ಪರಬ್ರಹ್ಮವೇ ಸುಖಸ್ಥಾನ ಎಂದು ಸಾಧಕರು ಅರಿಯುವುದು ಹೇಗೆ?

sadaka
Published on
ಸಾಧಕನಿಗೆ ಪರಬ್ರಹ್ಮವೇ ಸುಖಸ್ಥಾನ. ಈ ಅರಿವು ಸಾಧಕನಿಗೆ ಎಂದೂ ಮರೆಯಾಗಕೂಡದು. ಈ ಅರಿವಿನ ಬೆಳಕಿನಲ್ಲಿ ಅವನು ಸಾಗಬೇಕು. ಇಂಥ ಅರಿವು ಅವನನ್ನು ಪರಬ್ರಹ್ಮತತ್ತ್ವಕ್ಕೆ ಕರೆದುಕೊಂಡು ಹೋಗುತ್ತದೆ. ಒಂದು ಸಂಖ್ಯೆ ಇದೆ ಎಂದಿಟ್ಟುಕೊಳ್ಳಿ. ಅದರ ಮುಂದೆ ಒಂದು ಸೊನ್ನೆ ಇಟ್ಟರೆ ಹತ್ತಾಗುವುದುಂಟಷ್ಟೆ. ಅದೇ ಒಂದು ಸಂಖ್ಯೆಯ ಮುಂದೆ ಹತ್ತು ಸೊನ್ನೆಗಳನ್ನು ಇಟ್ಟರೆ ಆ ಸಂಖ್ಯೆ ಒಂದು ಸಾವಿರ ಕೋಟಿ ಆಗುತ್ತದೆ. ಸಂಖ್ಯೆ ಒಂದೇ ಇದ್ದರೂ ಬಿಂದುವನ್ನು ಹೆಚ್ಚಿಸುವುದರಿಂದ ಅನಂತ ಸಂಖ್ಯೆಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಸೊನ್ನೆ ಎಂಬುದು ಅವ್ಯಕ್ತ. ಒಂದು ಎಂಬ ಸಂಖ್ಯೆ ಇಲ್ಲವಾದರೆ ಅದ್ವೆ ೖತದ ಅಮೃತಸಿಂಧು ಆಗುತ್ತದೆ. ಈ ಮಾತಿನಲ್ಲಿ ಅವ್ಯಕ್ತದ ಉತ್ಪತ್ತಿ ವಿಚಾರ ಸೂಚಿತವಾಗುತ್ತಿದೆ. ಅವ್ಯಕ್ತವೆಂದರೆ ಮಾಯೆ. ಸೊನ್ನೆಯ ಸಂಬಂಧದಿಂದ ಒಂದೆಂಬುದು ಅನಂತವಾಗುವಂತೆ ಮಾಯೆಯ ಸಂಬಂಧದಿಂದ ಬ್ರಹ್ಮವು ಅನಂತವಾಗುವುದೆಂದೂ ಸೊನ್ನೆಯನ್ನು ತೆಗೆದರೆ ಒಂದೇ ಉಳಿಯುವಂತೆ ಮಾಯಾಸಂಬಂಧವನ್ನು ಬಿಟ್ಟರೆ ಅದ್ವೆತವಾಗುವುದೆಂದೂ ತಿಳಿಯಬೇಕಾಗುತ್ತದೆ. ಮಹಲಿಂಗರಂಗನ ಮಾತು ಹೀಗುಂಟು:

