

ಬೆಂಗಳೂರು: ನಗರದ ವಿವಿಧ ಕಡೆಗಳಲ್ಲಿ ಒತ್ತುವರಿಯಾಗಿರುವ ವೃಷಭಾವತಿ ನದಿ ಮತ್ತದರ ಉಪ ನದಿಗಳ ಪ್ರದೇಶಗಳನ್ನು ತೆರವುಗೊಳಿಸುವ ಸಂಬಂಧ ಜಂಟಿ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮಲಿನಗೊಂಡಿರುವ ವೃಷಭಾವತಿ ನದಿ ಸಂರಕ್ಷಣೆ ಹಾಗೂ ಒತ್ತುವರಿ ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ನಗರದ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಬಿಬಿಎಂಪಿ ಪರ ವಕೀಲರು ಅಫಿಡವಿಟ್ ಸಲ್ಲಿಸಿ ವೃಷಭಾವತಿ ನದಿ ವ್ಯಾಪ್ತಿಯಲ್ಲಿ 17 ಎಕರೆ 25 ಗುಂಟೆ ಉಪ ನದಿಗಳ ನಾಲೆ ಒತ್ತುವರಿಯಾಗಿದೆ. ಇದಲ್ಲದೆ, ನದಿ ಕಣಿವೆಯಲ್ಲಿ 10 ಎಕರೆ 25 ಗುಂಟೆ ಒತ್ತುವರಿಯಾಗಿದ್ದು, ಇದರಲ್ಲಿ 7 ಎಕರೆ 28 ಗುಂಟೆ ಬಿಬಿಎಂಪಿ ವ್ಯಾಪ್ತಿಗೆ ಒಳಪಡುತ್ತದೆ.
ನದಿ ವ್ಯಾಪ್ತಿಗೆ ಬರುವ ಕೆರೆಗಳಲ್ಲಿ 52 ಎಕರೆ 21 ಗುಂಟೆ ಒತ್ತುವರಿಯಾಗಿದ್ದು, 48 ಎಕರೆ 31 ಗುಂಟೆ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ. ಒತ್ತುವರಿ ತೆರವಿಗೆ ಬಿಬಿಎಂಪಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಉಳಿದಂತೆ ನಗರ ಜಿಲ್ಲಾಡಳಿತದ ವ್ಯಾಪ್ತಿಗೆ ಬರುವ ಒತ್ತುವರಿಯನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆಯಲಾಗಿದೆ, ಅಲ್ಲಿಂದ ಪ್ರತಿಕ್ರಿಯೆಗೆ ಕಾಯುತ್ತಿರುವುದಾಗಿ ತಿಳಿಸಿದರು.
ಸರ್ಕಾರದ ಪರ ವಕೀಲರು ಬಿಬಿಎಂಪಿಯಿಂದ ಜಿಲ್ಲಾಡಳಿತಕ್ಕೆ ಪತ್ರ ಹೋಗಿರುವ ವಿಚಾರವಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಾಹಿತಿ ಪಡೆದುಕೊಳ್ಳಲು ಸಮಯ ಕೇಳಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಪೀಠ, ವೃಷಭಾವತಿ ನದಿಯ ಒತ್ತುವರಿ ತೆರವುಗೊಳಿಸುವ ಸಂಬಂಧ ಜಂಟಿ ಕ್ರಿಯಾ ಯೋಜನೆಯೊಂದಿಗೆ ಬನ್ನಿ ಎಂದು ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿತು.