ಹೇಗೆ ತಿನಿಸೋ ಹಾಗೆ ಮನಸು

girl jan 13 2020
Published on

ಆಹಾರ ಹಾಗೂ ನಮ್ಮ ದೇಹ ಹೇಗೆ ಪರಸ್ಪರ ಸಂಭಾಷಣೆ ನಡೆಸಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಿದೆ. ಆದರೆ ಆಹಾರ ಹೇಗೆ ಮನಸ್ಸು ಮತ್ತು ನಡವಳಿಕೆಗಳ ಮೇಲೆ ಪ್ರಭಾವಬೀರುತ್ತದೆ ಎಂದು ಯೋಚಿಸಿರುವವರು ತೀರಾ ಕಡಿಮೆ. ಏಕೆಂದರೆ ಆಧುನಿಕ ವೈದ್ಯಕೀಯ ವಿಜ್ಞಾನ ಈ ವಿಷಯದ ಕಡೆ ಹೆಚ್ಚಿಗೆ ಗಮನಹರಿಸಿಲ್ಲ. ಆಹಾರವಿಜ್ಞಾನವು ದೇಹದ ಆರೋಗ್ಯಕ್ಕೆ ಪ್ರಮುಖಸ್ಥಾನ ಕೊಡುತ್ತದೆಯಾದರೂ ಮನಸ್ಸು ಮತ್ತು ಆಹಾರಗಳ ಪರಸ್ಪರ ಸಂಬಂಧಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ. ಆಧುನಿಕ ವಿಜ್ಞಾನದ ಅವಗಣನೆಗೆ ಪಾತ್ರವಾಗಿರುವ ಈ ವಿಷಯದ ಸತ್ಯಾಸತ್ಯತೆ ಏನು? ಇಲ್ಲಿದೆ ಮಾಹಿತಿ.

‘ಇವತ್ತು ಹಬ್ಬ. ಮಾಡಿದ ಅಡುಗೆಯನ್ನು ದೇವರಿಗೆ ನೈವೇದ್ಯ ಇಡಬೇಕು. ಆದ್ದರಿಂದ ರುಚಿ ನೋಡದೆ ಅಡುಗೆ ಮಾಡಿದ್ದೇನೆ. ಎಷ್ಟೊಂದು ಜನರನ್ನು ಊಟಕ್ಕೂ ಕರೆದಿದ್ದೇನೆ. ದೇವರೇ, ಇವತ್ತು ನಾನು ಮಾಡಿದ ಅಡುಗೆ ಚೆನ್ನಾಗಿರಲಪ್ಪ...’

ನೀವೂ ಬಹುಶಃ ಎಷ್ಟೋ ಸಲ ಹೀಗೆ ಅಂದುಕೊಂಡಿರಬೇಕಲ್ಲವೆ? ದೇವರಿಗೆ ನೈವೇದ್ಯ ಇಡುವುದನ್ನು ರುಚಿ ನೋಡಿ ಎಂಜಲು ಮಾಡಬಾರದು. ಎಲ್ಲಾ ಮಕ್ಕಳಿಗೂ ಅಮ್ಮಂದಿರು ಹೇಳಿಕೊಡುವ ಮೊದಲ ಅಡುಗೆ ಪಾಠವಿದು. ಆದರೆ ಅಚ್ಚರಿ ಎಂದರೆ, ದಿನವೂ ರುಚಿನೋಡಿ ಮಾಡಿದ ಅಡುಗೆಗಿಂತ ಹಬ್ಬದ ದಿನ ಮಾಡಿದ ಅಡುಗೆ ಉಪ್ಪು ಖಾರ ರುಚಿಗಳಲ್ಲಿ ಹದ ಕಾಣುತ್ತದೆ. ಅದು ಏಕೆ? ದೇವರಿಗೆ ಮಾಡಿದ ಅಡುಗೆಯನ್ನು ಸಮರ್ಪಕಭಾವದಿಂದ ಮಾಡುವುದರಿಂದಲೇ ಹಬ್ಬದ ಅಡುಗೆಗಳು ಹೆಚ್ಚು ರುಚಿ. ಇದಕ್ಕೆಂದೇ ಇರಬೇಕು ದೇವಸ್ಥಾನದ ಪ್ರಸಾದಗಳು ರುಚಿರುಚಿ.

