

ಚೆನ್ನೈ: ಮನೆ ಬಾಗಿಲ ಬಳಿ ಮನುಷ್ಯ ತಲೆಬುರುಡೆ, ಎಲುಬುಗಳು ನೇತಾಡುತ್ತಿರುವುದನ್ನು ಕಂಡು ತಮಿಳುನಾಡಿನ ಪಳನಿಯಲ್ಲಿ ಜನ ಭಯಭೀತರಾಗಿದ್ದಾರೆ. ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಹೋಗಿದ್ದು, ಅವರು ಸ್ಥಳಕ್ಕೆ ಆಗಮಿಸಿ ಅವುಗಳನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ. ಆದರೂ, ಜನರಿನ್ನೂ ಆತಂಕದಲ್ಲೇ ಇದ್ದಾರೆ. ಪಳನಿಯಲ್ಲಿ ಈ ಘಟನೆ ಶುಕ್ರವಾರ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮನೆಯ ಬಾಗಿಲಿನ ಎದುರು ಒಂದು ತಂತಿಯಲ್ಲಿ ಬುರುಡೆ ಮತ್ತು ಎಲುಬುಗಳನ್ನು ಪೋಣಿಸಿ ಅದಕ್ಕೆ ಅರಶಿನ, ಕುಂಕುಮ ಮತ್ತು ಕಪ್ಪು ಪುಡಿ ಬಳಿದು ವಾಮಾಚಾರ ಮಾಡಿದ ರೀತಿಯಲ್ಲಿ ಇರಿಸಲಾಗಿತ್ತು. ಪಳನಿಯ ಮೂರು ಮನೆಗಳು ಮತ್ತು ಒಂದು ಅಂಗಡಿಯ ಬಾಗಿಲಿನ ಎದುರು ಇಂತಹ ದೃಶ್ಯ ಕಂಡುಬಂದಿದೆ.
ಸ್ಥಳೀಯರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಅಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಯಾರನ್ನೂ ಪೊಲೀಸರು ಬಂಧಿಸಿಲ್ಲ. (ಏಜೆನ್ಸೀಸ್)