ಭಾರತಕ್ಕೆ 'ಎಲೋನ್​' ಟೆಸ್ಲಾ! ಆಮದು ಸುಂಕ ಕಡಿತ ಬಳಿಕ ದೇಶದಲ್ಲಿ Tesla ಕಾರಿನ ಬೆಲೆ ಎಷ್ಟು? ಹೀಗಿದೆ ವರದಿ

ವಿಜಯವಾಣಿ - 2025-02-22T190123.709
Published on

Tesla Car: ಭಾರತಕ್ಕೆ ಟೆಸ್ಲಾ ಕಾರುಗಳ ಆಗಮನ ಸನ್ನಿಹಿತ ಎಂಬುದಕ್ಕೆ ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಭೇಟಿಯೇ ಸಾಕ್ಷಿ. ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕಾದಲ್ಲಿನ ಶ್ವೇತಭವನಕ್ಕೆ ತೆರಳಿದ ಮೋದಿ, ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು, ಎರಡನೇ ಬಾರಿಗೆ ಯುಸ್​ ಅಧ್ಯಕ್ಷರಾದ ಡೋನಾಲ್ಡ್​ ಟ್ರಂಪ್​ರನ್ನು ನೇರವಾಗಿ ಭೇಟಿಯಾಗಿ, ಶುಭಕೋರಿದರು. ಈ ವೇಳೆ ಎರಡು ದೇಶಗಳ ಸಂಬಂಧವನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯುವತ್ತ ಗಮನಹರಿಸಿದ ಮೋದಿ, ಎಲೋನ್​ ಮಸ್ಕ್​ ಮುಂದಾಳತ್ವದ ಟೆಸ್ಲಾ ಕಾರನ್ನು ಭಾರತಕ್ಕೆ ತರುವ ಯೋಚನೆಯನ್ನು ಪ್ರಸ್ತಾಪಿಸಿದರು.

ಎಲೋನ್​ ಮಸ್ಕ್​ ನೇತೃತ್ವದ ಟೆಸ್ಲಾ ಅತೀ ಶೀಘ್ರವೇ ಭಾರತಕ್ಕೆ ಬಂದಿಳಿಯಲಿದೆ. ಈ ಕುರಿತು ಅಮೆರಿಕಾ ಮತ್ತು ಭಾರತ ನಡುವೆ ಒಪ್ಪಂದಗಳು ಕೂಡ ನಡೆದಿವೆ ಎಂದು ಮೂಲಗಳು ತಿಳಿಸಿವೆ. ಸುಂಕ ಮತ್ತು ಆಮದು ವಿಚಾರವಾಗಿ ಈ ಹಿಂದೆ ಒಂದಷ್ಟು ಗೊಂದಲಗಳಿದ್ದವು. ಆದರೆ, ಪ್ರಧಾನಿ ಮೋದಿ ಮತ್ತು ಟ್ರಂಪ್​ ನಡುವಿನ ಭೇಟಿ ಬಳಿಕ ಗೊಂದಲಗಳು ಬಗೆಹರಿದಿವೆ ಎಂದು ವರದಿಗಳು ಉಲ್ಲೇಖಿಸಿವೆ. ಹಾಗಿದ್ರೆ, ಟೆಸ್ಲಾ ಭಾರತಕ್ಕೆ ಬಂದರೆ ಇಲ್ಲಿ ಅದಕ್ಕೆ ನಿಗದಿಪಡಿಸಲಾದ ಬೆಲೆಯೆಷ್ಟು? ಅದಕ್ಕೆ ತಗುಲವ ಆಮದು ಸುಂಕವೆಷ್ಟು? ಎಂಬುದರ ಸಂಪೂರ್ಣ ಮಾಹಿತಿ ಹೀಗಿದೆ ಗಮನಿಸಿ.

