ಓಲಾ ಚಾಲಕನಿಂದ ಲೈಂಗಿಕ ಕಿರುಕುಳ ಪ್ರಕರಣ: ಆಂತರಿಕ ದೂರು ಸಮಿತಿ ಕಾರ್ಯವೈಖರಿಗೆ ಹೈ ಬೇಸರ

highcourt
Published on

ಬೆಂಗಳೂರು: ಓಲಾ ಕ್ಯಾಬ್‌ನ ಚಾಲಕ ಲೈಂಗಿಕ ಕಿರುಕುಳ ನೀಡಿದ ಸಂಬಂಧ ಯುವತಿಯೊಬ್ಬರು ಆರು ವರ್ಷಗಳ ಹಿಂದೆ ದೂರು ನೀಡಿದ್ದರೂ ಕಂಪನಿಯ ಆಂತರಿಕ ದೂರು ಸಮಿತಿ ಕ್ರಮ ಕೈಗೊಳ್ಳದಿರುವುದರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಈ ವಿಚಾರವಾಗಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ ಎಂದಿದೆ.

ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯ್ದೆಯ 2013ರ ಸೆಕ್ಷನ್‌ಗಳ ಅನ್ವಯ ಓಲಾ ಕ್ಯಾಬ್ಸ್‌ನ ಮಾತೃಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಆಂತರಿಕ ದೂರು ಸಮಿತಿಗೆ 2018ರ ಸೆ.30ರಂದು ನೀಡಿರುವ ದೂರಿನ ತನಿಖೆ ನಡೆಸಲು ನಿರ್ದೇಶಿಸುವಂತೆ ಕೋರಿ 22 ವರ್ಷದ ಯುವತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.

ಇಂಥ ಗಂಭೀರ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಮುಖ ಸ್ಥಾನದಲ್ಲಿರುವರು, ಶಾಸನಬದ್ಧ ಅಧಿಕಾರ ಹೊಂದಿರುವವರು ಉದ್ದೇಶಪೂರ್ವಕವಾಗಿ ಎಸಗಿರುವ ಕರ್ತವ್ಯ ಲೋಪ ಮತ್ತು ವಿವರಿಸಲಾಗದ ನಿರಾಸಕ್ತಿಯನ್ನು ಈ ಪ್ರಕರಣ ಒಳಗೊಂಡಿದ್ದು, ಇದು ನ್ಯಾಯಾಲಯದ ಆತ್ಮಸಾಕ್ಷಿಗೆ ಘಾಸಿ ಉಂಟು ಮಾಡಿದೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ವಿಶೇಷ ಕಾಯ್ದೆಯಲ್ಲಿ ಅವಕಾಶವಿದ್ದರೂ ಎಎನ್‌ಐ ಟೆಕ್ನಾಲಜಿಯ ಆಂತರಿಕ ದೂರು ಸಮಿತಿಯು ಅರ್ಜಿದಾರ ಯುವತಿಯ ದೂರು ಪರಿಗಣಿಸದೇ ಇರುವುದರಿಂದ ಆಕೆಯು ಅಸಹಾಯಕತೆಯಿಂದ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಓಲಾ ಕಂಪೆನಿಗೆ ಸೇರಿದ ಕ್ಯಾಬ್‌ನ ಚಾಲಕ ಅರ್ಜಿದಾರೆಗೆ ಕಿರುಕುಳ ನೀಡಿದ್ದಾರೆ. ಆದರೆ, ಹೊರಗಿನ ಕಾನೂನು ಸಲಹೆಗಾರರು ನೀಡಿದ ಸಲಹೆ ಆಧರಿಸಿ ಆಂತರಿಕ ದೂರು ಸಮಿತಿಯು ತನಿಖೆ ನಡೆಸಲು ನಿರಾಕರಿಸಿದೆ. ಹೊರಗಿನ ಕಾನೂನು ಸಲಹೆಗಾರರಿಗೆ ಈ ವಿಚಾರದ ಬಗ್ಗೆ ಮಾಹಿತಿ ಪಡೆಯುವ ವ್ಯಾಪ್ತಿ ಇಲ್ಲ. ಇಷ್ಟಲ್ಲದೇ, ತನಿಖೆ ನಿರಾಕರಿಸಿರುವುದಕ್ಕೆ ಆಂತರಿಕ ದೂರು ಸಮಿತಿಯು ಯಾವುದೇ ಕಾರಣ ನೀಡಿಲ್ಲ. ಇನ್ನೊಂದು ಕಡೆ, ಅಗ್ರಿಗೇಟರ್ಸ್, ಮೋಟಾರು ವಾಹನಗಳು, ಚಾಲಕರು, ಟ್ಯಾಕ್ಸಿ ಇತ್ಯಾದಿಗಳ ಆಡಳಿತಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಿರುವ ರಾಜ್ಯ ಸಾರಿಗೆ ಇಲಾಖೆಯು ಈ ಪ್ರಕರಣದಲ್ಲಿ ಯಾವುದೇ ನಿಲುವು ಕೈಗೊಂಡಂತೆ ಕಾಣುತ್ತಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಈ ಹಿನ್ನೆಲೆಯಲ್ಲಿ ಪೀಠವು ಆಂತರಿಕ ದೂರು ಸಮಿತಿ ಮತ್ತು ಎಎನ್‌ಐ ಟೆಕ್ನಾಲಜೀಸ್ ಸಂಸ್ಥೆಯು ಯಾರ ಸಲಹೆ ಮೇರೆಗೆ ಅರ್ಜಿದಾರೆಯ ದೂರನ್ನು ಪರಿಗಣಿಸಲು ನಿರಾಕರಿಸಿದ್ದಾರೆ ಎಂಬ ಮಾಹಿತಿ ಸಲ್ಲಿಸಬೇಕು. ಆಂತರಿಕ ದೂರು ಸಮಿತಿಯ ಅಧ್ಯಕ್ಷರು ಸಮಿತಿಯ ಸದಸ್ಯರ ಮಾಹಿತಿಯನ್ನು ಸಲ್ಲಿಸಬೇಕು. 2016 ಏ. 2 ರಂದು ಅಗ್ರಿಗೇಟರ್ಸ್ ನಿಯಮಗಳ ಅಧಿಸೂಚನೆಯ ಅನುಪಾಲನೆ ಜವಾಬ್ದಾರಿ ಹೊಂದಿರುವ ಅಧಿಕಾರಿಯ ಮಾಹಿತಿಯನ್ನು ರಾಜ್ಯ ಸಾರಿಗೆ ಪ್ರಾಧಿಕಾರ ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಪ್ರಕರಣವನ್ನು ಆ. 20ಕ್ಕೆ ಮುಂದೂಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net