

ಚಿಕ್ಕಮಗಳೂರು: ಸಂಸ್ಕಾರಯುತ ಜೀವನ ನಡೆಸಲು ಸಾಹಿತ್ಯ ಅತ್ಯವಶ್ಯ. ಸಂಸ್ಕಾರದ ಕೊರತೆಯಿಂದ ಮಾನವೀಯ ಮೌಲ್ಯ ನಾಶವಾಗುತ್ತಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಕಳವಳ ವ್ಯಕ್ತಪಡಿಸಿದರು.
ಕಸಾಪದಿಂದ ನಗರದ ರಾಮನಹಳ್ಳಿಯ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಶ್ರಾವಣ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಹನಿಗವನ ಮತ್ತು ವಿಡಂಬನೆ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಜಾಗೃತಿಗೊಳಿಸುವ ಜತೆಗೆ ಸಂಸ್ಕಾರಯುತ ಬದುಕಿಗೆ ದಾರಿದೀಪವಾಗಿದೆ. ಈ ಹಿನ್ನೆಲೆಯಲ್ಲಿ ಓದುವ ಸಂಸ್ಕೃತಿ ಎಲ್ಲರಲ್ಲಿಯೂ ನೆಲೆಗೊಳ್ಳಬೇಕು. ಕನ್ನಡ ಹೃದಯದ ಭಾಷೆಯಾಗಬೇಕು. ಚುಟುಕು ಸಾಹಿತ್ಯ ಜೀವನದ ಪ್ರತಿ ಕ್ಷಣದಲ್ಲಿಯೂ ಸಾಮಾಜಿಕ ಜಾಗೃತಿ ಮೂಡಿಸಿ ವ್ಯವಸ್ಥೆಯ ತಲ್ಲಣಗಳಿಗೆ ಉತ್ತರ ನೀಡುತ್ತದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಶ್ರಾವಣ ಸಂಭ್ರಮ ಕಾರ್ಯಕ್ರಮದ ಮೂಲಕ ಜಿಲ್ಲೆಯ ಎಲ್ಲೆಡೆ ನಿರಂತರವಾಗಿ ಸಾಹಿತ್ಯದ ಕಾರ್ಯಕ್ರಮ ನಡೆಯುತ್ತಿದ್ದು, ಮನೆಯಂಗಳದಲ್ಲಿ ಸಾಹಿತ್ಯ ಸುಧೆ ಮೂಲಕ ಸಾಹಿತ್ಯವನ್ನು ಮನೆ, ಮನಗಳಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು.
ಪತಂಜಲಿ ಯೋಗ ಸಂಸ್ಥೆ ಸಂಚಾಲಕ ಸುಮಿತ್ರಾ ನಾಗಪ್ಪ ಗೌಡ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ಘಟಕದ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಸಂಚಾಲಕರಾದ ಕೆ.ಎಸ್.ಗುರುವೇಶ್, ಲೋಕೇಶಪ್ಪ, ನಾಗಶ್ರೀ ತ್ಯಾಗರಾಜ್, ಕಾಂತರಾಜ್, ನಾಗಪ್ಪ ಗೌಡ, ಕಳವಾಸೆ ರವಿ, ರಂಜಿತಾ ಇತರರಿದ್ದರು.