

ಬಹಳ ಸಲ ಮಕ್ಕಳು ಪ್ರಶ್ನೆ ಕೇಳುತ್ತಾರೆ. ನಮ್ಮ ತಪ್ಪಿಲ್ಲದೆಯೇ ಎಷ್ಟೋ ಸಲ ನಾವು ಬೈಯಿಸಿಕೊಳ್ಳಬೇಕಾಗುತ್ತದೆ. ಪೋಷಕರು-ಶಿಕ್ಷಕರು, ಫ್ರೆಂಡ್ಸ್..., ನಮಗೆ ಬೈದಾಗ ಅವಮಾನವೆನಿಸುತ್ತದೆ, ಹೇಳಲಾಗದ ಅಸಹಾಯಕತೆ ಇರುತ್ತದೆ. ಇದರಿಂದ ನಮ್ಮ ಆತ್ಮವಿಶ್ವಾಸ ಕುಗ್ಗಿ ಹೋಗುತ್ತದೆ.ಇವುಗಳನ್ನು ಹೇಗೆ ದಾಟಿ ನಿಲ್ಲುವುದು.
ಎಷ್ಟೋ ಮಕ್ಕಳಿಗೆ ಇಂತಹ ಕಾರಣದಿಂದಾಗಿಯೇ ತೊದಲುವಿಕೆ, ಉಗ್ಗುವಿಕೆ, ಮೈ ಬೆವರುವುದು, ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಪರೀಕ್ಷೆಯಲ್ಲಿ ಉತ್ತರ ಮರೆತುಹೋಗುವುದು ಇತ್ಯಾದಿ ಅನೇಕ ಸಮಸ್ಯೆಗಳು ಕೂಡ ಕಂಡುಬರಬಹುದು.
ಸರಿಯಾಗಿ ನಿರ್ವಹಿಸದಿದ್ದರೆ ಇದು ವ್ಯಕ್ತಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳವಣಿಗೆಯಾಗದಂತೆ ದೊಡ್ಡ ತೊಂದರೆ ಉಂಟುಮಾಡಬಹುದು.
‘ಬೈಯ್ಯುವರೆನ್ನ ಜನ್ಮಬಂಧುಗಳೆಂಬೆ’ ಎಂಬ ಸರ್ವಜ್ಞನ ವಚನ ವನ್ನು ನೆನಪಿಸಿಕೊಳ್ಳುತ್ತ ಮುಂದುವರೆಯೋಣ.
ಬಯ್ಯುತ್ತಿರುವವರ ಬಗ್ಗೆ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಸಾಮಾನ್ಯ ಹಿಂದಿರುವ ಉದ್ದೇಶ ವಿಷಯಗಳು.
ಇನ್ನು ಕೆಲವರು ವ್ಯಕ್ತಿಯಲ್ಲಿನ ದೋಷ ತಿದ್ದಿ ಸರಿಪಡಿಸಲು ಬಯ್ಯುತ್ತಾರೆ. ಎರಡನೇ ಗುಂಪಿನವರು ವ್ಯಕ್ತಿಯನ್ನು ತಿದ್ದುವ ಉದ್ದೇಶದಿಂದ ಬರೆಯುತ್ತಿರುತ್ತಾರೆ. ಅದೇ ವ್ಯಕ್ತಿಯಲ್ಲಿ ಒಂದೇ ತಪ್ಪನ್ನು ಪದೇ ಪದೇ ನೋಡಿರುತ್ತಾರೆ. ಬೇರೆ ಬೇರೆ ವಿಧಾನದಲ್ಲಿ ತಿಳಿಸಿಹೇಳಲು ಪ್ರಯತ್ನಿಸಿದರೂ ನಿರೀಕ್ಷಿತ ಬದಲಾವಣೆ ಬಾರದಿದ್ದಲ್ಲಿ ನಿಧಾನವಾಗಿ ಕೋಪ ಬೆಳೆಯುತ್ತಾ ಹೋಗಿ ನಂತರದಲ್ಲಿ ಬೈಗುಳ ಕಾಣಿಸಿಕೊಳ್ಳಬಹುದು. ಯಾವ ತಪ್ಪನ್ನು ಕುರಿತು ಅವರು ಕೋಪ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಕೊಂಡಲ್ಲಿ ಆ ಸ್ವಭಾವನ್ನು ತಿದ್ದಿಕೊಳ್ಳಲು ಸುಲಭವಾಗುತ್ತದೆ. ಈ ರೀತಿ ಬಯ್ಯುವವರು ನಮ್ಮ ಬಗ್ಗೆಪ್ರೀತಿ ಹೊಂದಿದವರಾಗಿರುತ್ತಾರೆ. ಇದನ್ನು ಸಕಾರಾತ್ಮಕವಾಗಿ ತಿರುಗಿಸಿ ಕೊಳ್ಳುವುದು ಸುಲಭ ಹಾಗೂ ಮುಖ್ಯ.ನಮ್ಮಲ್ಲಿ ಅಗತ್ಯ ಬದಲಾವಣೆ ಬರುವವರೆಗೂ ಪ್ರಯತ್ನ ಮುಂದುವರಿಸುತ್ತಾರೆ. ಮೇಲ್ನೋಟಕ್ಕೆ ಬೈದಂತೆ ಕಂಡರೂ ಮಕ್ಕಳ ಯಶಸ್ಸನ್ನು ಕಂಡು ಅತ್ಯಂತವಾಗಿ ಆನಂದಿಸುವವರಾಗಿರುತ್ತಾರೆ.
ಕೆಲವರು ತಮ್ಮೊಳಗಿನ ಕೋಪ ಹೊರಹಾಕಲು ಬಯ್ಯುತ್ತಾರೆ, ಬಗ್ಗೆ ಬದುಕಿನ ಸಂಕಷ್ಟದಲ್ಲಿ ಯಾರಿಂದಲೋ ತಮಗಾದ ನೋವು, ಅವಮಾನ, ನಷ್ಟ ಸಂಕಷ್ಟಗಳನ್ನು ಹೊರಹಾಕಲು ಕಾಯುತ್ತಿರುತ್ತಾರೆ. ಆಗ ಗೊತ್ತಿಲ್ಲದೆಯೇ ಕೋಪದ ಅಭಿವ್ಯಕ್ತಿ ಬೈಗುಳದ ರೂಪದಲ್ಲಿ ಹೊರಹೊಮ್ಮಬಹುದು. ತಮ್ಮೊಳಗಿನ ಕೋಪ ಅಸಹನೆಯನ್ನು ಹೊರಹಾಕಲು ಬರೆಯುತ್ತಿರುವವರಾದರೆ ಎದುರಿಗಿರುವವರ ಮೇಲೆ ಅವರಿಗೆ ಬೇರೆ ಇನ್ನೇನು ದುರುದ್ದೇಶ ಇರುವುದಿಲ್ಲ.ತಮ್ಮ ಕೋಪ ತಣ್ಣಗಾದ ಮೇಲೆ ತಮ್ಮ ನಡುವಳಿಕೆಗೆ ಪಶ್ಚಾತ್ತಾಪ ಪಡುತ್ತಾರೆ ಅಥವಾ ಮನಸ್ಸಿನಲ್ಲಿಯೇ ಪರಿತಪಿಸುತ್ತಾರೆ.
ಕೆಲವರು ಅವಮಾನ ಪಡಿಸಲಿಕ್ಕಾಗಿಯೇ ಬೈಯ್ಯುತ್ತಾರೆ. ಕೆಲವರಿಗೆ ಸ್ವಭಾವತಹ ಅಸೂಯೆಗೆ ಪ್ರವೃತ್ತಿ ಇರುತ್ತದೆ. ಬೇರೆಯವರ ನೋವಿನಿಂದ ಸಂತೋಷಪಡುವ ಸ್ವಭಾವವಿರುತ್ತದೆ. ಇಂಥವರು ಮತ್ತೊಬ್ಬರನ್ನು ಅವಮಾನ ಪಡಿಸಲಿಕ್ಕೆ ಬಯ್ಯುತ್ತಾರೆ. ಇಂಥವರನ್ನು ಎದುರಿಸುವಾಗ ಎಚ್ಚರಿಕೆಯಿಂದ ಇರಬೇಕು. ಇಂತಹವರ ಮಾತುಗಳನ್ನು ಮನಸ್ಸಿಗೆ ದಕ್ಕೆ ಮಾಡಿಕೊಳ್ಳದೆ ಕೇವಲ ವೀಕ್ಷಣೆ ಮಾಡಿ.ಪ್ರತಿಕ್ರಿಯೆ ಮಾಡಬೇಡಿ.
ಕೆಲವರು ಬೈಯುವುದನ್ನು ಸ್ವಭಾವ ಮಾಡಿಕೊಂಡಿರುತ್ತಾರೆ. ಬೈಯ್ಯುವುದನ್ನು ಸ್ವಭಾವ ಮಾಡಿಕೊಂಡವರಲ್ಲಿ ಎಲ್ಲಕ್ಕೂ ಸಿಡಿಮಿಡಿ ಇರುತ್ತದೆ ಅದನ್ನೇ ಅಭ್ಯಾಸ ಮಾಡಿಕೊಂಡಾಗ ಅವರಲ್ಲಿ ಹೆಚ್ಚಿನ ಬದಲಾವಣೆ ತರುವುದು, ನಿರೀಕ್ಷಿಸುವುದು ಕಷ್ಟ. ಹಾಗಾಗಿ ಇವರ ಪ್ರತಿಯೊಂದು ಮಾತನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಅವರ ಸ್ವಭಾವವೇ ಹಾಗೆಂದು ಗುರುತಿಸಿ, ಅವರು ಇರುವಂತೆಯೇ ಒಪ್ಪಿಕೊಳ್ಳುವುದು ಮುಖ್ಯ.
ಕೋಪ ಯಾವುದೇ ಮೂಲ ಹೊಂದಿದ್ದರೂ, ಕೋಪಿಷ್ಟರು ಯಾವುದೇ ಸ್ವಭಾವ ಉದ್ದೇಶ ಹೊಂದಿದ್ದರೂ ಕೂಡ ಆ ಕ್ಷಣದಲ್ಲಿ ಆಗಿರುವ ನೋವಿನಿಂದ ಹೊರ ಬರಲು ಪಾಲಿಸಬಹುದಾದ ಕೆಲವು ಸೂಚನೆಗಳು.
ಕೋಪದಲ್ಲಿ ಹೇಳುತ್ತಿರುವ ಎಲ್ಲಾ ಮಾತುಗಳನ್ನು ಯಥಾವತ್ತಾಗಿ ಸ್ವೀಕರಿಸಬೇಡಿ. ಮಾತಿನಲ್ಲಿ ಅಭಿವ್ಯಕ್ತವಾಗುತ್ತಿರುವ ಮೂಲ ಕಾರಣವನ್ನು ಅರ್ಥಮಾಡಿಕೊಳ್ಳಿ ಅವರು ಉದ್ದೇಶಿಸುತ್ತಿರುವ ತಪ್ಪುಗಳು ನಿಮ್ಮಲ್ಲಿ ಇದ್ದಲ್ಲಿ ತಕ್ಷಣದಿಂದಲೇ ಅದನ್ನು ತಿದ್ದಿಕೊಳ್ಳಲು ಸಂಕಲ್ಪ ಹಾಗೂ ಸರ್ವ ಪ್ರಯತ್ನ ಮಾಡಿ.
