ಈಶನ ಅನುಭವವಾಗುವುದು ಹೇಗೆ?

Published on
 ಈಶಾವಾಸ್ಯಮಿದಂ ಸರ್ವಂ. ಯತ್ಕಿಂಚ ಜಗತ್ಯಾಂ ಜಗತ್’- ಈ ವಿಶ್ವದ ಪ್ರತಿಯೊಂದು ಕಣವೂ ಸಹ ಈ ಒಂದು ಸತ್ಯದಿಂದ, ಒಂದೇ ದೈವದಿಂದ, ಒಂದೇ ಶಕ್ತಿಯಿಂದ ಆವೃತವಾಗಿದೆ. ಈ ಶಕ್ತಿಯು ಬುದ್ಧಿವಂತಿಕೆ. ಭೌತಶಾಸ್ತದಲ್ಲಿರುವಂತೆ ಅದು ಸತ್ತ ಶಕ್ತಿಯಲ್ಲ. ಅದು ಜೀವ. ಜೀವವು ನಿಮ್ಮ ಸುತ್ತಲೂ ನಿಮ್ಮನ್ನು ಆವರಿಸಿದೆ ಮತ್ತು ಕಣ್ಣುಗಳಿಲ್ಲದೆಯೆ ಅದು ನಿಮ್ಮನ್ನು ನೋಡಬಲ್ಲದು. ಚರ್ಮವಿಲ್ಲದೆಯೆ ಪ್ರಾಣಶಕ್ತಿಯು ನಿಮ್ಮನ್ನು

ಅನುಭವಿಸಬಲ್ಲದು. ಮಾತಿಲ್ಲದೆಯೆ ಆ ಪ್ರಾಣಶಕ್ತಿ ನಿಮ್ಮೊಡನೆ ಸಂರ್ಪಸಬಲ್ಲದು. ಆ ಪ್ರಾಣಶಕ್ತಿಯೆ ಈಶ್ವರ. ಸಂಸ್ಕೃತದಲ್ಲಿ ವಿರೂಪಾಕ್ಷ ಎಂಬ ಪದವಿದೆ. ಇದರ ಅರ್ಥ, ರೂಪವಿಲ್ಲದೆ ಕಣ್ಣನ್ನು ಹೊಂದಿರುವವ. ಶಿವನನ್ನು ವಿರೂಪಾಕ್ಷ ಎಂದು ಕರೆಯುತ್ತಾರೆ. ಶಿವ ತತ್ವವು ಗಾಳಿಯಂತೆ, ಆಕಾಶದಂತೆ, ನೀವು ಅನುಭವಿಸುವ ತಾಪ, ಅನುಭವಿಸುವ ನೀರಿನ ಶಿಥಿಲತೆ, ಎಲ್ಲಾ ಐದು ಭೂತಗಳೂ ಶಿವನೆ. ‘ನಮಃ ಶಿವಾಯ’ ಎಂಬ ಪದವು ಐದು ಅಕ್ಷರಗಳನ್ನು ಹೊಂದಿದ್ದು, ಐದು ಭೂತಗಳನ್ನು ಅವು ಪ್ರತಿನಿಧಿಸುತ್ತವೆ. ಯಾವುದು ಈ ವಿಶ್ವದ ಐದು ತತ್ವಗಳನ್ನು ಆಳುತ್ತಿದೆಯೊ, ಯಾವುದು ಅವುಗಳನ್ನು ಪಸರಿಸಿದೆಯೊ ಅದೇ ಶಿವ. ವಿಜ್ಞಾನಿಗಳು ಇದನ್ನು ಕಪ್ಪು ಭೌತಿಕ ವಸ್ತು ಮತ್ತು ಕಪ್ಪು ಶಕ್ತಿ ಎಂದು ಕರೆಯುತ್ತಾರೆ.

