ಮಾನವ ಕಳ್ಳಸಾಗಾಣಿಕೆ ತಡೆಗಟ್ಟಿ; ತಪ್ಪಿತಸ್ಥರ ವಿರುದ್ಧ ಕ್ರಮ ಅಗತ್ಯ

sdffgh
Published on

ಮಾನವ ಕಳ್ಳಸಾಗಾಣಿಕೆ ಭೀಕರ ಪಿಡುಗಾಗಿ ಕಾಡುತ್ತಿದೆ. ಇದು ಗಂಭೀರವಾದ ಸಮಸ್ಯೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಎಂದು ತಿಳಿದಿದ್ದರೂ, ಮಾನವ ಕಳ್ಳಸಾಗಾಣಿಕೆ ತಡೆಗಟ್ಟಲು ಕಠಿಣ ನೀತಿಗಳು ಇಲ್ಲದಿರುವುದು ವಿಪರ್ಯಾಸ.

ಬಲವಂತದ ಲೈಂಗಿಕ ಕ್ರಿಯೆ, ಅನೈತಿಕ ಚಟುವಟಿಕೆ, ಒತ್ತಾಯಪೂರ್ವಕವಾಗಿ ದುಡಿಮೆಗೆ ಇರಿಸಿಕೊಳ್ಳುವುದು, ಭಿಕ್ಷಾಟನೆಗೆ ತಳ್ಳುವುದು ಹೀಗೆ ವಿವಿಧ ಕಾರಣಗಳಿಗೆ ಈ ಪಿಡುಗು ವ್ಯಾಪಿಸುತ್ತಿದ್ದು, ಅನೇಕ ಜಾಲಗಳು ಸಕ್ರಿಯವಾಗಿವೆ. ಆಗಾಗ ಇಂಥ ಜಾಲಗಳನ್ನು ಪತ್ತೆ ಮಾಡಲಾಗುತ್ತಿದೆಯಾದರೂ, ಈ ಸಮಸ್ಯೆಯನ್ನು ಬೇರುಸಮೇತ ಕಿತ್ತೊಗೆಯಲು ಸಾಧ್ಯವಾಗುತ್ತಿಲ್ಲ. ಜನರ ತೀವ್ರ ಬಡತನ, ಕಡಿಮೆ ಶಿಕ್ಷಣದಂಥ ಪರಿಸ್ಥಿತಿಯ ದುರ್ಲಾಭ ಪಡೆದು ಸಮಾಜಘಾತಕ ಶಕ್ತಿಗಳು ಇಂಥ ಕೃತ್ಯಗಳಲ್ಲಿ ತೊಡಗುತ್ತವೆ. ಭಾರತದಲ್ಲಿ ಮಕ್ಕಳು, ಯುವತಿಯರು, ಮಹಿಳೆಯರು, ಪುರುಷರು ಸೇರಿದಂತೆ ಪ್ರತಿವರ್ಷ 20 ರಿಂದ 40 ದಶಲಕ್ಷ ಜನರ ಕಳ್ಳಸಾಗಾಣಿಕೆ ನಡೆಯುತ್ತಿದೆ ಎನ್ನುತ್ತದೆ ಅಧ್ಯಯನವೊಂದರ ವರದಿ. ಇಂಥ ಪ್ರಕರಣಗಳಲ್ಲಿ ಮಕ್ಕಳನ್ನು ದೊಡ್ಡ ಕಾರ್ಖಾನೆಗಳಲ್ಲಿ ಇಲ್ಲವೆ ಕೃಷಿ

ಜಮೀನುಗಳಲ್ಲಿ ಒತ್ತೆಯಾಳುಗಳನ್ನಾಗಿ ದುಡಿಸಿಕೊಳ್ಳಲಾಗುತ್ತದೆ. ಕಳೆದ ವರ್ಷವಷ್ಟೇ ನಾಗಪುರದ ಕೆಂಪುದೀಪ ಪ್ರದೇಶದಿಂದ 700-800 ಮಕ್ಕಳನ್ನು ರಕ್ಷಿಸಲಾಗಿತ್ತು. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಂತೂ ಯುವತಿಯರ ಮತ್ತು ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.

