

ಎನ್.ಎಲ್. ಶಿವಮಾದು
ಬೆಂಗಳೂರು: ರಾಜ್ಯದಲ್ಲಿ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಹೆಚ್ಚಳ, ಹೆಣ್ಣು ಮಕ್ಕಳ ಉನ್ನತ ಶಿಕ್ಷಣ, ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ ನೀಡಬೇಕಾದರೆ ಇನ್ನೂ ಕನಿಷ್ಠ 50 ವಿಶ್ವವಿದ್ಯಾಲಯಗಳ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಹೊಸ ವಿವಿಗಳನ್ನು ಮುಚ್ಚುವುದರಿಂದ ರಾಜ್ಯದ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುವ ಜತೆಗೆ ಶೈಕ್ಷಣಿಕ ಹಿನ್ನಡೆಯಾಗಲಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉನ್ನತ ಶಿಕ್ಷಣವನ್ನು ವಿಸ್ತರಿಸಬೇಕು ಮತ್ತು ಆಡಳಿತವನ್ನು ವಿಕೇಂದ್ರೀಕರಣ ಮಾಡಬೇಕೆಂಬ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರವು ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ಪರಿಕ್ಪನೆಯಲ್ಲಿ ಹೊಸ ವಿಶ್ವವಿದ್ಯಾಲಗಳನ್ನು ಸ್ಥಾಪಿಸಿತ್ತು. ಆ ವಿವಿಗಳನ್ನು ಮುಚ್ಚುವುದರಿಂದ ಆಡಳಿತಾತ್ಮಕವಾಗಿ ಮತ್ತಷ್ಟು ಸರ್ಕಸ್ ಮಾಡಬೇಕಾಗುತ್ತದೆಯೇ ವಿನಾ, ಲಾಭವಂತೂ ಇಲ್ಲ ಎನ್ನುತ್ತಿದ್ದಾರೆ.
ಯುಜಿಸಿ ಪ್ರಕಾರ 100 ಕಾಲೇಜಿಗೆ ಒಂದು ವಿವಿ:
ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಮತ್ತು ಹಲವು ಶಿಕ್ಷಣ ಸಮಿತಿಗಳ ಪ್ರಕಾರ ಜಿಲ್ಲೆಗೊಂದು ಹಾಗೂ ಪ್ರತಿ 100 ಸಂಯೋಜಿತ ಕಾಲೇಜುಗಳಿಗೊಂದು ವಿಶ್ವವಿದ್ಯಾಲಯವಿರಬೇಕು. ಇದರಿಂದ ಅಧ್ಯಾಪಕರು ಎಲ್ಲ ವಿದ್ಯಾರ್ಥಿಗಳನ್ನು ತಲುಪಲು, ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ ನೀಡಲು, ವಿಶೇಷವಾಗಿ ಹೆಣ್ಣುಮಕ್ಕಳ ಉನ್ನತ ಶಿಕ್ಷಣ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದು ಈ ಹಿಂದೆ ಶಿಾರಸು ಮಾಡಿದೆ.
ಜಿಇಆರ್ ಹೆಚ್ಚಳಕ್ಕೆ ಅಡ್ಡಿ:
ಸರ್ಕಾರ ಕೈಗೊಂಡಿರುವ ಕ್ರಮವು ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಹೆಚ್ಚಳಕ್ಕೆ ಅಡ್ಡಿಯಾಗಲಿದೆ. ಪ್ರಸ್ತುತ ಕರ್ನಾಟದಲ್ಲಿ ಜಿಇಆರ್ ಶೇ.36 ಹಾಗೂ ದೇಶದಲ್ಲಿ ಶೇ.28.4ರಷ್ಟಿದೆ. 2035ಕ್ಕೆ ಶೇ.50ಕ್ಕೆ ತಲುಪಬೇಕೆಂಬ ಉದ್ದೇಶವನ್ನು ಸರ್ಕಾರಗಳು ಗುರಿ ಹೊಂದಿವೆ. ಒಂದು ವೇಳೆ ಗ್ರಾಮೀಣ ಭಾಗದಲ್ಲಿ ಸುಲಭವಾಗಿ ಮತ್ತು ಸಮೀಪದಲ್ಲಿ ಶಿಕ್ಷಣ ದೊರೆಯದಿದ್ದಲ್ಲಿ ಜಿಇಆರ್ ಹೆಚ್ಚಳದ ಸಾಧನೆಯ ಗುರಿ ತಲುಪಲು ಕಷ್ಟವಾಗಲಿದೆ.
