

ಬೆಂಗಳೂರು : ಆಟೋದಲ್ಲಿ ಮಲಗಿದ್ದ ಚಾಲಕನನ್ನು ಹೆದರಿಸಿ ಹಲ್ಲೆ ಮಾಡಿ ಮೊಬೈಲ್ ಹಾಗೂ ಹಣ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಕಳ್ಳರನ್ನು ಇಂದಿರಾನಗರ ಠಾಣೆಯ ಹೊಯ್ಸಳ ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.
ವಿನೋದ್ (೨೨), ಸ್ಟೀಫನ್ ರಾಜ್ (೨೪) ಬಂಧಿತರು.
ಜ.೩೧ರಂದು ಮುಂಜಾನೆ ೪ ಗಂಟೆ ಸಮಯದಲ್ಲಿ ಸಿದ್ದೇಶ್ ಎಂಬುವರು ತಮ್ಮ ಆಟೋದಲ್ಲಿ ಇಂದಿರಾನಗರದ ೧೦೦ ಅಡಿ ರಸ್ತೆಯ ಬದಿಯಲ್ಲಿ ಆಟೋ ನಿಲ್ಲಿಸಿ ಮಲಗಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದ ಆರೋಪಿಗಳು ಚಾಲಕನನ್ನು ಬೆದರಿಸಿ ಹಲ್ಲೆ ಮಾಡಿ ಜೇಬಿನಲ್ಲಿದ್ದ ಮೊಬೈಲ್ ಹಾಗೂ ೨,೩೦೦ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಈ ವೇಳೆ ಚಾಲಕ ಕೂಡಲೇ ಪೊಲೀಸ್ ಸಹಾಯವಾಣಿ ೧೧೨ಕ್ಕೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಹೊಯ್ಸಳ ವಾಹನದಲ್ಲಿದ್ದ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ವಿಲಿಯಮ್ ಜಾರ್ಜ್ ಮತ್ತು ಚಾಲಕ ಬೀರಪ್ಪ ಪೂಜಾರಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳ ಬೆನ್ನಟ್ಟಿ ಕೆಲವೇ ಕ್ಷಣಗಳಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಮಾಹಿತಿ ನೀಡಿದ್ದಾರೆ.
ಆರೋಪಿಗಳ ಬಂಧನದಿಂದ ಇಂದಿರಾನಗರ, ಹಲಸೂರು, ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಐದು ಸುಲಿಗೆ, ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ವಿನೋದ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ೧೦, ಸ್ಟೀಫನ್ ರಾಜ್ ವಿರುದ್ಧ ೨ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.