ಹೃದ್ರೋಗ ಬರದಂತೆ ತಡೆಯುವುದು ಹೇಗೆ?

Heart
Published on

ಅದೆಷ್ಟೋ ರೋಗಗಳು ನಾವೆಣಿಸಿದಂತೆ ಆಕಸ್ಮಿಕಗಳಲ್ಲ! ಶರೀರದೊಳಗೆ ರೋಗ ಪ್ರಕ್ರಿಯೆ ಪ್ರಾರಂಭವಾಗಿ ದೇಹದಲ್ಲಿನ ಸಹಜ, ಪ್ರಾಕೃತ ಕಾರ್ಯಚಟುವಟಿಕೆಯಲ್ಲಿ ವ್ಯತ್ಯಯ ಉಂಟಾಗಿ ಹಲವು ಸಮಯ ಕಳೆದಿರುತ್ತದೆ. ನಾವು ಮಾಡುವ ಆಹಾರ ಆಚಾರದ ಆಭಾಸಗಳು ಹಾಗೂ ನಾವೆಸಗುವ ವಿಹಾರ ವಿಚಾರದ ವಿಪರೀತಗಳನ್ನೆಲ್ಲಾ ವರ್ಷಾನುಗಟ್ಟಲೆ ಸಹಿಸಿಕೊಂಡು, ಸಂಭಾಳಿಸಿಕೊಂಡು ದೇಹವು ಮುಂದೆ ಸಾಗಿರುತ್ತದೆ.


ವ್ಯಾಧಿಯೆಂಬ ವಿಕೃತಿಯೊಡನೆ ನಡೆಯುವ ಈ ಕಾಳಗದಲ್ಲಿ ಕೊನೆಗೊಮ್ಮೆ ಶರೀರವು ಶರಣಾದಾಗ ಕಾಯಿಲೆಯ ಅರಿವು ನಮಗಾಗುತ್ತದೆ. ಯಕೃತ್​ನ ಕಾರ್ಯವೈಫಲ್ಯವಿರಲಿ, ಕೊನೆಯ ಹಂತದ ಕ್ಯಾನ್ಸರ್​ ಆಗಿರಲಿ ಅಥವಾ ಹೃದಯಾಘಾತವೇ ಇರಲಿ ದಿನ ಬೆಳಗಾಗುವುದರಲ್ಲಿ ಸಹಜಸ್ಥಿತಿಯಿಂದ ರೋಗದ ಆ ಹಂತಕ್ಕೆ ತಲುಪಿಬಿಡುವುದಲ್ಲ. ಪ್ರಾಕೃತವಾಗಿರುವುದು ವಿಕೃತವಾಗಲು ಸಮಯ ಬೇಕು. ಹಾಗೆಂದು ಅದು ತನ್ನಿಂದತಾನೇ ಆಗುವುದಿಲ್ಲ. ಆಹಾರ ನಿಯಮಗಳನ್ನು ಪಾಲಿಸದೆ ಇರುವುದು, ವ್ಯಾಯಾಮ ನಿಯಮಗಳನ್ನು ಗಾಳಿಗೆ ತೂರುವುದು, ಚಿಕಿತ್ಸೆಯಲ್ಲಿನ ಲೋಪದೋಷ ಮತ್ತು ವ್ಯತ್ಯಾಸಗಳು, ಭಯ, ಭೀತಿ, ಚಿಂತೆ, ಕೋಪ, ಉದ್ವೇಗವೇ ಮುಂತಾದ ಮಾನಸಿಕ ಕಾರಣಗಳು, ಜ್ವರ, ವಾತಜ ಗ್ರಹಣಿ, ಅತಿಸಾರ, ಆಸ್ತಮಾ, ಗುಲ್ಮ, ಮೂರ್ಛಾರೋಗ, ಆಮವಾತ, ರಕ್ತಪಿತ್ತ ಮೊದಲಾದ ರೋಗಗಳಿಂದಾಗಿ ಕೂಡ ಹೃದ್ರೋಗಗಳು ಬರುತ್ತವೆ ಎಂದು ಸಹಸ್ರಾರು ವರ್ಷಗಳ ಹಿಂದೆಯೇ ಆಯುರ್ವೇದ ಹೇಳಿರುವುದು ನಿಜಕ್ಕೂ ಅಚ್ಚರಿ ತರುತ್ತದೆ.