ಪ್ರಸ್ತುತ ಮುಂದುವರಿದ ದೇಶಗಳಾದ ಅಮೆರಿಕದಲ್ಲಿ ಉನ್ನತ ಶಿಕ್ಷಣ ಜಿಇಆರ್ ಶೇ.88, ಜರ್ಮನಿಯಲ್ಲಿ ಶೇ.70, ಕೆನಡಾದಲ್ಲಿ ಶೇ.69, ದಕ್ಷಿಣ ಕೊರಿಯಾದಲ್ಲಿ ಶೇ.94 ಮತ್ತು ಪಕ್ಕದ ಚೀನಾದಲ್ಲಿ ಶೇ.51ರಷ್ಟಿದೆ.
ಬಜೆಟ್‌ನಲ್ಲಿ ಶಿಕ್ಷಣಕ್ಕೆ ಜಿಡಿಪಿ ಹೆಚ್ಚಿಸಲಿ:
ಮುಂದುವರಿದ ದೇಶಗಳಲ್ಲಿ ವಿಶ್ವವಿದ್ಯಾಲಯಗಳನ್ನು ವಿಸ್ತರಿಸಲು ಶಿಕ್ಷಣಕ್ಕೆ ಜಿಡಿಪಿಯಲ್ಲಿನ ಶೇ.6ರವರೆಗೆ ಅನುದಾನ ಮೀಸಲಿಡುತ್ತಾರೆ. ಆದರೆ, 2020-21ರ ನೀತಿ ಆಯೊಗದ ವರದಿ ಪ್ರಕಾರ
ರಾಜ್ಯದಲ್ಲಿ ಶೇ.2.01 ಅಷ್ಟೇ ಅನುದಾನ ಮೀಸಲಿಡುತ್ತಿದೆ. ಆರ್ಥಿಕವಾಗಿ ನಮಗಿಂತ ಹಿಂದುಳಿದಿರುವ ರಾಜ್ಯಗಳಾಗಿರುವ ಜಮ್ಮು ಮತ್ತು ಕಾಶ್ಮೀರ ಶೇ.8.11, ಈಶಾನ್ಯ ರಾಜ್ಯಗಳಾದ ಮಣಿಪುರ ಶೇ.7.25, ಮೇಘಾಲಯ ಶೇ.6.64 ಮತ್ತು ತ್ರಿಪುರ ಶೇ.6.19ರಷ್ಟು ಹಣವನ್ನು ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿವೆ.
ಶಿಕ್ಷಣದ ಗ್ಯಾರಂಟಿಗೆ 50 ವಿವಿಗಳು ಬೇಕು
ದೇಶಾದ್ಯಂತ ಎಲ್ಲರಿಗೂ ಉನ್ನತ ಶಿಕ್ಷಣ ನೀಡಬೇಕಾದರೆ ಯುಜಿಸಿ ನಿಯಗಳ ಪ್ರಕಾರ ದೇಶದಲ್ಲಿ 1,200 ಹಾಗೂ ರಾಜ್ಯದಲ್ಲಿ ಕನಿಷ್ಠ 50 ಹೊಸ ವಿವಿಗಳನ್ನು ನಿರ್ಮಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಗೊಂದು ವಿಶ್ವವಿದ್ಯಾಲಯಗಳು ಬೇಕೇ ಬೇಕು. ಚಾಮರಾಜನಗರ ವಿವಿ ಮುಚ್ಚುವುದರಿಂದ ವಿದ್ಯಾರ್ಥಿಗಳು ಮೈಸೂರಿಗೆ ಬರಲು ತೊಂದರೆಯಾಗಬಹುದು. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೊಡೆತ ಬೀಳಬಹುದು. ಹಾಸ್ಟೆಲ್‌ನಲ್ಲಿದ್ದುಕೊಂಡು ಓದಿಸಲು ಹಿಂದೇಟು ಹಾಕುವ ಪಾಲಕರ ಮಕ್ಕಳಿಗೆ ಶಿಕ್ಷಣ ಕೊನೆಯಾಗಲಿದೆ. ಹೀಗಾಗಿ ರಾಜ್ಯ ಸರ್ಕಾರವು ಶಿಕ್ಷಣದ ಗ್ಯಾರಂಟಿ ನೀಡಬೇಕಿದೆ ಎನ್ನುತ್ತಾರೆ ವಿಶ್ರಾಂತ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್.
