ಸರ್ಕಾರಿ ಕಾಮಗಾರಿ ವೇಳೆ ಬೃಹತ್​ ಶಿವಲಿಂಗ ಪತ್ತೆ! ದೇವಸ್ಥಾನ ನಿರ್ಮಿಸಲು ಮುಂದಾದ ಗ್ರಾಮಸ್ಥರು | Shivlinga Found

Shivlinga Found
Published on

Shivlinga Found: ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ಭೂಗರ್ಭದಲ್ಲಿ ಅಡಗಿದ್ದ ಬೃಹತ್ ಶಿವಲಿಂಗವೊಂದು ಪತ್ತೆಯಾಗಿದೆ. ಮೇಳಪುಳವಂಗಡ್ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಕಾಮಗಾರಿ ನಡೆಯುವ ವೇಳೆ ಈ ಶಿವಲಿಂಗ ಪತ್ತೆಯಾಗಿದ್ದು, ದೇವಸ್ಥಾನ ನಿರ್ಮಾಣ ಮಾಡಲು ಗ್ರಾಮಸ್ಥರು ಮುಂದಾಗಿದೆ.

ಸುಮಾರು ಒಂದು ಟನ್ ತೂಕ ಮತ್ತು ನಾಲ್ಕು ಅಡಿ ಎತ್ತರವಿರುವ ಬೃಹತ್​ ಶಿವಲಿಂಗವು ನೂರಾರು ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಕಾಮಗಾರಿ ವೇಳೆ ಶಿವಲಿಂಗ ಕಂಡ ಗ್ರಾಮಸ್ಥರು ಕೂಡಲೇ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದರು. ಇದೇ ವೇಳೆ ಸ್ಥಳೀಯರು ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.

ಶಿವಲಿಂಗವನ್ನು ಪರಿಶೀಲನೆ ನಡೆಸಿದ ಬಳಿಕ ಆರ್‌ಡಿಒ ಈಶ್ವರಯ್ಯ ಮತ್ತು ತಹಸೀಲ್ದಾರ್ ಭರಣಿ ಸೇರಿದಂತೆ ಕಂದಾಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪುದುಕೊಟ್ಟೈ ತಾಲೂಕು ಕಚೇರಿಯ ಸ್ಟ್ರಾಂಗ್ ರೂಂಗೆ ಶಿವಲಿಂಗವನ್ನು ಸ್ಥಳಾಂತರ ಮಾಡಲಾಯಿತು.

ಶಿವಲಿಂಗ ದೊರೆತ ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಿಸಿ ನಿತ್ಯ ಪೂಜೆ ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದ್ದು, ಶಿವಲಿಂಗವನ್ನು ವಾಪಸ್‌ ನೀಡುವಂತೆ ಮನವಿ ಮಾಡಿದ್ದಾರೆ. ಪಂಚಾಯಿತಿ ಅಧ್ಯಕ್ಷ ಸತೀಶ್ ಕೂಡ ಕಂದಾಯ ಇಲಾಖೆಗೆ ಔಪಚಾರಿಕ ಅರ್ಜಿಯನ್ನು ಸಲ್ಲಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಸಾವಿರ ವರ್ಷಗಳಷ್ಟು ಹಳೆಯದಾದ ಶಿವಲಿಂಗ ಪತ್ತೆಯಾಗಿತ್ತು. ಕಡಲೂರಿನ ಶ್ರೀಮುಷ್ಣಂ ಸಮೀಪದ ಚೋಳಧರಂ ಗ್ರಾಮದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಮರಗಳನ್ನು ಕಡಿಯುತ್ತಿದ್ದಾಗ ಎರಡು ಬೃಹತ್ ಮರಗಳ ನಡುವೆ ಮಣ್ಣಿನಲ್ಲಿ ಆಳವಾಗಿ ಹೂತು ಹೋಗಿದ್ದ ಶಿವಲಿಂಗ ಪತ್ತೆಯಾಗಿತ್ತು. ಮರಗಳ ಬೇರುಗಳು ಶಿವಲಿಂಗದ ಸುತ್ತಲೂ ಇದ್ದವು. ಮಾಹಿತಿ ಪಡೆದ ಅರಣ್ ಪಾನಿ ಟ್ರಸ್ಟ್ (ಪುಣ್ಯ ಸೇವಾ ಸೇವಾ ಪ್ರತಿಷ್ಠಾನ) ಸದಸ್ಯರು ಸಂಪೂರ್ಣ ಭದ್ರತೆಯೊಂದಿಗೆ ಶಿವಲಿಂಗವನ್ನು ಬೇರೆಡೆಗೆ ಸ್ಥಳಾಂತರಿಸಿದರು.

ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡಿನಾದ್ಯಂತ ಇದೇ ರೀತಿ ಅನೇಕ ಶಿವಲಿಂಗಗಳು ಪತ್ತೆಯಾಗಿವೆ. ಎರಡು ವರ್ಷಗಳ ಹಿಂದೆ, ಕೊಡಕನಾರು ಮತ್ತು ಅಮರಾವತಿ ನದಿಗಳ ಸಂಗಮದ ಬಳಿಯ ಕೃಷಿ ಭೂಮಿಯಲ್ಲಿ 1000 ವರ್ಷಗಳಷ್ಟು ಹಳೆಯದಾದ ಶಿವಲಿಂಗ ಪತ್ತೆಯಾಗಿತ್ತು. ನಾಲ್ಕು ವರ್ಷಗಳ ಹಿಂದೆ ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನದ ಪೂರ್ವ ತೀರದಲ್ಲಿ ಶಿವಲಿಂಗ ಪತ್ತೆಯಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net