1,2,5 ಮತ್ತು 10 ರೂ. ನಾಣ್ಯ ತಯಾರಿಕೆ ತಗಲುವ ವೆಚ್ಚ ಎಷ್ಟು? ಈ ಅಚ್ಚರಿ ಸಂಗತಿ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ | Coins

ವಿಜಯವಾಣಿ - 2025-01-17T125604.783
Published on

Coins: ನಮ್ಮ ದೈನಂದಿನ ಬದುಕಿನಲ್ಲಿ ಹಣವಿಲ್ಲದ ದಿನವಿಲ್ಲ. ದುಡ್ಡು ನೋಡದ ಹಾಗೂ ವ್ಯಯಿಸದ ಹಗಲಿಲ್ಲ, ರಾತ್ರಿಯಿಲ್ಲ. ಯಾವುದಾದರೂ ಒಂದು ಸಣ್ಣ ವಸ್ತು ತರಲಾದರೂ ನಮ್ಮ ಖಜಾನೆಯಿಂದ ಹಣ ಖರ್ಚು ಮಾಡಲೇಬೇಕು. ನೋಟಿಗೆ ಇರುವ ಬೆಲೆ ಚಿಲ್ಲರೆ ಕಾಸಿಗಿಲ್ಲ. ಆದರೆ, ಚಿಲ್ಲರೆ ಇಲ್ಲದೆ ಹೋದರೆ ನೋಟಿಗೆ ಕಿಂಚಿತ್ತು ಮೌಲ್ಯವಿಲ್ಲ. ಏಕೆಂದರೆ, 100 ರೂ. ನೋಟು ತೋರಿದರೆ ಮೊದಲು ಚಿಲ್ಲರೆ ಕೊಡಿ ಎಂದೇ ನಮ್ಮಲ್ಲಿ ಹೇಳುವುದು. ಹೀಗಾಗಿ 1, 2, 5 ಮತ್ತು 10 ರೂ. ನಾಣ್ಯಗಳ ಅಗತ್ಯ ದಿನನಿತ್ಯದ ವಹಿವಾಟಿನ ಸೂತ್ರ.

ವ್ಯಯಿಸುವ ಹಣವೆಷ್ಟು

ಒಂದು ರೂ., 2, 5 ಮತ್ತು 10 ರೂ. ನಾಣ್ಯವನ್ನು ನಾವೆಲ್ಲಾ ನೋಡಿಯೇ ಇದ್ದೇವೆ. ಇವುಗಳು ನಮ್ಮ ದಿನಚರಿಯ ಒಂದು ಬಹುಮುಖ್ಯ ಭಾಗ. ಬಸ್​, ರೈಲು ಪ್ರಯಾಣ, ದಿನಸಿ ಸಾಮಾಗ್ರಿ ಸೇರಿದಂತೆ ಹಲವು ಸಣ್ಣ-ಪುಟ್ಟ ವಸ್ತುಗಳ ಖರೀದಿಗೆ ನೋಟಿಗಿಂತ ಚಿಲ್ಲರೆಯ ಅವಶ್ಯಕತೆಯೇ ಹೆಚ್ಚು. 1 ಮತ್ತು 3 ರೂ. ಚಿಲ್ಲರೆ ಸಮಸ್ಯೆಗೆ ಒಂದು ದೊಡ್ಡ ಜಗಳವೇ ನಡೆದುಹೋಗುವ ಈ ಕಾಲದಲ್ಲಿ ನಾಣ್ಯ ತಯಾರಿಕೆಗೆ ತಗಲುವ ವೆಚ್ಚ ಎಷ್ಟು ಎಂಬ ಮಾಹಿತಿ ನಮಗೆ ತಿಳಿಯದೆ ಹೋದರೆ ಹೇಗೆ? ಅಸಲಿಗೆ ಒಂದೊಂದು ರೂ. ನಾಣ್ಯ ತಯಾರಿಕೆಗೂ ಅದರದ್ದೇ ಆದ ಖರ್ಚು-ವೆಚ್ಚಗಳಿವೆ. ಆಯಾ ಮೌಲ್ಯದ ನಾಣ್ಯದ ಮೇಲೆ ಕೇಂದ್ರ ಸರ್ಕಾರ ವ್ಯಯಿಸುವ ಹಣವೆಷ್ಟು? ಎಂಬುದರ ವಿವರ ಹೀಗಿದೆ ಗಮನಿಸಿ.

11 ಪೈಸೆ ಹೆಚ್ಚು

ಕಳೆದ ಎರಡು ದಶಕಗಳಲ್ಲಿ ಒಂದು ರೂಪಾಯಿ ನಾಣ್ಯಗಳ ಮೌಲ್ಯ ಗಣನೀಯವಾಗಿ ಕುಸಿತ ಕಂಡಿದೆ. ಆದರೆ, ಇಂದಿಗೂ ಕೂಡ ತಯಾರಿಕೆಯಲ್ಲಿರುವ ಒಂದು ರೂಪಾಯಿ ನಾಣ್ಯವನ್ನು ತಯಾರಿಸಲು ತಗಲುವ ವೆಚ್ಚವು ಅದರ ಮೌಲ್ಯಕ್ಕಿಂತ ಅಧಿಕವಿದೆ ಎಂಬುದು ಅಚ್ಚರಿಯ ಸಂಗತಿ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಒಂದು ರೂಪಾಯಿ ನಾಣ್ಯವನ್ನು ತಯಾರಿಸಲು 1 ರೂ. ಮೇಲೆ 11 ಪೈಸೆ ಹೆಚ್ಚಾಗಿ ಖರ್ಚು ಮಾಡುತ್ತಿದೆ  ಎಂದು ವರದಿಯೊಂದು ಬಹಿರಂಗಪಡಿಸಿದೆ.

ಯಾವುದಕ್ಕೆ ಎಷ್ಟು?

1 ರೂ. ನಾಣ್ಯಕ್ಕೆ 1.11 ಪೈಸೆ ಖರ್ಚು

2 ರೂ.ಗೆ 1.25 ಪೈಸೆ ಖರ್ಚು

5 ರೂ.ಗೆ 3.69 ಪೈಸೆ ಖರ್ಚು

10 ರೂ.ಗೆ 5.54 ಪೈಸೆ ಖರ್ಚು

ಉತ್ಪಾದನಾ ವೆಚ್ಚಗಳ ಕುರಿತು ಇತ್ತೀಚಿನ ದತ್ತಾಂಶಗಳು ಬಹಿರಂಗವಾಗಿಲ್ಲ. ಆದರೆ, 2018 ಮತ್ತು 2024ರ ನಡುವಿನ ಹಣದುಬ್ಬರವು ಪ್ರತಿ ನಾಣ್ಯದ ಟಂಕಿಸುವ ವೆಚ್ಚದಲ್ಲಿ ಬದಲಾವಣೆ ತಂದಿದೆ ಎಂದು ಹೇಳಲಾಗಿದೆ. ಸದ್ಯದ ಮಟ್ಟಿಗೆ ಎಷ್ಟು ಎಂದು ನಿಖರವಾಗಿ ಹೇಳಲು ಹೊಸ ವರದಿ ಬಹಿರಂಗವಾಗುವ ತನಕ ಕಾಯಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net