ಕರೊನಾ ಜ್ವರ ಬಾಧಿತರಲ್ಲಿ ಕೆಲವರಿಗೆ ಒಂದೆರಡು ತಿಂಗಳಲ್ಲಿ ಹೃದಯಾಘಾತ ಆಗುತ್ತಿರುವುದು ಪ್ರಸ್ತುತ ನಮ್ಮ ಕಣ್ಣೆದುರಿಗಿದೆ. ರುಮ್ಯಾಟಿಕ್​ ಹೃದಯದ ಕಾಯಿಲೆ ಕೂಡ ಆ ಕಾಲದಲ್ಲೇ ಇತ್ತು ಮತ್ತು ತಿಳಿದಿತ್ತೆಂದರೆ ರೋಮಾಂಚನವಾಗುತ್ತದೆ. ರಕ್ತಸ್ರಾವದ ತೊಂದರೆಗಳಿಂದ ಹೃದ್ರೋಗಕ್ಕೆ ಕಾರಣವಾಗುವುದು, ತೀವ್ರ ಉಸಿರಾಟದ ಸಮಸ್ಯೆಗಳಿಂದ ಹೃದಯ ಶಕ್ತಿ ಕಳೆದುಕೊಂಡು ವ್ಯಾಧಿಗ್ರಸ್ತವಾಗುವುದೂ ಅಂದೇ ತಿಳಿದಿತ್ತೆಂಬುದು ಗ್ರಾಹ್ಯವಾಗುತ್ತದೆ. ಪ್ರತ್ಯೇಕವಾಗಿ ಹೃದ್ರೋಗ ಬರಲು ಹೇಳಲಾಗಿರುವ ಕಾರಣಗಳನ್ನು ತಿಳಿದುಕೊಂಡು ಅವುಗಳಿಂದ ದೂರವುಳಿಯಲು ಯಥಾಸಾಧ್ಯ ಪ್ರಯತ್ನವನ್ನು ಹಾಕಿದರೆ ಬರಬಹುದಾದ ಹೃದ್ರೋಗಗಳನ್ನು ತಡೆಯಲು ಸಾಧ್ಯ ಎಂದು ಆಯುರ್ವೇದ ಮಾರ್ಮಿಕವಾಗಿ ಹೇಳಿದೆ. ಕೊರಗು ಅಥವಾ ಅಳಲು, ಅಧಿಕ ಉಪವಾಸ, ಅತಿವ್ಯಾಯಾಮ, ಜಿಡ್ಡಿಲ್ಲದ ಒಣ ಆಹಾರ, ನಿ@ಸತ್ವ ಆಹಾರ, ಅಲ್ಪ ಪ್ರಮಾಣದ ಭೋಜನಗಳು ವಾತಜ ಹೃದ್ರೋಗಕ್ಕೆ ಕಾರಣವಾಗುತ್ತದೆ. ಅತಿ ಬಿಸಿಯಾದ ಆಹಾರಸೇವನೆ, ಹುಳಿ, ಉಪ್ಪು, ಖಾರ, ಾರೀಯ ಊಟ ಅತಿಸೇವನೆ, ಅಜೀರ್ಣವಿದ್ದಾಗ ಊಟಮಾಡುವುದು, ಮದ್ಯಪಾನ, ಕೋಪ ಹಾಗೂ ಸುಡುಬಿಸಿಲಿಗೆ ಮೈಯೊಡ್ಡುವುದರಿಂದ ಪಿತ್ತಜ ಹೃದ್ರೋಗ ಆವರಿಸಿಕೊಳ್ಳುತ್ತದೆ. ಅತಿ ಪ್ರಮಾಣದ ಭೋಜನ, ಸುಲಭವಾಗಿ ಜೀರ್ಣವಾಗದ ಆಹಾರ ಸೇವಿಸುವುದು, ಅತಿಯಾಗಿ ಜಿಡ್ಡು ಪದಾರ್ಥ ಬಳಸುವುದು, ಬೇಕಾಬಿಟ್ಟಿ ಬದುಕುವುದು, ಸದಾ ಕುಳಿತೇ ಇರುವುದು, ಅಧಿಕವಾಗಿ ನಿದ್ರಿಸುವುದು ಕಫಜ ಹೃದ್ರೋಗವನ್ನು ತಂದೊಡ್ಡುತ್ತದೆ. ಈ ಮೂರು ಹೃದ್ರೋಗಗಳ ಕಾರಣಗಳೆಲ್ಲ ಒಟ್ಟಾಗಿ ತ್ರಿದೋಷಜ ಹೃದ್ರೋಗಕ್ಕೆ ಅಂದರೆ ಇಂದು ನಾವು ಹೇಳುವ ಹೃದಯಾಘಾತಕ್ಕೆ ಮೂಲ ಕಾರಣಗಳಾಗುತ್ತವೆ.