ಬೆಂಗಳೂರಿನಲ್ಲೂ ಇಂಥದ್ದೊಂದು ಜಾಲ ಪತ್ತೆಯಾಗಿರುವುದು ಸದ್ಯದ ವಿದ್ಯಮಾನ. ವಿದೇಶದಲ್ಲಿ ಉದ್ಯೋಗ ಕೊಡಿಸುವ ಹೆಸರಲ್ಲಿ ದುಬೈ ಡಾನ್ಸ್ ಬಾರ್​ಗಳಿಗೆ ಯುವತಿಯರನ್ನು ಪೂರೈಕೆ ಮಾಡುತ್ತಿದ್ದ ಮಾನವ ಕಳ್ಳಸಾಗಾಣಿಕೆ ಜಾಲವು ಸಿಸಿಬಿ ಬಲೆಗೆ ಬಿದ್ದಿದೆ. ಅಶ್ಲೀಲ ನೃತ್ಯ ಹಾಗೂ ಅನೈತಿಕ ಚಟುವಟಿಕೆಗೆ ಇವರನ್ನು ಬಳಸಿಕೊಳ್ಳಲಾಗುತ್ತಿತ್ತು. 7 ಆರೋಪಿಗಳನ್ನು ಬಂಧಿಸಲಾಗಿದ್ದು, 17 ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಕಳೆದ 3 ವರ್ಷಗಳಿಂದ ಈ ಜಾಲ ಸಕ್ರಿಯವಾಗಿದ್ದು, 95 ಯುವತಿಯರನ್ನು ದುಬೈಗೆ ಕಳುಹಿಸಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮೂಲಕ ಯುವತಿಯರನ್ನು ಈ ಜಾಲಕ್ಕೆ ತಳ್ಳಲಾಗಿದೆ. ಬಡ ಯುವತಿಯರನ್ನೇ ಗುರಿಯಾಗಿಸಿ, ಇಂಥ ಕೃತ್ಯ ಎಸಗಲಾಗಿದೆ. ಈ ಇಡೀ ಪ್ರಕರಣ ತಲ್ಲಣದ ಜತೆಗೆ ಕಳವಳವನ್ನೂ ಮೂಡಿಸಿದೆ ಮತ್ತು ಪ್ರಸಕ್ತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

ಮಾನವ ಕಳ್ಳಸಾಗಾಣಿಕೆ ಶಿಕ್ಷಾರ್ಹ ಅಪರಾಧವಾಗಿದ್ದರೂ, ಇಂಥ ಘಟನೆಗಳು ತಗ್ಗುತ್ತಿಲ್ಲ. ಇದಕ್ಕೆ ಕಾರಣ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಮತ್ತು ಸಂಬಂಧಿತ ಪ್ರಕರಣಗಳು ರ್ತಾಕ ಅಂತ್ಯ ಕಾಣದೆ ಇರುವುದು. ವಿದೇಶಕ್ಕೆ ಹೋದರೆ ಒಂದಿಷ್ಟು ಹೆಚ್ಚು ದುಡ್ಡು ಸಂಪಾದಿಸಿ, ಮನೆಯ ಕಷ್ಟ ನೀಗಿಸಬಹುದು ಎಂದು ನಂಬಿದ ಯುವತಿಯರು ಮೋಸ ಹೋಗಿದ್ದಾರೆ. ಕೆಲವರು ಅನ್ಯಾಯವಾಗಿದ್ದರೂ, ಮರ್ಯಾದೆಗೆ ಹೆದರಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದಿಲ್ಲ. ಪರಿಣಾಮ, ಇಂಥ ಜಾಲಗಳು ಆತಂಕವಿಲ್ಲದೆ ದುಷ್ಕೃತ್ಯಗಳನ್ನು ಮುಂದುವರಿಸುತ್ತವೆ. ಮಾನವ ಕಳ್ಳಸಾಗಾಣಿಕೆಯನ್ನು ತಡೆಗಟ್ಟಲು ಕಾನೂನೊಂದೇ ಸಾಲದು. ಈ ನಿಟ್ಟಿನಲ್ಲಿ ಸರ್ಕಾರ ಸಮಾಜಮುಖಿ ಸಂಘಸಂಸ್ಥೆಗಳ ಸಹಕಾರವನ್ನೂ ಪಡೆಯಬೇಕು. ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net