ಶೀಘ್ರದಲ್ಲೇ ಭಾರತಕ್ಕೆ ಕಾಲಿಡಲು ಸಜ್ಜಾಗಿರುವ ಟೆಸ್ಲಾ ಕಾರಿನ ಆಮದು ಸುಂಕವನ್ನು ಶೇ.20 ಕ್ಕಿಂತ ಕಡಿತಗೊಳಿಸಿದ ನಂತರವೂ, ಟೆಸ್ಲಾದ ಅಗ್ಗದ ಕಾರಿನ ಬೆಲೆ ಸುಮಾರು 35ರಿಂದ 40 ಲಕ್ಷ ರೂ.ಗಳಿರಲಿದೆ ಎಂದು ಜಾಗತಿಕ ಬಂಡವಾಳ ಮಾರುಕಟ್ಟೆ ಕಂಪನಿಯಾದ ಸಿಎಲ್‌ಎಸ್‌ಎ ತನ್ನ ವರದಿಯಲ್ಲಿ ತಿಳಿಸಿದೆ. ಪ್ರಸ್ತುತ, ಅಮೆರಿಕಾದಲ್ಲಿ ಟೆಸ್ಲಾದ ಅಗ್ಗದ ಮಾಡೆಲ್ ಮೂರು ಕಾರ್ಖಾನೆ ಮಟ್ಟದಲ್ಲಿ ಸುಮಾರು 35,000 ಯುಎಸ್‌ಡಿ (ಅಂದರೆ ಸರಿಸುಮಾರು 30.4 ಲಕ್ಷ ರೂ.) ಬೆಲೆ ಹೊಂದಿದೆ ಎಂದು ವರದಿಯು ಒತ್ತಿ ಹೇಳಿದೆ. ಭಾರತದಲ್ಲಿನ ಆಮದು ಸುಂಕದಲ್ಲಿ ಶೇ. 15ರಿಂದ 20ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದ್ದು, ರಸ್ತೆ ತೆರಿಗೆ ಮತ್ತು ವಿಮೆಯಂತಹ ಹೆಚ್ಚುವರಿ ವೆಚ್ಚಗಳ ಜತೆಗೆ, ಆನ್-ರೋಡ್ ಬೆಲೆ ಇನ್ನೂ ಸುಮಾರು 40,000 ಅಮೆರಿಕನ್ ಡಾಲರ್​ ಅಥವಾ 35-40 ಲಕ್ಷ ರೂ.ಗಳಾಗಿರುತ್ತದೆ ಎನ್ನಲಾಗಿದೆ.

ಟೆಸ್ಲಾ ಮಾಡೆಲ್-3 ಅನ್ನು ದೇಶಿಯ ಇವಿ ಮಾದರಿಗಳಾದ ಮಹೀಂದ್ರಾ XEV 9e, ಹುಂಡೈ ಇ-ಕ್ರೆಟಾ ಮತ್ತು ಮಾರುತಿ ಸುಜುಕಿ ಇ-ವಿಟಾರಾಕ್ಕಿಂತ 20ರಿಂದ 50 ಪ್ರತಿಶತ ಹೆಚ್ಚಿನ ಬೆಲೆಯಲ್ಲಿ ಇರಿಸಿದರೆ, ಅದು ಭಾರತೀಯ ಇವಿ ಮಾರುಕಟ್ಟೆಯನ್ನು ಗಮನಾರ್ಹವಾಗಿ ಅಡ್ಡಿಪಡಿಸುವ ಸಾಧ್ಯತೆಯಿಲ್ಲ ಎಂದು ವರದಿ ಹೇಳಿದೆ. ಟೆಸ್ಲಾ 25 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಆನ್-ರೋಡ್ ಮಾದರಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದರೂ, ಮಾರುಕಟ್ಟೆ ಪಾಲನ್ನು ಪಡೆದರೂ ಸಹ, ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳಲ್ಲಿನ ಇತ್ತೀಚಿನ ಕುಸಿತ ಕಂಡಿರುವುದು ಗಮನಾರ್ಹ.

ಆದಾಗ್ಯೂ, ಟೆಸ್ಲಾ ಲಗ್ಗೆಯು ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯ ಮೇಲೆ ಅಂಥಾ ಪರಿಣಾಮವೇನು ಬೀರುವುದಿಲ್ಲ ಎಂದು ವರದಿಗಳು ಸೂಚಿಸಿವೆ. ಏಕೆಂದರೆ, ಭಾರತದಲ್ಲಿ ಇವಿಗಳ ಒಟ್ಟಾರೆ ನುಗ್ಗುವಿಕೆ ಚೀನಾ, ಯುರೋಪ್ ಮತ್ತು ಅಮೆರಿಕಾಗಿಂತ ಕಡಿಮೆಯಾಗಿದೆ. ಮುಂಬರುವ ತಿಂಗಳುಗಳಲ್ಲಿ ಟೆಸ್ಲಾ ತನ್ನ ಮಾದರಿಗಳನ್ನು ದೆಹಲಿ ಮತ್ತು ಮುಂಬೈನಲ್ಲಿಯೂ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಟೆಸ್ಲಾ ಭಾರತದಲ್ಲಿ ತನ್ನ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಾರಂಭಿಸಿದ್ದು, ಇದು ದೇಶೀಯ ಮಾರುಕಟ್ಟೆಗೆ ತನ್ನ ಬಹುನಿರೀಕ್ಷಿತ ಪ್ರವೇಶದತ್ತ ಮಹತ್ವದ ಹೆಜ್ಜೆಯಾಗಿದೆ.