ಬಾಯ ಮಾತಡಗಿದರೆ ಮಾಯೆಗ

ಪಾಯವಹುದಾ ಮಾಯೆಯಳಿಯಲು

ಬೀಯವಹುದೈ ಮನ; ಮನಸ್ಸಿನ ನೆನಹು ಕೆಟ್ಟಾಗ |

ಈಯಶೇಷವದಡಗೆ ನಿಜ ನಿ

ರ್ವಯ ನಿತ್ಯಾನಂದ ಸಚ್ಚಿ

ತ್ಕಾಯವಹ ಪರಬೊಮ್ಮವದ್ವಯವಾಗಿ ಮೆರೆದಿಹುದು ||

ಈ ಪದ್ಯದ ಸ್ಥೂಲಾರ್ಥವನ್ನು ಮೊದಲಿಗೆ ತಿಳಿಯೋಣ: ‘‘ಬಾಯಿಯ ಮಾತು ನಿಂತುಹೋದರೆ, ಮಾತಿನ ಮೂಲಕವಾಗಿ ಬೆಳೆಯುವ ಮಾಯೆಗೆ ಹಾನಿಯೇ ಸರಿ. ಮನದಲ್ಲಿ ನೆನಪು ಉಂಟಷ್ಟೆ. ಆ ನೆನಪು ಇಲ್ಲವಾದರೆ ಮನಸ್ಸಿನ ಅಸ್ತಿತ್ವವೇ ಇರುವುದಿಲ್ಲ. ಹೀಗಾದಾಗ, ನಿಜವಾದ ನಿರ್ವಯ, ನಿತ್ಯಾನಂದ ಆತ್ಮಸ್ವರೂಪ ಪರಬ್ರಹ್ಮವು ಅದ್ವೈತವಾಗಿಯೇ ಇರುತ್ತದೆ.’’ ಇದು ಈ ಪದ್ಯದ ಸ್ಥೂಲಾರ್ಥ. ಈ ಪದ್ಯದ ಪೂರ್ವಾರ್ಧದಲ್ಲಿ ಒಂದಿಷ್ಟು ಮರ್ಮಗಳು ಅಡಗಿವೆ. ‘ಮಾಯೆ’ ಎಂಬುದು ಇಲ್ಲಿ ಕಂಡು ಅಲ್ಲಿ ಇಲ್ಲವಾಗುವ ಕವಡುರೂಪ. ನಾವು ‘ಮಾಯೆ’ಯ ಸ್ವರೂಪವನ್ನು ತಿಳಿಯಲಾರೆವು. ಅದು ‘‘ಉಂಟು; ಇಲ್ಲ’’ ಎಂಬ ಕವಡುತನದಲ್ಲಿಯೇ ಇರುತ್ತದೆ! ಮಾತು ಮಾಯೆಯನ್ನು ಬೆಂಬಲಿಸುತ್ತದೆ. ಅದು ಮಾತಿನ ಮೂಲಕವಾಗಿಯೇ ಬೆಳೆಯುತ್ತದೆ. ಆಗ ‘ಮೌನ’ ಆವರಿಸಿದರೆ ಮಾತು ಇಲ್ಲವಾಗುತ್ತದೆ. ಅದೇ ರೀತಿ ಮನಸ್ಸು ಉಂಟು; ಮನಸ್ಸಿನೊಳಗೆ ನೆನಪೂ ಉಂಟು. ಒಂದು ಪಕ್ಷ ನೆನಪುಗಳೇ ಇಲ್ಲವಾದರೆ ಮನಸ್ಸಿನ ಅಸ್ತಿತ್ವ ಉಳಿಯಲು ಸಾಧ್ಯವೆ?

ಈ ಪರಬ್ರಹ್ಮವು ಮಾಯೆಯಿಂದ ಅತೀತವಾದುದು. ಹೀಗಾಗಿ, ಪರಬ್ರಹ್ಮವು ಆನಂದಮಯಿ ಆದುದು! ಹೀಗಾಗಿ ಇದು ಅದ್ವೆ ೖತ. ಎಲ್ಲಿ ಎರಡಿಲ್ಲವೋ ಅದು ಅದ್ವೈತ. ಮಹಲಿಂಗರಂಗನ ಮುಂದಿನ ಮಾತು ಹೀಗಿದೆ:

ಪುಸಿಯ ಮಾಯಾಕಾರ್ಯವೆನಿಸಿಹ

ವಿಷಮವಹ ಮನಸಿನ ವಿಕಲ್ಪದ

ಲೆಸೆದು ತೋರುವ ನಾಮರೂಪಿನ ವಿಸರವಹ ಭೇದ |

ಸಸಿನೆ ಗುರುಮುಖದಿಂದ ತಿಳಿಯಲು

ನಸಿದು ಪೋಪುದು ಸ್ವಪ್ನದಂದದಿ

ಮಿಸುಪ ತೇಜೋರಾಶಿಯಿರ್ದಪುದೇಕರೂಪಿನಲಿ ||

ಈ ಪದ್ಯದ ಸಾಮಾನ್ಯಾರ್ಥವನ್ನು ಮೊದಲಿಗೆ ತಿಳಿಯೋಣ: ‘‘ಈ ಮಾಯಾಕಾರ್ಯವು ಹುಸಿಯಾದುದೇ ಸರಿ. ಇದು ವಿಕೃತ ಮನಸ್ಸಿನ ವಿಕಲತೆಯಿಂದ ತೋರುವ ಹೆಸರಿನ ರೂಪವಾಗಿದೆ. ಈ ಮಾಯೆಯ ಸಮೂಹ ಭೇದವನ್ನು ಗುರುಮುಖದಿಂದ ತಿಳಿದಾಗ ಎಲ್ಲವೂ ಸ್ವಪ್ನದಂತೆ ಮಾಯವಾಗುತ್ತದೆ; ಆಗ ಪ್ರಕಾಶಮಾನವಾದ ತೇಜೋರಾಶಿಯು ಏಕರೂಪವಾಗಿ ಉಳಿಯುತ್ತದೆ.’’ ಈ ಪದ್ಯದಲ್ಲಿ ತೇಜೋರಾಶಿಯಿರ್ದಪುದು + ಏಕರೂಪಿನಲಿ ಎಂದು ಬಿಡಿಸಿಕೊಳ್ಳಬೇಕು. ‘ವಿಷಮವಹ’ ಎಂದರೆ ವಿಕಾರವಾಗುವ ಸ್ವಭಾವ ಎಂದರ್ಥ. ‘ವಿಸರ’ ಎಂಬುದಕ್ಕೆ ಸಮೂಹ ಎಂದು ಅರ್ಥ. ಈ ಪದ್ಯದಲ್ಲಿ ಕೀಲಕದಂಥ ಒಂದು ವಾಕ್ಯವುಂಟು. ‘‘ಭೇದ ನಸಿದು ಪೋಪುದು’’ ಎಂಬುದೇ ಆ ಕೀಲಕವಾಕ್ಯ. ಸಾಧಕನು ಗುರುಮುಖದಿಂದ ಮಾತ್ರ ಮಾಯೆಯ ಕವಡುತನವನ್ನು ತಿಳಿಯಲು ಸಾಧ್ಯ. ಗುರುವಿಲ್ಲದಿದ್ದರೆ ತಿಳಿಯಲಾಗದು! ಸ್ವಪ್ನ-ಜಾಗ್ರತ್-ಸುಷುಪ್ತಿ ಎಂಬುದು ಮೂರು ಅವಸ್ಥೆಗಳುಂಟಷ್ಟೆ. ಸುಷುಪ್ತಿ ಎಂದರೆ ತನಿನಿದ್ರೆ. ಆ ತನಿನಿದ್ರೆಯ ಸ್ವರೂಪದ ಮೂಲಕ ಅದ್ವಯಾನಂದವನ್ನು ಕುರಿತು ಮಹಲಿಂಗರಂಗ ಹೇಳುವುದಿಷ್ಟು: ‘‘ನಾವು ನಿದ್ರಿಸುವಾಗ ಮನಸ್ಸು ಇಲ್ಲದಿದ್ದರೆ ಪೂರ್ಣವಾದ ಆನಂದ ಸಿಗುತ್ತದೆ. ನಿದ್ರೆಯಿಂದ ಎಚ್ಚರಗೊಂಡಾಗ ಮತ್ತೆ ಮನಸ್ಸು ಸಂಸಾರದಲ್ಲಿ ತಲ್ಲೀನವಾಗುತ್ತದೆ. ಹೀಗೆ, ಮನಸ್ಸಿನಿಂದ ಆಗುವ ಸುಖದುಃಖಗಳು ಮನಸ್ಸು ಇಲ್ಲವಾದಾಗ ತೋರಿಬರುವುದಿಲ್ಲ. ಮನಸ್ಸು ನಾಶವಾದರೆ ಅದ್ವೈತಾನಂದ ದೊರೆಯುತ್ತದೆ.’’ ಇದು ಮಹಲಿಂಗರಂಗನ ವಿವಕ್ಷೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net