ಅದಕ್ಕೇ ಹೇಳುವುದು. ರುಚಿ ಎನ್ನುವುದು ಅಡುಗೆಯಲ್ಲಿ ಕರಗಿರುವ ಅಂಶಗಳಷ್ಟೇ ಅಲ್ಲ, ಅದು ಕೇವಲ ದೈಹಿಕ ಕಾರ್ಯವೂ ಅಲ್ಲ, ಬದಲಿಗೆ ರುಚಿಗೂ, ಮನಸ್ಸಿಗೂ ತುಂಬಾ ಹತ್ತಿರದ ನಂಟು. ಸೌರಾಗ್ನಿ, ವಿರಾಟಾಗ್ನಿ, ವೈಶ್ವಾನರಾಗ್ನಿಗಳ ಸಮನ್ವಯದಿಂದ ಸೇವಿಸಿದ ಊಟ ರುಚಿಮಾತ್ರವಲ್ಲದೆ ಸುಲಭವಾಗಿ ಜೀರ್ಣವಾಗುತ್ತದೆ. ನಮ್ಮ ಸಂಸೃತಿಯಲ್ಲಿ ಅನ್ನವನ್ನೇ (ತಿನ್ನುವ ಎಲ್ಲಾ ಸಾತ್ವಿಕ ಪದಾರ್ಥಗಳು) ಬ್ರಹ್ಮ ಎನ್ನುತ್ತೇವೆ.ಈ ಅನ್ನ ಬ್ರಹ್ಮನ ಸೇವನೆಯಲ್ಲಿ ನಾವು ಶಿಸ್ತನ್ನು ನೋಡಬಹುದು.

ಎಲ್ಲಾ ಬಗೆಯ ಆಹಾರಗಳೂ ಒಂದೇ ಎಂದು ಭಾವಿಸುವವರಿಗೆ ತಾರತಮ್ಯ ಜ್ಞಾನವಿಲ್ಲ ಮತ್ತು ಅವರು ಮೂರ್ಖರು ಎಂದು ಆಹಾರ ವಿಜ್ಞಾನದ ಮೂಲಭೂತ ಸತ್ಯವನ್ನು ಭಗವದ್ಗೀತೆ ಹೇಳಿದೆ. ಹಾಗೆಯೇ ಮನುಷ್ಯನು ತನ್ನ ಸ್ವಭಾವಗಳಿಗನುಗುಣವಾಗಿ ಆಹಾರವನ್ನು ಆಯ್ಕೆ ಮಾಡುತ್ತಾನೆ ಮತ್ತು ಆಹಾರಗಳು ಅವನ ಸ್ವಭಾವವನ್ನು ನಿಯಂತ್ರಿಸುತ್ತದೆ ಎಂದು ಅಲ್ಲಿ ಉಲ್ಲೇಖಿಸಲಾಗಿದೆ. ‘ಆಯುಃ ಸತ್ತ್ವ ಬಲಾರೋಗ್ಯಸುಖಪ್ರೀತಿವಿವರ್ಧನಾಃ. ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ವಿಕ ಪ್ರಿಯಾಃ’ ಅಂದರೆ ರಸಯುಕ್ತವಾದ, ಪ್ರಾಣಿವಧೆ ಇಲ್ಲದೆ ಪಡೆದ ಜಿಡ್ಡಿನಿಂದ ಕೂಡಿದ ಆಹಾರಗಳು ಆರೋಗ್ಯಕ್ಕೆ ಮತ್ತು ಹೃದಯಕ್ಕೆ (ಮನಸ್ಸಿಗೆ) ಪ್ರಿಯವಾಗಿರುತ್ತದೆ ಮತ್ತು ಇವುಗಳು ಸಾತ್ವಿಕ ಗುಣದವರಿಗೆ ಹೆಚ್ಚು ಪ್ರಿಯವಾಗಿರುತ್ತದೆ. ‘ಕಟ್ವಮ್ಲ ಲವಣಾತ್ಯುಷ್ಣತೀಕ್ಷ್ಣ ರೂಕ್ಷವಿದಾಹಿನ: ದುಃಖಶೋಕಾಮಯಪ್ರದಾಃ ’ ಅಂದರೆ ಅತಿಯಾದ ಉಪ್ಪು, ಖಾರ, ಹುಳಿ ಮತ್ತು ಸುಡುವ ಆಹಾರಗಳು ದುಃಖ, ಕ್ಲೇಶ, ಮತ್ತು ರೋಗವನ್ನು ಉಂಟುಮಾಡುತ್ತವೆ. ಇಂತಹ ಆಹಾರಗಳು ರಾಜಸ ಸ್ವಭಾವದವರಿಗೆ ಇಷ್ಟವೆಂತಲೂ ಮತ್ತು ಇವುಗಳು ರಾಜಸ ಗುಣಗಳನ್ನು ಪೋಷಿಸುತ್ತವೆ ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ. ‘ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್. ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಮ’ ಅಂದರೆ ಹಳಸಿದ, ದುರ್ವಾಸನೆಯುಳ್ಳ, ಎಂದೋ ಮಾಡಿಟ್ಟ, ಸ್ವರ್ಶಯೋಗ್ಯವಲ್ಲದ ಆಹಾರಗಳನ್ನು ತಾಮಸಗುಣದವರು ಇಷ್ಟಪಡುತ್ತಾರೆಂದೂ ಮತ್ತು ಇಂತಹ ಆಹಾರಗಳು ತಾಮಸಗುಣವನ್ನು (ನಕಾರಾತ್ಮಕ) ಪ್ರಚೋದಿಸುತ್ತದೆ.