ಕೆಲವು ಮಾತುಗಳು ನಿಮ್ಮ ವ್ಯಕ್ತಿತ್ವವನ್ನೇ ಪ್ರಶ್ನಿಸುವಂತಹ ಹಾಗೂ ಮನಸ್ಸಿಗೆ ಧಕ್ಕೆಯಾಗುತ್ತಿದ್ದಲ್ಲಿ ಅದು ವ್ಯಕ್ತಿಯ ಅಭಿಪ್ರಾಯ ಎಂದು ಪರಿಗಣಿಸಿ ಆದರೆ ನೀವು ಅದಲ್ಲ ಎಂದು ಸ್ಪಷ್ಟತೆ ಇರಲಿ. ಉದಾಹರಣೆಗೆ ನೀವು ಮಾಡದಿರುವ ಕಳ್ಳತನದ ಆರೋಪ ಬಂದಿದ್ದಲ್ಲಿ, ಅದು ಅವರ ಅಭಿಪ್ರಾಯವೇ ಹೊರತು ನಾನು ಕಳ್ಳನಲ್ಲ ಎನ್ನುವ ಸ್ಪಷ್ಟತೆ ಬಂದಾಗ ಭಾವನಾತ್ಮಕ ವಿಕೋಪಗಳು ಮೇಲೆ ಎದ್ದು ಬಂದು ಪರಿಸ್ಥಿತಿಯನ್ನು ಹದಗೆಡಿಸಿದಂತೆ ಕಾಪಾಡುತ್ತದೆ. ಹಾಗೂ ಸಮಾಧಾನದಿಂದ ಶಾಂತತೆಯಿಂದ ಪರಿಸ್ಥಿತಿಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
ಮನಶಕ್ತಿ ಸಾಮರ್ಥ್ಯ ಹೆಚ್ಚುವವರೆಗೆ ಇಂತಹ ವ್ಯಕ್ತಿಗಳಿಂದ ದೂರವಿರುವುದು ಉತ್ತಮ. ಮಾತನಾಡುತ್ತಿರುವ ಧ್ವನಿಯ ಏರಿಳಿತಗಳಿಂದಲೇ ಅವರು ಬರೆಯುತ್ತಿದ್ದಾರೆ ಎನ್ನುವ ಭ್ರಮೆಗೆ ಬರಬೇಡಿ.ಕೆಲವರಿಗೆ ತಾವು ಮಾತಾಡುವ ವಿಷಯಕ್ಕನುಗುಣವಾಗಿ ಧ್ವನಿ ಏರಿ ಬಿಡುತ್ತದೆ ಮಾತುಗಳು ಸ್ಪಷ್ಟವಾಗಿದ್ದರೆ ಧ್ವನಿಯಲ್ಲಿ ಏರಿಳಿತ ಗಳಿದ್ದರೆ ತಪ್ಪು ತಿಳಿದುಕೊಳ್ಳಬೇಡಿ.
ದ್ವೇಷ ಸಾಧಿಸಬೇಡಿ ಇದರಿಂದ ನಮ್ಮ ವ್ಯಕ್ತಿತ್ವ ಸ್ವಭಾವ ಎರಡು ವ್ಯತ್ಯಾಸಗೊಳ್ಳುತ್ತದೆ ಇನ್ನೊಬ್ಬ ವ್ಯಕ್ತಿಯನ್ನು ಬದಲಾಯಿಸಲು ಹೋಗಿ ನಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳುವುದು ಜಾಣತನವಲ್ಲ. ಬದಲಿಗೆ ನಮ್ಮ ಮುಂದಿನದಾರಿ ಹೆಚ್ಚು ಸ್ಪಷ್ಟ ಪಡಿಸಿಕೊಳ್ಳುತ್ತಾ, ಇಂತಹ ನಕಾರಾತ್ಮಕ ಸ್ವಭಾವಗಳ ಪರಿಣಾಮವನ್ನು ಅರ್ಥಮಾಡಿಕೊಂಡು, ಅವುಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳದಂತೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡಾಗ ನಮ್ಮ ಮುಂದಿನ ಜೀವನ ಸಂತೋಷ ಹಾಗೂ ಯಶಸ್ಸಿನಿಂದ ತುಂಬಿಕೊಳ್ಳುತ್ತದೆ. ಉತ್ತಮ ಭವಿಷ್ಯಕ್ಕಾಗಿ ಭಾವನಾತ್ಮಕ ವಿಕೋಪಗಳನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ನಿಮ್ಮ ಕೈಲಿದೆ.