ಆಕಲ ಗ್ರಾಮದಲ್ಲಿ ಸೋಮೇಶ್ವರ ದೇವಸ್ಥಾನ ಉದ್ಘಾಟನೆ

1 (2)
Published on

ಹುಲ್ಲಹಳ್ಳಿ : ಹುಲ್ಲಹಳ್ಳಿ ಸಮೀಪದ ಆಕಲ ಗ್ರಾಮದಲ್ಲಿ ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನ ಮಹದೇಶ್ವರ ಬೆಟ್ಟದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ವಿಧ್ಯುಕ್ತ ಉದ್ಘಾಟನೆ ನೆರವೇರಿತು. ದೇಗುಲ ಉದ್ಘಾಟನೆಗೆ ಗ್ರಾಮಕ್ಕೆ ಗ್ರಾಮವೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು.
ಪೂರ್ಣ ಕುಂಭ ಕಳಸಹೊತ್ತ ಮಾತೆಯರು, ಛತ್ರಿ, ಚಾಮರ ಹಿಡಿದ ಭಕ್ತರು, ವೀರಗಾಸೆ ಕುಣಿತ ತಂಡ, ಮಂಗಳವಾದ್ಯ ಮತ್ತು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನೂತನ ದೇವಾಲಯಕ್ಕೆ ಸೋಮವಾರ ಮುಂಜಾನೆ ದೇವರ ವಿಗ್ರಹವನ್ನು ತರಲಾಯಿತು.
ಪ್ರಾರ್ಥನೆ, ವೇದ ಪಾರಾಯಣಗಳೊಂದಿಗೆ ಪೀಠ ಸಂಸ್ಕಾರದ ನಂತರ ನವರತ್ನ ಪಂಚಲೋಹ ಯಂತ್ರ ಸಮೇತ ಅಷ್ಟ ಬಂಧನ ನೆರವೇರಿಸಿ ವಿಧಿವತ್ತಾಗಿ ಸ್ವಾಮಿಯ ಪ್ರತಿಷ್ಠಾಪನೆ ನೆರವೇರಿಸಲಾಯಿತು. ನಂತರ ಋತ್ವಿಜರಿಂದ ಗಣಪತಿ ಹೋಮ ನೆರವೇರಿತು. ವಾದೇಶ್ವರನಿಗೆ ಅಭಿಷೇಕ, ಪ್ರಧಾನ ಹೋಮ, ಪ್ರಾಣ ಪ್ರತಿಷ್ಠೆ, ಸಂಧಾನಪೂರ್ವಕ ಶಾಂತಿ ಹೋಮ ನಡೆಯಿತು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು. ರಾತ್ರಿ 10 ನಂತರ ಶ್ರೀ ಮಹದೇವ ತಾತಾ ರವರ ಪಲ್ಲಕ್ಕಿ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪ ಅಲಂಕಾರಗಳೊಂದಿಗೆಮೆರವಣಿಗೆ ಮಾಡಲಾಯಿತು. ದೇವಾಲಯದ ಗೋಪುರ ಹಾಗೂ ಆವರಣಕ್ಕೆ, ಗ್ರಾಮದ ಪ್ರಮುಖ ಬೀದಿಗಳಿಗೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net