ಕ್ರಿಮಿಜ ಹೃದ್ರೋಗ ಬರಲು ಕಾರಣಗಳನ್ನು ವಿವರಿಸುತ್ತಾ ಹೆಚ್ಚಿನ ಪ್ರಮಾಣದಲ್ಲಿ ಎಳ್ಳು ಸೇವನೆ, ಅತಿಯಾಗಿ ಹಾಲು ಕುಡಿಯುವುದು ಹಾಗೂ ಅದರ ಉತ್ಪನ್ನಗಳ ಸೇವನೆ, ಮಿತಿಮೀರಿ ಬೆಲ್ಲ, ಬೆಲ್ಲದ ಪದಾರ್ಥಗಳನ್ನು ತಿನ್ನುವುದು ಹಾಗೂ ಇತರ ಹೃದ್ರೋಗಗಳ ಕಾರಣಗಳನ್ನೂ ಅಡಕಗೊಳಿಸಿದೆ. ಅತಿಯಾಗಿ ಬೆಲ್ಲ ಸೇವಿಸುವುದರಿಂದ ಮಧುಮೇಹವೂ ಬರುತ್ತದೆ ಎಂದೂ ಆಯುರ್ವೇದ ಹೇಳಿರುವುದು ಇಲ್ಲಿ ಗಮನಾರ್ಹ. ಹೃದಯದ ರೋಗಗಳನ್ನು ತಡೆಗಟ್ಟಲು ಇವೆಲ್ಲ ಕಾರಣಗಳನ್ನು ಬಿಡುವುದು ಎಷ್ಟು ಮುಖ್ಯವೋ, ಆಯುರ್ವೇದ ಹೇಳಿದ ಆಚಾರ&ವಿಚಾರ, ಆಹಾರ&ವಿಹಾರಗಳ ಪಾಲನೆಯೂ ಅಷ್ಟೇ ಮುಖ್ಯವಾಗುತ್ತದೆ. ದಿನಚಯೆರ್, ಋತುಚಯೆರ್ಗಳಲ್ಲಿನ ಅನೇಕ ವಿಚಾರಗಳು ಹೃದಯವನ್ನು ಸದೃಢಗೊಳಿಸಲು ನೆರವಾಗುತ್ತವೆ. ಆರು ತಿಂಗಳೊಳಗಿನ ಅಕ್ಕಿ, ಗೋಧಿ, ಮುಂತಾದ ಹೊಸ ಧಾನ್ಯಗಳನ್ನು ಬಳಸುವುದು ಕೂಡಾ ಹೃದ್ರೋಗಗಳಿಗೆ ಎಡೆಮಾಡಿಕೊಡುತ್ತದೆ. ಹಳೆಯ ಧಾನ್ಯಗಳೇ ಹೃದಯಕ್ಕೆ ಹಿತ. ಅಪಾನವಾಯು, ಮಲ, ಮೂತ್ರ, ಸೀನು, ಬಾಯಾರಿಕೆ, ಹಸಿವು, ನಿದ್ರೆ, ಕೆಮ್ಮು, ಏದುಸಿರು, ಆಕಳಿಕೆ, ಕಣ್ಣೀರು, ವಾಂತಿ, ಬಿಕ್ಕಳಿಕೆ, ಪುರುಷರಲ್ಲಿ ವೀರ್ಯ, ಸ್ತ್ರೀಯರಲ್ಲಿ ಅಂಡಾಣು ಸ್ರಾವ&ಈ ವಿಧವಾದ ಹದಿಮೂರು ವೇಗಗಳನ್ನು ಯಾವತ್ತೂ ತಡೆಯಬಾರದು. ಚಿಕಿತ್ಸೆ ಪಡೆದು ಸರಿಪಡಿಸಿಕೊಳ್ಳಬೇಕೇ ಹೊರತು ತಡೆಯುವುದರಿಂದ ಹೃದಯದ ಕಾರ್ಯವ್ಯತ್ಯಯಕ್ಕೆ ಕಾರಣವಾಗುತ್ತದೆ. ಶರೀರ, ಮನಸ್ಸುಗಳಿಗೆ ಸರಿಯಾದ ವಿಶ್ರಾಂತಿಯೂ ಅತ್ಯಗತ್ಯ. ದೇಹಕ್ಕೆ ವ್ಯಾಯಾಮವೂ ಬೇಕು, ಅಷ್ಟಾಂಗ ಯೋಗವೂ ಬೇಕು. ಜೊತೆಯಲ್ಲಿ ವಿಶ್ರಾಂತಿಯೂ ಬೇಕು. ಇವಿಲ್ಲವಾದಲ್ಲಿ ಹೃದಯವೂ ಚಿರವಿಶ್ರಾಂತಿಯ ಮೊರೆಹೋದೀತು! ಹೃದಯದ ಆರೈಕೆ ಹೃತ್ಪೂರ್ವಕವಾಗಿರಲಿ.

(ಪ್ರತಿಕ್ರಿಯಿಸಿ: vvsudina@gmail.com)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net