ಸೂರ್ಯನು ಏಕೆ ಗೋಳಾಕಾರದಲ್ಲಿದ್ದಾನೆ ಎಂದು ನಿಮಗೆ ಗೊತ್ತೆ? ಏಕೆಂದರೆ ಅದರ ಸುತ್ತಲೂ ಇರುವ ಕಪ್ಪು ಶಕ್ತಿ

ಅದರ ಮೇಲೆ ಒತ್ತಡವನ್ನು ನಿರಂತರವಾಗಿ ಹೇರುತ್ತಿದೆ. ಸೂರ್ಯನ ಸುತ್ತಲೂ ಇರುವ ಅಗೋಚರವಾದ ಆಕಾಶವು ಸೂರ್ಯನಿಗಿಂತಲೂ ಸಾವಿರ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಗಾಳಿಯ ಒಂದು ಬುದ್ಭುದವು (ಬುದ್ಬುದ ಎಂದರೆ ಒಂದು ವಸ್ತುವಿನಲ್ಲಿ ಮತ್ತೊಂದು ವಸ್ತುವಿನ ಗೋಳಕಣ) ನೀರಿನ ಬಾಟಲಿಯೊಳಗೆ ಸಿಲುಕಿಕೊಂಡಂತೆ. ಗಾಳಿಯ ಬುದ್ಭುದವೇಕೆ

ಗೋಳಾಕಾರದಲ್ಲಿದೆ? ಅದರ ಸುತ್ತಲೂ ನೀರಿನ ಒತ್ತಡವಿರುವುದರಿಂದ. ಅದೇ ರೀತಿಯಾಗಿ ಖಾಲಿಯಾದ ಆಕಾಶದಲ್ಲಿರುವ ಒತ್ತಡವು ಎಷ್ಟಿದೆಯೆಂದರೆ, ಎಲ್ಲಾ ದಿವ್ಯ ದೇಹಗಳೂ ಗೋಳಾಕಾರದಲ್ಲಿವೆ. ಅವುಗಳ ಸ್ವಇಚ್ಛೆಯಿಂದ ಅವು ಗೋಳಾಕಾರವಾಗಿಲ್ಲ. ಖಾಲಿಯಾದ ಆಕಾಶವು ಶಕ್ತಿಯಿಂದ ಪೂರ್ಣವಾಗಿ ತುಂಬಿದೆ. ಉಪನಿಷತ್ತುಗಳು, ‘ಈಶಾವಾಸ್ಯಂ ಇದಂ ಸರ್ವಂ, ಯತ್ಕಿಂಚ ಜಗತ್ಯಾಂ ಜಗತ್’ ಎಂದಾಗ, ಇದನ್ನೆ ಹೇಳುತ್ತಿವೆ.

ನಿಮ್ಮ ದೇಹದಲ್ಲಿ ಶೇಕಡ 99 ಭಾಗವು ಆಕಾಶ ತತ್ವ. ಒಂದು ಕಣದಲ್ಲಿ ಶೇ. 99.9 ಆಕಾಶ ತತ್ವವಿದೆ. ಆಕಾಶ ಭಗವಂತ. ಆಕಾಶದಲ್ಲಿ ವಿಶ್ರಮಿಸಿದಾಗ, ಅದೇ ಅದರ ಸಾಕ್ಷಾತ್ಕಾರ. ನೀವು ಮಾಡಬಹುದಾದ ಕಾರ್ಯ ಮತ್ತು ಅದರಿಂದ ಏನನ್ನೂ ಎದುರು ನೋಡದಿರುವುದು. ಈ ರೀತಿಯಾಗಿ ಏನನ್ನೂ ಎದುರು ನೋಡದೆ ಒಂದು ಕಾರ್ಯವನ್ನು ಮಾಡಿದಾಗ, ಅದರಿಂದ ಖಂಡಿತವಾಗಿಯೂ ನಿಮಗೆ ಸಂತೋಷ ಸಿಗುತ್ತದೆ.