ಭಾರತೀಯ ವಿದ್ವಾಂಸರು ಹೇಳುವಂತೆ ಭಗವದ್ಗೀತೆಯೇ ಒಂದು ಬೃಹತ್ ಮನೋಶಾಸ್ತ್ರದ ಮಹಾನ್ ಗ್ರಂಥ. ಆಯುರ್ವೆದ ವಿಜ್ಞಾನ ಕೂಡ ಇದನ್ನು ಬಲವಾಗಿ ಅನುಮೊದಿಸುತ್ತದೆ. ಇದನ್ನು ಪರೀಕ್ಷೆ ಮಾಡಲೆಂದೇ ಸ್ವಿಜರ್ಲೆಂಡ್​ನಿಂದ ತಂದ ಚಾಕಲೇಟನ್ನು ನನ್ನ ಬೆಳೆದ ಮಗನಿಗೆ (ಅವನಿಗೆ ನನ್ನ ಪರೀಕ್ಷೆಯ ಅರಿವಿರಲಿಲ್ಲ) ತುಂಬಾ ತಿನ್ನಲು ಪ್ರೇರೇಪಿಸಿದ್ದೆ. ಅವನಿಗೆ ನನ್ನ ಧಾರಾಳತನ ನೋಡಿ ಅಚ್ಚರಿಯಾಗಿದ್ದರೂ ಚಾಕೊಲೇಟ್ ಪ್ರಿಯನಾದ ಅವನು ಅತೀ ಎನ್ನುವಷ್ಟು ಮೂರು ದಿನ ತಿಂದಿದ್ದ. ಆ ನಂತರ ರೇಗುತ್ತಿದ್ದ, ಸಮ್ಮನೆ ಟಿ.ವಿ. ನೋಡುತ್ತಾ ಕುಳಿತಿದ್ದ ಮತ್ತು ಕಚೇರಿಗೆ ರಜೆ ಹಾಕಿದ್ದ. ಇವೆಲ್ಲವನ್ನೂ ಗಮನಿಸಿದ್ದೆ. ಕಡೆಗೆ ಅವನೇ ‘ಯಾಕೋ ಈ ಚಾಕಲೇಟ್ ಹೀಗೆ ತಿಂದಿದ್ದೇ ನನ್ನ ಮೂಡ್ ಸ್ವಿಂಗ್’ಗೆ ಕಾರಣ ಅನಿಸುತ್ತೆ ಎಂದಿದ್ದ!

ಈ ಮಾತನ್ನು ನಿಮ್ಹಾನ್ಸ್​ನ ನಿರ್ದೇಶಕರು ಮತ್ತು ಮನೋತಜ್ಞರಾದ ಡಾ.ಬಿ.ಎನ್. ಗಂಗಾಧರ್ ಅವರೂ ಒಪು್ಪತ್ತಾರೆ. ಮಾನಸಿಕ ತಜ್ಞರಾಗಿರುವ ಡಾ. ಅಂಜನಾ ರಾಮಮೂರ್ತಿ ಹೇಳುವುದೇನೆಂದರೆ ಆಹಾರಗಳು ನಮ್ಮ ಮನಸ್ಸಿನ ಆಸೆ ಮತ್ತು ಲಾಲಸೆಗಳ ಮಿತಿಯನ್ನು ನಿಗ್ರಹಿಸುತ್ತದೆ.

