

ಇಂಡಿ: ಯೌವ್ವನದಲ್ಲೇ ಸಮಾಜಮುಖಿ ಬದುಕನ್ನು ಆರಂಭಿಸಿದ್ದ ಸಿದ್ಧರಾಮರು ಕರ್ಮಯೋಗಿ, ಶಿವಯೋಗಿ, ಕಾಯಕಯೋಗಿಯಾಗಿ ಸಕಲ ಜೀವರಾಶಿಗಳಿಗೂ ಒಳಿತು ಬಯಸಿ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಮಂಗಳವಾರ ಆಯೊಜಿಸಿದ್ದ ಶಿವಯೋಗಿ ಸಿದ್ಧರಾಮರ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ಸಿದ್ಧರಾಮೇಶ್ವರರು 12ನೇ ಶತಮಾನದಲ್ಲೇ ಕೆರೆ, ಕಟ್ಟೆಗಳನ್ನು ನಿರ್ಮಿಸುವ ಮೂಲಕ ಜಲ ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಿದ್ದರು. ಕಾಯಕ ಮತ್ತು ಜನಹಿತಾಸಕ್ತಿ ಅವರ ಬದುಕಿನ ಎರಡು ಕಣ್ಣುಗಳಾಗಿದ್ದವು. ಸಿದ್ಧರಾಮರು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವರಾಗಿದ್ದಾರೆ ಎಂದರು.
ಶಿಕ್ಷಕಿ ಎಸ್.ಪಿ.ಪೂಜಾರಿ ಮಾತನಾಡಿ, 12ನೇ ಶತಮಾನದಲ್ಲಿ ಎರಡು ಅಂಕಿತನಾಮವಿರುವ ಏಕೈಕ ವ್ಯಕ್ತಿ ಶಿವಯೋಗಿ ಸಿದ್ಧರಾಮರು. ಅವರ ವಚನಗಳಲ್ಲಿ ವೈಯಕ್ತಿಕ ಬದುಕಿನ ಸಂಗತಿ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ ಎಂದರು.
ಶಿಕ್ಷಕಿ ಎನ್.ಬಿ. ಚೌಧರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಗ್ರಾಮಸ್ಥರಾದ ಬೇಗಂ ಮುಲ್ಲಾ, ಕಮಲಾಬಾಯಿ ದಳವಾಯಿ ಮತ್ತಿತರರಿದ್ದರು.