ಅದರಿಂದಲೇ ಸಂತೋಷ ಬರುತ್ತದೆ ಎನ್ನುವುದೂ ತಪ್ಪು. ನೀವೇ ಸಂತೋಷ ಎಂಬ ಅರಿವು ನಿಮ್ಮಲ್ಲಿ ಮೂಡಿಸುತ್ತದೆ. ನೀವು ಸಂತೋಷದ ಚಿಲುಮೆ ಅಥವಾ ಸಂತೋಷದ ಜ್ವಾಲೆ ಎಂದು ಊಹಿಸಿಕೊಳ್ಳಿ. ಕಸಿದುಕೊಳ್ಳುವ ಅಥವಾ ಬೇಕೆನ್ನುವ ಈ ಪ್ರವೃತ್ತಿಯಿಂದ, ಭೌತಿಕವಾದುದನ್ನು ಅಥವಾ ಆಧ್ಯಾತ್ಮಿಕವಾದುದನ್ನು ಬೇಕೆನ್ನುವ ಈ ಪ್ರವೃತ್ತಿಯಿಂದ ನೀವೇ ಸಂತೋಷ ಎಂಬುದು ಮುಚ್ಚಿ ಹೋಗಿದೆ.

ಅದಕ್ಕಾಗಿ ಹಂಬಲಿಸಬೇಕು. ಉನ್ನತವಾದುದನ್ನು ಬಯಸದ ತನಕ ಅದು ನಿಮಗೆ ಸಿಗುವುದಿಲ್ಲ ಎನ್ನುತಾರೆ ಗುರುಗಳು. ಆದರೆ, ಸುಮ್ಮನೆ ಕುಳಿತುಕೊಳ್ಳಿ. ಏನನ್ನೂ ಮಾಡಬೇಡಿ ಎಂದೂ ಹೇಳುತ್ತಾರೆ ಎಂಬ ಪ್ರಶ್ನೆ ಏಳಬಹುದು. ಹೌದು, ಎರಡೂ ಆವಶ್ಯಕ. ಗುರುಗಳ ಬಳಿ ಬರುವವರೆಗೂ

ಅದಕ್ಕಾಗಿ ಹಂಬಲಿಸಬೇಕು. ಗುರುಗಳ ಬಳಿ ಬಂದ ಮೇಲೆ, ವಿಶ್ರಮಿಸಿ. ಟ್ರೇನನ್ನು ಹಿಡಿಯಲು ನೀವು ಓಡಬೇಕು. ಒಮ್ಮೆ ಟ್ರೇನನ್ನು ಹತ್ತಿದ ನಂತರ ವಿಶ್ರಮಿಸಬೇಕು. ಆದ್ದರಿಂದಲೆ ಗೀತೆಯಲ್ಲಿ ಶ್ರೀಕೃಷ್ಣನು, ‘ಆರುರುಕ್ಷೊಮುನೆರ್ಯೋಗಂ ಕರ್ಮ ಕಾರಣಮುಚ್ಯತೆ’- ಯೋಗದ ಉನ್ನತ ಹಂತಕ್ಕೆ ತೆರಳಲು ಬಯಸಿದವರಿಗೆ ಕರ್ಮ, ನಿಷ್ಕಾಮ ಕರ್ಮವೇ ಪಥ. ‘ಯೋಗಾರೂಢಸ್ಯ ತಸ್ಮೈವ ಶಮಃ ಕಾರಣಮುಚ್ಯತೆ’ - ಒಮ್ಮೆ ಯೋಗಾರೂಢರಾದ ನಂತರ ವಿಶ್ರಮಿಸುವುದೇ ಪಥ. ಆದ್ದರಿಂದ ಜೀವನವು ಕಾರ್ಯದ ಮತ್ತು ವಿಶ್ರಾಂತಿಯ, ಪ್ರವೃತ್ತಿ ಮತ್ತು ನಿವೃತ್ತಿಯ ಮಿಶ್ರಣ. ಇವೆರಡರಲ್ಲಿ ಒಂದು ಇಲ್ಲವಾದರೆ ಜೀವನವು ಅಪರಿಪೂರ್ಣ. ಪ್ರವೃತ್ತಿಯಲ್ಲೇ ಸಿಲುಕಿಕೊಂಡಿರುವವರು ಅಪರಿಪೂರ್ಣ. ಕೇವಲ ವಿಶ್ರಮಿಸುವವರು, ನಾನೇನೂ ಮಾಡುತ್ತಿಲ್ಲ ಎಂದು ಹೇಳುವವರು ಕೇವಲ ಉದಾಸೀನರಷ್ಟೆ. ಅದುವೂ ಕೆಲಸ ಮಾಡುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net