

ಜೂಜಾಟದಲ್ಲಿ ಸೋತ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುವ ದುರಂತವನ್ನು ತಂದುಕೊಂಡರು. ಅಜ್ಞಾತವಾಸಕ್ಕೆ ವಿರಾಟನ ರಾಜ್ಯಕ್ಕೆ ಹೋಗುವ ನಿರ್ಧಾರವನ್ನು ಮಾಡಿದರು. ಕಂಕಭಟ್ಟನೆಂದು ಯುಧಿಷ್ಠಿರ ಪೂಜೆಗೆ, ವಲಲನೆಂದು ಭೀಮ ಅಡುಗೆಗೆ, ಬೃಹನ್ನಳೆ ಎಂದು ಅರ್ಜುನ ನೃತ್ಯಕ್ಕೆ, ನಕುಲ, ಸಹದೇವರು ಅಶ್ವರಕ್ಷಣೆಗೆ, ಗೋವುಗಳ ರಕ್ಷಣೆಗೆ ನಿಯೋಜಿಸಲ್ಪಟ್ಟರು. ಸೈರಂಧಿ್ರ ಎಂಬ ಹೆಸರಿನಿಂದ ದ್ರೌಪದಿಯು ರಾಣಿಯ ಸೇವಕಿಯಾಗಿ ಸೇರಿಕೊಂಡಳು. ಅವಧಿ ಮುಗಿಯಲು ಇನ್ನು ಕೆಲವೇ ದಿನಗಳಿದ್ದಂತೆ ಮಹಾರಾಣಿಯ ತಮ್ಮನಾದ ಕೀಚಕ ಸ್ಪುರದ್ರೂಪಿಯಾದ ಪಾಂಚಾಲಿಯನ್ನು ತಾನು ಇಷ್ಟಪಡುವುದಾಗಿಯೂ, ಆಕೆಯನ್ನು ತನ್ನ ಅಂತಃಪುರಕ್ಕೆ ಕಳಿಸಬೇಕೆಂದೂ ರಾಣಿಯನ್ನು ಒತ್ತಾಯಿಸಿದ. ಅಕ್ಕ ಸುದೇಷ್ಣೆ ಕೀಚಕನ ಮಾತನ್ನು ವಿರೋಧಿಸಿದರೂ ಆತನಿಗೆ ಹೆದರಿ ಪಾಂಚಾಲಿಯನ್ನು ಕೀಚಕನ ಬಳಿ ಕಳುಹಿಸಲು ಪ್ರಯತ್ನಿಸಿದಳು.
ಪಾಂಚಾಲಿ ಅದಕ್ಕೆ ವಿರೋಧ ವ್ಯಕ್ತಪಡಿಸಿ ತನಗೆ ಐವರು ಗಂಡಂದಿರಿದ್ದಾರೆಂದೂ, ಅವರು ಗಂಧರ್ವರೆಂದೂ ಅವರು ಕೀಚಕನನ್ನು ಖಂಡಿತ ಕೊಲ್ಲುತ್ತಾರೆಂದೂ ಹೇಳಿದಳು. ಆದರೂ ಕೇಳದೇ ಕೀಚಕನ ಒತಾಯಕ್ಕೆ ಮಣಿದು ಆತನ ಬಳಿ ಅವಳನ್ನು ಕಳುಹಿಸಿದಳು. ಕೀಚಕನು ಆಕೆಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದಾಗ ಪಾಂಚಾಲಿಯು ರಕ್ಷಣೆಗೆ ಆಸ್ಥಾನಕ್ಕೇ ಓಡುತ್ತಾಳೆ. ಕಂಕಭಟ್ಟನನ್ನೇ ತನ್ನ ರಕ್ಷಣೆಗೆ ಬರುವಂತೆ ಕೋರಿದಳು. ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಕಂಕಭಟ್ಟನು, ‘ನೀನು ನಿನ್ನ ಐವರು ಗಂಧರ್ವ ಗಂಡಂದಿರಿಂದ ರಕ್ಷಣೆ ಪಡೆ. ಈಗ ಇಲ್ಲಿಂದ ಹೊರಡು’ ಎಂದ. ಅಲ್ಲಿದ್ದ ಭೀಮನು ಕೋಪದಿಂದ ಕಿಡಿಕಿಡಿಯಾದ. ಹೂಂಕರಿಸಿ ಆಸ್ಥಾನದಲ್ಲಿದ್ದ ಕಂಭವನ್ನು ಮುರಿದು ಕೀಚಕನನ್ನು ಸದೆಬಡೆಯಲು ಪ್ರಯತ್ನಿಸುತ್ತಿದ್ದಂತೆ, ‘ಎಲೈ ವಲಲ, ಆಸ್ಥಾನಕ್ಕೆ ಆಧಾರವಾಗಿದ್ದ ಕಂಭವನ್ನು ಮುರಿಯಬೇಡ. ಬೇರೆ ಕಡೆಯಲ್ಲಿರುವ ಮರವನ್ನು ಮುರಿದು ನೀನು ಅಡುಗೆಯನ್ನು ತಯಾರಿಸಿಕೊಳ್ಳಬಹುದು.