ವಿದೇಶಗಳಲ್ಲಿ ಪ್ರತಿ 7ರಿಂದ 10 ಸಾವಿರ ವಿದ್ಯಾರ್ಥಿಗಳಿಗೆ ವಿವಿ ವಿದೇಶಗಳಲ್ಲಿ ಪ್ರತಿ ವಿಷಯಗಳಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಚಿಕ್ಕ ವಿವಿಗಳು ಶ್ರೇಷ್ಠ ವಿವಿಗಳು ಎಂಬ ಪರಿಕಲ್ಪನೆ ಹೊಂದಲಾಗಿದೆ. 7ರಿಂದ 10 ಸಾವಿರ ವಿದ್ಯಾರ್ಥಿಗಳಿಗೊಂದು ವಿಶ್ವವಿದ್ಯಾಲಯ ನಿರ್ಮಿಸಲಾಗಿದೆ. ಅಮೆರಿಕದಲ್ಲಿ 60 ಸಾವಿರ ವಿದ್ಯಾರ್ಥಿಗಳಿರುವುದೇ ದೊಡ್ಡ ವಿವಿಗಳಾಗಿವೆ. ಆದರೆ, ರಾಜ್ಯದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 3.5 ಲಕ್ಷ ವಿದ್ಯಾರ್ಥಿಗಳಿದ್ದ ದೊಡ್ಡ ವಿಶ್ವವಿದ್ಯಾಲಯ ಮಾಡಲಾಗಿತ್ತು. ವಿಭಜನೆಯಾದ ಬೆಂ,ವಿವಿಯಲ್ಲಿ ಸರಾಸರಿ1.28 ಲಕ್ಷ ವಿದ್ಯಾರ್ಥಿಗಳಿದ್ದಾರೆ.
ರಾಜ್ಯ ಸರ್ಕಾರವು ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲಾಗಿ ಅನುದಾನ ಹೆಚ್ಚಿಸಿ ಗುಣಮಟ್ಟ ಕಾಪಾಡಲಿ. ಪ್ರಾಧ್ಯಾಪಕರನ್ನು ನೇಮಿಸಿ ಸುಧಾರಣೆಯತ್ತ ಸಾಗಿದರೆ, ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯತ್ತ ಸಾಗಲು ಕೂಡ ಸಹಕಾರಿಯಾಗಲಿದೆ. - ಪ್ರೊ. ಕೆ.ಆರ್. ವೇಣುಗೋಪಾಲ್, ವಿಶ್ರಾಂತ ಕುಲಪತಿ
ರಾಜ್ಯಸರ್ಕಾರವು ಕಳೆದ 2 ವರ್ಷದಲ್ಲಿ ಹೊಸ ವಿವಿಗಳಿಗೆ ಬಿಡಿಗಾಸು ಹಣ ಬಿಡುಗಡೆ ಮಾಡಿಲ್ಲ. ಹೀಗಿರುವಾಗ ಸರ್ಕಾರಕ್ಕೆ ಯಾವ ರೀತಿಯಲ್ಲಿ ಆರ್ಥಿಕ ಹೊರೆಯಾಗಿದೆ. ಹಳ್ಳಿಗಾಡಿನ ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ಸಿಗಬೇಕಾದರೆ ಹೊಸ ವಿವಿಗಳು ಉಳಿಯಬೇಕು. - ಪ್ರೊ. ಶ್ರೀನಿವಾಸ ಬಳ್ಳಿ, ವಿಶ್ರಾಂತ ಕುಲಪತ್ಳಿ