ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ರೂ. ಮೀಸಲು: ಪ್ರಲ್ಹಾದ್ ಜೋಶಿ

hubbali airport
Published on

ಬೆಂಗಳೂರು: ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್(Hubballi Airport Terminal) ವಿಸ್ತರಣೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ವಿಸ್ತರಣೆ ಕಾರ್ಯಕ್ಕೆ 273 ಕೋಟಿ ರೂ. ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ(Pralhad Joshi) ಮಾಹಿತಿ ನೀಡಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆ ಕಾಮಗಾರಿ ಆರಂಭವಾಗಲಿದ್ದು, ಇನ್ನೆರಡು ವರ್ಷಗಳಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಟರ್ಮಿನಲ್‌ನ ಹೊಸ ಆವೃತ್ತಿಯು 20,000 ಚದರ ಮೀಟರ್‌ನಲ್ಲಿ ವಿಸ್ತರಣೆಗೊಳ್ಳಲಿದೆ ಎಂದು ಟ್ವೀಟ್(Tweet) ಮಾಡಿ ತಿಳಿಸಿದ್ದಾರೆ.

“273 ಕೋಟಿ ರೂ.ಗಳನ್ನು ಅನುಮೋದಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಡಿಯಾ ಅವರಿಗೆ ಕೃತಜ್ಞನಾಗಿದ್ದೇನೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ರೂ. ಹೊಸ ಟರ್ಮಿನಲ್ 20,000 ಚದರ ಮೀಟರ್ (ನೆಲ + ಮೊದಲ ಮಹಡಿ) ವಿಸ್ತರಣೆಗೊಳ್ಳಲಿದೆ. ಈ ಯೋಜನೆಯಿಂದ ಉತ್ತರ ಕರ್ನಾಟಕದ ಜನರಿಗೆ ಹೆಚ್ಚು ಅನುಕೂಲವಾಗಲಿದೆ" ಎಂದು ಹೇಳಿದರು.

"ಇದು ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ದೊಡ್ಡ ವರದಾನವಾಗಲಿದೆ. ವಿಸ್ತರಣೆ ಯೋಜನೆಯು ಜನವರಿ 2024 ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು 2 ವರ್ಷಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಹುಬ್ಬಳ್ಳಿ(Hubbali) ಶೈಕ್ಷಣಿಕ ಕೇಂದ್ರವಾಗಿದ್ದು, ದೇಶಾದ್ಯಂತ ವಿದ್ಯಾರ್ಥಿಗಳು ವಿವಿಧ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಪ್ರಸ್ತುತ, ಹುಬ್ಬಳ್ಳಿ ವಿಮಾನ ನಿಲ್ದಾಣವು ಚೆನ್ನೈ, ಮುಂಬೈ, ದೆಹಲಿ, ಹೈದರಾಬಾದ್, ಪುಣೆ ಮತ್ತು ಬೆಂಗಳೂರಿಗೆ ವಿಮಾನಗಳ ಸೇವೆಯನ್ನು ಒದಗಿಸುತ್ತದೆ" ಎಂದು ಪ್ರಹ್ಹಾದ್ ಜೋಶಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net