ಈಗ ಇಲ್ಲಿಂದ ಹೊರಡು...’ ಎಂದು ಮಾರ್ವಿುಕವಾಗಿ ನುಡಿದಾಗ ಭೀಮನಿಗೆ ಅರ್ಥವಾಯಿತು. ತಾನು ಆವೇಶದಲ್ಲಿ ಕೀಚಕನನ್ನು ಕೊಂದರೆ ಅದು ಕೌರವರಿಗೆ ತಿಳಿಯುತ್ತಿತ್ತು. ಕೀಚಕನನ್ನು ಭೀಮನಲ್ಲದೆ ಇನ್ನಾರೂ ಸಂಹರಿಸಲು ಸಾಧ್ಯವಿಲ್ಲದ್ದರಿಂದ ಅಜ್ಞಾತದಲ್ಲಿದ್ದ ಪಾಂಡವರನ್ನು ಗುರುತು ಹಚ್ಚಿ ಮತ್ತೆ ವನವಾಸಕ್ಕೆ ಕಳುಹಿಸುತ್ತಿದ್ದರು. ಅದಕ್ಕಾಗಿ ಅಣ್ಣನು ಈ ರೀತಿ ಸೂಕ್ಷ್ಮ ಮಾತಿನಿಂದ ಎಚ್ಚರಿಸಿದ್ದಾನೆಂಬ ಮಾತನ್ನು ಅರಿತ ಭೀಮ ಕೊನೆಗೂ ನಾಟ್ಯಶಾಲೆಯಲ್ಲಿ ಯಾರಿಗೂ ತಿಳಿಯದಂತೆ ಕೀಚಕ, ಉಪಕೀಚಕರನ್ನು ಮುಗಿಸುತ್ತಾನೆ.
ಕಷ್ಟಗಳು ಮನುಷ್ಯನಿಗೆ ಪಾಠ ಕಲಿಸುತ್ತವೆ. ಕೃಷ್ಣೆಯ ಆ ಸಂದರ್ಭ ಅತ್ಯಂತ ಕ್ಲಿಷ್ಟಕರವಾಗಿತ್ತು. ಅಲ್ಲಿಯೇ ಭೀಮನು ಕೀಚಕನನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದರೆ ರಹಸ್ಯ ಬಯಲಾಗಿ ಪುನಃ ವನವಾಸವನ್ನು ಅನುಭವಿಸಬೇಕಿತ್ತು. ಅದನ್ನೇ ಪ್ರತ್ಯುತ್ಪನ್ನಮತಿ ಎನ್ನುವುದು. ಅಲ್ಲಿ ಯೋಚನೆಗೆ ಸ್ವಲ್ಪವೂ ಸಮಯ ಇರುವುದಿಲ್ಲ. ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕು. ನಾಯಕತ್ವವನ್ನು ಸಮರ್ಪಕವಾಗಿ ನಿಭಾಯಿಸಲು, ರಾಷ್ಟ್ರವನ್ನು ಸಮರ್ಥವಾಗಿ ಪರಿಪಾಲಿಸಲು, ಆಳುಗರಿಗೆ ಇರಬೇಕಾದದ್ದು ದೂರದರ್ಶಿತ್ವ. ಅಂತೆಯೇ ಆಳುವವರು ಸೂಕ್ಷ್ಮಮತಿಯಿಂದ ರಾಷ್ಟ್ರವನ್ನು ಪ್ರಗತಿಯ ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕು.
(ಲೇಖಕರು ನಿವೃತ್ತ ಉಪನ್ಯಾಸಕ, ಗಮಕಿ)
(ಪ್ರತಿಕ್ರಿಯಿಸಿ: manollasavv@gmail.com)