರು.
ಕಟ್ಟಡ, ಕಾಂಪೌಂಡ್ ಶಿಥಿಲವಾಗಿದ್ದರೆ ಮಕ್ಕಳನ್ನು ಅತ್ತ ಸುಳಿಯಲು ಬಿಡದಿರಿ. ಕಟ್ಟಡದ ಮೇಲ್ಛಾವಣಿಯಲ್ಲಿ ನೀರು ನಿಂತಿದ್ದರೆ ಎಸ್ಡಿಎಂಸಿ ಸಹಕಾರ ಪಡೆದು ಸ್ವಚ್ಛಗೊಳಿಸಬೇಕು. ಶಾಲಾ ಕಟ್ಟಡ ಸುಸ್ಥಿತಿಯಲ್ಲಿ ಇರುವುದನ್ನು ಖಾತ್ರಿಪಡಿಸಿಕೊಳ್ಳಿ, ಶಿಥಿಲ ಕಟ್ಟಡಗಳ ಮಾಹಿತಿ ನೀಡಬೇಕು. ಮಕ್ಕಳ ಸುರಕ್ಷತೆಗೆ ಒತ್ತು ನೀಡುವ ಅಗತ್ಯವಿದೆ. ಮಕ್ಕಳಿಗೆ ತೊಂದರೆಯಾಗುವಂತಿದ್ದರೆ ಎಸ್ಡಿಎಂಸಿಯೊಂದಿಗೆ ಚರ್ಚಿಸಿ ರಜೆ ನೀಡಬೇಕೆ ಎಂಬುದರ ಕುರಿತು ಕ್ರಮವಹಿಸಿ ಎಂದರು.
ಶಾಲಾ ಕಟ್ಟಡಗಳ ದುರಸ್ತಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಶಿಕ್ಷಕರು ಸ್ಥಳಿಯವಾಗಿ ದಾನಿಗಳ, ಎಸ್ಡಿಎಂಸಿ ಸದಸ್ಯರ ನೆರವು ಪಡೆದು ಶಾಲೆಗಳ ದುರಸ್ತಿಗೆ ಕ್ರಮ ವಹಿಸಬೇಕು. ಸುತ್ತಮುತ್ತಲ ಕೈಗಾರಿಕೆಗಳಿದ್ದರೆ ಅವರಿಂದ ಸಿಎಸ್ಆರ್ ನಿಧಿ ಪಡೆಯಲು ಪ್ರಯತ್ನಿಸಿ ಎಂದರು.
ಆಹಾರದ ಗುಣಮಟ್ಟ ಕಾಪಾಡಿ: ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯಂ ಮಾತನಾಡಿ, ಚಳಿ ಇರುವುದರಿಂದ ಮಕ್ಕಳಿಗೆ ಬಿಸಿಯೂಟ ಮಾಡಿ ಬಡಿಸಿ, ಕುಡಿಯಲು ಕಡ್ಡಾಯವಾಗಿ ಬಿಸಿನೀರು ಒದಗಿಸಬೇಕು. ಆಹಾರದ ಗುಣಮಟ್ಟದಲ್ಲಿ ಲೋಪವಾಗದಂತೆ ಎಚ್ಚರವಹಿಸಿ ಎಂದರು.