ಆಹಾರ ವಿಜ್ಞಾನದ ಪ್ರಕಾರ ಒಳ್ಳೆಯ ಆಹಾರಗಳು ಮಾನಸಿಕ ತುಮುಲಗಳನ್ನು ನಿಯಂತ್ರಿಸುತ್ತದೆ. ಕೆಲವು ಆಹಾರಗಳಲ್ಲಿರುವ ಆಹಾರಾಂಶಗಳು ನ್ಯೂರೋಟ್ರಾಸ್ ಮೀಟರ್​ಗಳ ಉತ್ಪತ್ತಿಗೆ, ಅದರ ಸಂಪೂರ್ಣ ಕಾರ್ಯಾಚರಣೆಗೆ ಬೇಕಾಗುತ್ತದೆ. ಟ್ರಿಪ್ಟೊಫೇನ್ ಎಂಬ ಆಹಾರಾಂಶ ಮೂಡ್ ಮೇಲೆ ಪ್ರಭಾವ ಬೀರುವ ಸೆರಟೊನಿನ್​ಗೂ, ಟೈರೊಸಿನ್ ಆಹಾರಾಂಶ ನಮ್ಮಉದ್ರೇಕವನ್ನು ಹೆಚ್ಚಿಸುವ ಡೊಪಮೈನ್, ಅಡ್ರಿನಲಿನ್ ಮತ್ತು ನಾರ್ ಅಡ್ರ್ನಲಿನ್​ಗಳಿಗೂ ಹೀಗೆ ಅನೇಕ ಆಹಾರಗಳೂ ಇದರಲ್ಲಿರುವ ಅಂಶಗಳೂ ನಮ್ಮ ಮನಸ್ಸನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತದೆ. ದೇಹದಲ್ಲಿ ಸಕ್ಕರೆಯ ಅಂಶ ಕಡಿಮೆಯಾದರೆ ಮನಸ್ಸಿಗೆ ಕಿರಿಕಿರಿ, ಸಿಟ್ಟು ಸಿಡುಕು ಮತ್ತು ದೇಹದಲ್ಲಿ ಕೆಲ ಅಮೈನೊ ಆಮ್ಲಗಳು ಕಡಿಮೆಯಾದರೆ ಕೋಪ, ಉದ್ರೇಕ, ಆತಂಕಗಳು ಕಾಣಿಸಿಕೊಳ್ಳುತ್ತದೆ.

ಪ್ರಕೃತಿ ಸಹಜವಾದ ಅನ್ನವನ್ನು ತಿಂದವನು ಹಕ್ಕಿಯಂತಾಗುತ್ತಾನೆ ಎಂಬ ವಚನಕಾರ ಮಾತನ್ನು ನೆನೆಯುತ್ತಾ ಆರೋಗ್ಯಕರವಾದ ದೇಹ ಮತ್ತು ಮನಸ್ಸಿನಿಂದ ಇಲ್ಲಿರುವಷ್ಟು ದಿನವೂ ಇದ್ದುಬಿಡೋಣ.

ಕ್ರೖೆಂ ಮಾಡಲು ಮೊದಲು ಇಡ್ಲಿ ತಿನ್ನೋದಿಲ್ಲ!: ಜೈಲಿನಲ್ಲಿರುವ ಹಾರ್ಡ್​ಕೋರ್ ಕ್ರಿಮಿನಲ್​ಗಳ ಆಹಾರಾಭ್ಯಾಸ ಮತ್ತು ಕ್ರೖೆಂ ಮಾಡುವ ಮೊದಲು ಅವರು ತಿಂದದ್ದೇನು ಎಂದು ತಿಳಿದುಕೊಳ್ಳುವ ಕುತೂಹಲವಾಗಿತ್ತು. ಅವರನ್ನು ಕೇಳಿದಾಗ ಬಂದ ಮಾಂಸ ಮತ್ತು ಆಲ್ಕೋಹಾಲ್. ಅವರಲ್ಲಿ ಒಬ್ಬನನ್ನು ನಾನು ಕೇಳಿದ್ದು ‘ಯಾಕೆ ನೀವು ಅಪರಾಧ ಮಾಡುವ ಮೊದಲು ಇಡ್ಲಿ ಚಟ್ನಿ, ಅನ್ನ ಸಾರುಗಳನ್ನ ತಿನ್ನೊಲ್ಲ. ಆತ ನನ್ನ ಪ್ರಶ್ನೆಗೆ ಜೋರಾಗಿ ನಗುತ್ತಾ ನನ್ನನ್ನು ತುಚ್ಚವಾಗಿ ನೋಡಿದ್ದಂತೂ ಹೌದು. ‘ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಂ’ ಎಂದು ಸುಮ್ಮನಾದೆ.

