ಪಾಕಿಸ್ತಾನ: (Puppies Burned ) ಇಸ್ಲಾಮಾಬಾದ್‌ನ ಗುಲ್ಬರ್ಗ್ ಗ್ರೀನ್ಸ್‌ನಲ್ಲಿ 9 ಮುಗ್ಧ ನಾಯಿಮರಿಗಳನ್ನು ಸಜೀವ ದಹನ ಮಾಡಲಾಗಿದೆ. ಈ ನಾಯಿ ಮರಿಗಳ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಮಾನವೀಯ ಘಟನೆಗೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ 9 ನಾಯಿಮರಿಗಳನ್ನು ಒಂದು ಚೀಲದ ಮೇಲೆ ಮಲಗಿಸಲಾಗಿದ್ದು, ಅದರಲ್ಲಿ 8 ಸಾವನ್ನಪ್ಪಿದ್ದರೆ ಒಂದು ಸಾವು- ಬದುಕಿನ ಮಧ್ಯೆ ಹೆಣಗಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಪಾಕಿಸ್ತಾನ ಮೂಲದ ಪ್ರಾಣಿ ಪ್ರಿಯ Z Raza ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನು ಕಣ್ಣನೇ ತೆರೆಯದ 9 ಮರಿಗಳನ್ನು ಜೀವಂತವಾಗಿ ಸುಡಲಾಗಿದೆ ಎಂದು ಬರೆದ ಅವರು ಭಯಾನಕ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಈ ಕೃತ್ಯ ಯಾಕೆ ನಡೆಯಿತ್ತು? ಆರೋಪಿಗಳು ಯಾರು ಎನ್ನುವ ಮಾಹಿತಿ ಮಾತ್ರ ಲಭ್ಯವಾಗಿಲ್ಲ.
ಈ ಕೃತ್ಯ ತಿಳಿದ ಕೂಡಲೇ ಪಶುತಜ್ಞ ಡಾಕ್ಟರ್ ಫೈಸಲ್ ಖಾನ್ ಅವರ ಕ್ಲಿನಿಕ್‌ಗೆ ಈ ನಾಯಿಮರಿಗಳನ್ನು ತೆಗೆದುಕೊಂಡು ಹೋಗಲಾಗಿತ್ತು. ಆದರೆ 8 ಮರಿಗಳು ಅದಾಗಲೇ ಸಾವನ್ನಪ್ಪಿದ್ದರೆ ಒಂದು ಮರಿ ನಂತರದಲ್ಲಿ ಸಾವನ್ನಪ್ಪಿದೆ ಎಂದು ಅವರು ಸರಣಿ ಟ್ವಿಟ್‌ಗಳ ಮೂಲಕ ಮಾಹಿತಿ ನೀಡಿದ್ದಾರೆ.
<
ಈ ಘಟನೆಗೆ ಈಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜಗತ್ತಿನ್ನೆಲ್ಲೆಡೆಯ ಪ್ರಾಣಿ ಪ್ರಿಯರು ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
ಪಾಕಿಸ್ತಾನದಲ್ಲಿ ಪ್ರತಿ ವರ್ಷ 50,000 ಕ್ಕೂ ಹೆಚ್ಚು ನಾಯಿಗಳು ಸಾಮೂಹಿಕ ಹತ್ಯೆಗಳಿಂದಾಗಿ ಸಾಯುತ್ತಿವೆ ಎಂದು ಆಘಾತಕಾರಿ ವರದಿಯೊಂದು ಬಹಿರಂಗಪಡಿಸಿದೆ. ಬೀದಿ ನಾಯಿಗಳನ್ನು ಕೊಲ್ಲುವುದು ದೇಶದಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿದ್ದು, ಇದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.