ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ: 34 ದಿನದಲ್ಲಿ 2.59 ಕೋಟಿ ರೂ. ಸಂಗ್ರಹ

hundi mm hills
Published on

ಹನೂರು: ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯ ಹುಂಡಿಯಲ್ಲಿ ಕೋಟ್ಯಂತರ ಹಣ ಸಂಗ್ರಹ ಆಗಿದೆ.

ಮಲೆಮಹದೇಶ್ವರ ಬೆಟ್ಟದ ಬಸ್​ ನಿಲ್ದಾಣ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಬುಧವಾರ ಬೆಳಗ್ಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ವಿದ್ವಾನ್​ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲು ಹಾಗೂ ಪೊಲೀಸ್​ ಬಂದೋಬಸ್ತ್​ನಲ್ಲಿ ಎಣಿಕೆ ಕಾರ್ಯ ಪ್ರಾರಂಭವಾಗಿ ರಾತ್ರಿ 10.10ರವರೆಗೂ ನಡೆಯಿತು.

ಈ ಬಾರಿ ಹುಣ್ಣಿಮೆ, ಅಮಾವಾಸ್ಯೆ, ಕಾರ್ತಿಕ ಸೋಮವಾರಗಳು, ದೀಪೋತ್ಸವ ಹಾಗೂ ಸರ್ಕಾರಿ ರಜಾ ದಿನಗಳಂದು ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಾದಪ್ಪನ ಸನ್ನಿಧಿಗೆ ಭೇಟಿ ನೀಡಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆಯ ರೂಪದಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದರು. ಹುಂಡಿಗಳಲ್ಲಿ ಈ ಬಾರಿ 34 ದಿನದ ಅವಧಿಯಲ್ಲಿ 2.59 ಕೋಟಿ ರೂ. ನಗದು, 80 ಗ್ರಾಂ ಚಿನ್ನ ಹಾಗೂ 3.900 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಕಳೆದ ಬಾರಿ 2,50,85,794 ನಗದು, 122 ಗ್ರಾಂ ಚಿನ್ನ ಹಾಗೂ 2.710 ಕೆಜಿ ಬೆಳ್ಳಿ ಸಂಗ್ರಹವಾಗಿತ್ತು.

ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು, ಲೆಕ್ಕಾಧೀಕ್ಷಕ ಪ್ರವಿಣ್​ ಪಟೇಲ್​, ಎಸ್​ಬಿಐ ಬ್ಯಾಂಕ್​ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net