ಆಮದು ಸುಂಕವನ್ನು ಶೇ.20ಕ್ಕಿಂತ ಕಡಿಮೆಗೊಳಿಸಿದರೂ ಸಹ, ಟೆಸ್ಲಾ ತನ್ನ ಕಾರುಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಮತ್ತು ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಲು ಭಾರತದಲ್ಲಿ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ವರದಿಯು ವಿವರಿಸಿದೆ. ಭಾರತದ ಎಲೆಕ್ಟ್ರಿಕ್ ವಾಹನ (ಇವಿ) ನೀತಿಯಡಿಯಲ್ಲಿ, ಸ್ಥಳೀಯ ಸೌಲಭ್ಯವನ್ನು ಸ್ಥಾಪಿಸುವಲ್ಲಿ ಟೆಸ್ಲಾ ವರ್ಷಕ್ಕೆ 8,000 ಯೂನಿಟ್‌ಗಳವರೆಗೆ ಶೇ.15ರಷ್ಟು ಕಡಿಮೆ ಆಮದು ಸುಂಕದಿಂದ ಪ್ರಯೋಜನ ಪಡೆಯಬಹುದು ಎಂದು ವರದಿಯು ಉಲ್ಲೇಖಿಸಿದೆ.

ಇದನ್ನು ಭಾರತೀಯ ಮೋಟಾರ್‌ಸೈಕಲ್ ಮಾರುಕಟ್ಟೆಯೊಂದಿಗೆ ಹೋಲಿಕೆ ಮಾಡಿದರೆ, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಸಿ ಬೈಕ್​ಗಿಂತ ಶೇ.20ರಷ್ಟು ಹೆಚ್ಚಿನ ಬೆಲೆ ಹೊಂದಿರುವ ಹಾರ್ಲೆಡೇವಿಡ್ಸನ್‌ X440 ಬೈಕ್​ಗಳು ತಿಂಗಳಿಗೆ ಕೇವಲ 1,500 ಯುನಿಟ್‌ ಮಾರಾಟವಾಗುತ್ತದೆ. ಆದರೆ, ಕ್ಲಾಸಿಕ್ 350 ಮಾಸಿಕ ಸುಮಾರು 28,000 ಯುನಿಟ್‌ಗಳನ್ನು ಮಾರಾಟ ಮಾಡುತ್ತದೆ. ಇದನ್ನು ಗಮನಿಸಿ ಹೇಳುವುದಾದರೆ, ಭಾರತೀಯ ಗ್ರಾಹಕರು ಬೆಲೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಅದು ತಮಗೆ ಕೈಗೆಟುಕವ ದರವೇ ಎಂಬುದನ್ನು ಸೂಕ್ಷ್ವವಾಗಿ ಗಮನಿಸುತ್ತಾರೆ.

ಸ್ಪರ್ಧಾತ್ಮಕ ಬೆಲೆಗಳಿಲ್ಲದೆ ಟೆಸ್ಲಾ ಆಕರ್ಷಣೆಯನ್ನು ಪಡೆಯುವುದು ಒಂದು ರೀತಿ ಸವಾಲಿನ ಸಂಗತಿಯೇ ನಿಜ. ಒಟ್ಟಾರೆಯಾಗಿ, ಭಾರತೀಯ ಮಾರುಕಟ್ಟೆಗೆ ಟೆಸ್ಲಾ ಪ್ರವೇಶ ಖಚಿತವಾಗಿದ್ದೇ ಆದರೂ ಇಲ್ಲಿನ ಸ್ಥಳೀಯ ತಯಾರಿಕಾ ಉತ್ಪಾದನಾ ಘಟಕಗಳಿಗೆ ಹೂಡಿಕೆ ಮಾಡಲು ಸಿದ್ದರಿದ್ದಾರೆಯೇ? ಎಂಬುದು ಪ್ರಶ್ನೆ. ಇದರಲ್ಲಿ ಸರಿಹೊಂದಲಿಲ್ಲ ಎಂದಾದರೆ ಆಮದು ಸುಂಕದಲ್ಲಿ ಇಳಿಕೆ ಮಾಡಿದರೂ ಲಾಭ ಎತ್ತುವುದರಲ್ಲಿ ನಿರೀಕ್ಷಿತ ಫಲ ಸಿಗುವುದಿಲ್ಲ ಎಂಬುದು ನಿಶ್ಚಿತ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net