

ಶಿವಮೊಗ್ಗ: ಎರಡು ವರ್ಷಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಹುಣಸೋಡು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಸಿಡಿಆರ್(ಕಾಲ್ ಡಿಟೈಲ್ ರೇಕಾರ್ಡ್) ಸಲ್ಲಿಕೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.
ಹುಣಸೋಡು ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದು ಮೂವರು ನಾಪತ್ತೆಯಾಗಿದ್ದಾರೆ ಎಂಬುದು ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿ. ಆದರೆ ನಾಪತ್ತೆಯಾಗಿರುವ ಪಟ್ಟಿಯಲ್ಲಿರುವ ಪುನೀತ್‌ಗೌಡ ಅವರ ಮೊಬೈಲ್ ನಂಬರ್‌ನಲ್ಲಿ ನಕಲಿ ಸಿಡಿಆರ್ ಅನ್ನು ನೈಜವೆಂದು ನಂಬಿಸಲು ಕೆಲವರು ಯತ್ನಿಸಿದ್ದಾರೆ ಎನ್ನಲಾಗಿದ್ದು, ಪತ್ತೆಗೆ ಇಲಾಖೆ ಮುಂದಾಗಿದೆ.
2021ರ ಜ.21ರಂದು ರಾತ್ರಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಂದು ವರ್ಷ ಮೂರು ತಿಂಗಳ ಹಿಂದೆ ಭದ್ರಾವತಿ ತಾಲೂಕಿನ ಸುಣ್ಣದಹಳ್ಳಿಯ ಬಸವಗುಡಿಯ ನಿವಾಸಿ ರಾಜಮ್ಮ ಅವರು ಪುತ್ರ ಪುನೀತ್‌ಗೌಡ ಸಂಬಂಧ ದೂರು ಸಲ್ಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ಅಂದಿನ ಡಿವೈಎಸ್ಪಿ ವಿಚಾರಣೆ ನಡೆಸಿದ್ದರು. ಈ ವೇಳೆ ದೂರಿನ ಜತೆ ಒಂದು ಬಿಳಿ ಹಾಳೆಯಲ್ಲಿ ಪುನೀತ್‌ಗೌಡ ಅವರ ಹೆಸರಿನ ಸಿಡಿಆರ್ ಪ್ರತಿ ಸಲ್ಲಿಸಿದ್ದರು.
ದಾಖಲಾತಿ ಪರಿಶೀಲಿಸಿದಾಗ ಸಿಡಿಆರ್ ನಕಲಿ ಎಂಬುದು ದೃಢಪಟ್ಟಿತ್ತು. ಅಲ್ಲದೆ, ಪುನೀತ್‌ಗೌಡ ಅವರ ಮೊಬೈಲ್ ನಂಬರ್‌ನ ಸಿಡಿಆರ್ ಪರಿಶೀಲಿಸಿದಾಗ ಅರ್ಜಿ ಸಲ್ಲಿಕೆ ವೇಳೆ ನೀಡಿದ್ದ ಸಿಡಿಆರ್‌ಗೂ ನೈಜತೆ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ವಂಚಿಸುವ ಉದ್ದೇಶದಿಂದ ನಕಲಿ ಸಿಡಿಆರ್ ಸಲ್ಲಿಸಲಾಗಿದೆ ಎಂದು ಪೊಲೀಸರು ಜ.31ರಂದು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.