ಸಾಮೂಹಿಕ ವಿವಾಹದಲ್ಲಿ ಕೊರೊನಾ ವೈರಸ್​ ಭೀತಿ; ಮೂಗು, ಬಾಯಿ ಮುಚ್ಚುವಂತೆ ಮಾಸ್ಕ್​ ಹಾಕಿಕೊಂಡೇ ಲಿಪ್​ಲಾಕ್ ಮಾಡಿಕೊಂಡ ನವದಂಪತಿಗಳು

Coronavirus 20 Feb 20
Published on

ಫಿಲಿಪೈನ್ಸ್​: ಕೊರೊನಾ ವೈರಸ್ ಭೀತಿ ಜಗತ್ತಿನೆಲ್ಲೆಡೆ ಆವರಿಸಿದೆ. ಇದರಿಂದಾಗಿ ವ್ಯಾಪಾರ, ಉದ್ಯಮ, ಪ್ರವಾಸೋದ್ಯಮ ಸೇರಿ ಹಲವು ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಫಿಲಿಪೈನ್ಸ್​ನಲ್ಲಿ ಕೊರೊನಾ ವೈರಸ್​ ನವದಂಪತಿಗಳಲ್ಲಿಯೂ ಭಯ ಸೃಷ್ಟಿಸಿದೆ.

ಚೀನಾದಲ್ಲಿ ಶುರುವಾದ ಕೊರೊನಾ ಸೋಂಕು ಜಗತ್ತಿನ ಹಲವು ದೇಶಗಳಿಗೆ ಕಾಲಿಟ್ಟಿದೆ. ಚೀನಾದಲ್ಲಂತೂ ದಿನೇದಿನೆ ಕೊರೊನಾಕ್ಕೆ ಜೀವ ತೆರುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಾಗೇ ಫಿಲಿಪೈನ್ಸ್​ನಲ್ಲಿ ಕೂಡ ಈಗಾಗಲೇ ಕೊರೊನಾ ವೈರಸ್​ನಿಂದ ಒಂದು ಸಾವು ಉಂಟಾಗಿದ್ದು ವರದಿಯಾಗಿದೆ. ಇನ್ನೂ ಮೂವರು ಸೋಂಕಿತರು ಇದ್ದಾರೆ.

ಹೀಗಿರುವಾಗ ಇಲ್ಲಿನ ಬ್ಯಾಕೊಲೊಡ್ ನಗರದಲ್ಲಿ ನಡೆಸಲಾದ ಸಾಮೂಹಿಕ ವಿವಾಹದಲ್ಲಿ ವಧುವರರು ಮೂಗು, ಬಾಯಿಗೆ ಮಾಸ್ಕ್​ ಹಾಕಿಕೊಂಡೇ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದ 220 ಜೋಡಿಗಳು ಕೊರೊನಾ ಭೀತಿಯಿಂದ ಮಾಸ್ಕ್​ ಹಾಕಿಕೊಂಡು ಮದುವೆಯಾಗಿದ್ದಾರೆ.

ಸ್ಥಳೀಯ ಮುನ್ಸಿಪಲ್​ನಿಂದಲೇ ಹಮ್ಮಿಕೊಳ್ಳಲಾಗುವ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ ವಧುವರರು ಸೇರಿ ಎಲ್ಲರ ಆರೋಗ್ಯದ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ. ಕಳೆದ 14 ದಿನಗಳಲ್ಲಿ ಎಲ್ಲೆಲ್ಲಿಗೆ ಪ್ರಯಾಣ ಮಾಡಿದ್ದಿರಿ ಎಂದು ಕೂಡ ಪ್ರಶ್ನಿಸಲಾಗಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರಿಗೂ ನೀಲಿ ಬಣ್ಣದ ಮಾಸ್ಕ್​ ನೀಡಿ, ಅದನ್ನು ಹಾಕಿಕೊಂಡೇ ಮದುವೆಯಾಗಲು ಸೂಚಿಸಲಾಗಿತ್ತು ಎನ್ನಲಾಗಿದೆ.

ನವವಧುವರರೆಲ್ಲ ಬಿಳಿ ಬಣ್ಣದ ಉಡುಪು ಹಾಕಿಕೊಂಡು, ಕೈಯಲ್ಲಿ ಹೂಗುಚ್ಛ ಹಿಡಿದುಕೊಂಡು, ಮೂಗು, ಬಾಯಿ ಮುಚ್ಚುವಂತೆ ಮಾಸ್ಕ್ ಹಾಕಿಕೊಂಡು ಪರಸ್ಪರ ಮುತ್ತಿಟ್ಟುಕೊಳ್ಳುತ್ತಿರುವ (ಲಿಪ್​ಲಾಕ್​) ಫೋಟೋಗಳು ಎಲ್ಲೆಡೆ ವೈರಲ್​ ಆಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net