ಆರ್ಟ್ ಆಫ್ ಲಿವಿಂಗ್ ಆಶ್ರಮದ ಅಭ್ಯಾಸಾರ್ಥಿಗಳಾದ ನಮಗೆಲ್ಲಾ ಸೊಗಸಾದ ಊಟವನ್ನು ಕೊಡುತ್ತಿದ್ದರು. ಅಲ್ಲಿ ಕಾಫಿ ಮತ್ತು ಟೀ ರ್ವ್ಯಜ. ಅದಕ್ಕೆ ಅವರು ಕೊಟ್ಟ ಕಾರಣ ಇವು ಮನಸ್ಸನ್ನು ಉದ್ರೇಕಿಸುತ್ತವೆ ಎಂದು. ಧ್ಯಾನದ ಪೂರ್ವ ಸಿದ್ಧತೆಗೆ ಇರಬೇಕಾದ ಮನಃಸ್ಥಿತಿ ಕಾಫಿ ಟೀ ಕುಡಿದರೆ ಬರುವುದಿಲ್ಲ ಎನ್ನುತ್ತಾರವರು. ಇದನ್ನು ನಾನು ಪರೀಕ್ಷಿಸಿ ನೋಡಿದ್ದೇನೆ.

ಋಷಿಕೇಶದ ಪರಮಾರ್ಥನಿಕೇತನ್ ಆಶ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ವಿದೇಶಿಗರು ಬರುತ್ತಾರೆ. ಅವರ ಪ್ರಧಾನ ಆಹಾರ ಮಾಂಸಾಹಾರವೇ ಆಗಿದ್ದರೂ ಅಲ್ಲಿ ಬರುವವರಿಗೆ ಇವು ರ್ವ್ಯಜ. ನಾರ್ವೆಯಿಂದ ಬಂದವರನ್ನೊಮ್ಮೆ ನಾನು ವಿಚಾರಿಸಿದಾಗ ಅವರು, ‘ಇಲ್ಲಿ ಕೊಡುವ ಈ ಊಟ ನನಗೆ ಮನಸ್ಸನ್ನು ನಿಗ್ರಹಿಸಿಡಲು ಸಹಾಯವಾಯಿತು. ಧ್ಯಾನಾಸಕ್ತಿ ಬೆಳೆಯಿತು’ ಎಂದರೆ ಚೀನಾ ಮತ್ತು ಜರ್ಮನಿಯಿಂದ ಬಂದ ಸಹ ಅಭ್ಯಾಸಿಗಳು ಹೇಳಿದ್ದು, ‘ಇದುವರೆಗೂ ನಾವು ಅನುಭವಿಸದಿದ್ದ ಒಂದು ಹೊಸ ರಿಲಾಕ್ಸ್ ್ಡ ಮನೋಭಾವದ ಅನುಭವ ನಮಗಾಗಿದೆ. ಇದು ಧ್ಯಾನದಿಂದ ಬಂದದ್ದೋ ಇಲ್ಲಾ ಸಸ್ಯಾಹಾರದಿಂದ ಬಂದದ್ದೊ ಅಥವಾ ಎರಡರಿಂದಲು ಬಂದದ್ದೋ ಗೊತ್ತಿಲ್ಲ’... ಹಿಮಾಲಯದ ಗೋಮುಖ್ ಎಂಬ ಸ್ಥಳದಲ್ಲಿ ಇರುವ ಫಲಾಹಾರಿ ಬಾಬಾ ಆಶ್ರಮದಲ್ಲಿ ಊಟ ಮುಗಿಸಿ ಬಂದಾಗ ಕಂಡ ಒಬ್ಬ ಸನ್ಯಾಸಿಯು ಹೇಳಿದ್ದು, ‘ನಾನು ಪೂರ್ವಾಶ್ರಮದಲ್ಲಿ ತುಂಬಾ ಒಳ್ಳೆಯ ಹುದ್ದೆಯಲ್ಲಿ ಇದ್ದೆ. ಯಾವಾಗಲೂ ನನಗೆ ಶ್ರೀಮಂತ ಊಟ ಮತ್ತು ಅದರಲ್ಲಿ ನಾನಾ ಬಗೆಯ ವೈವಿಧ್ಯತೆಗಳಿರಬೇಕಿತ್ತು. ಆಗ ನನ್ನ ಸ್ವಭಾವವೇ ಬೇರೆ ಇತ್ತು. ಅವೆಲ್ಲವನ್ನೂ ಬಿಟ್ಟು 8 ವರ್ಷವಾಗಿವೆ. ಸದಾ ಫಲಾಹಾರವನ್ನೇ ತಿನ್ನುತ್ತಿದ್ದೇನೆ. ನನ್ನ ಸ್ವಭಾವ ತುಂಬಾ ಬೇರೆಯಾಗಿದೆ. ನನಗೆ ನೆಮ್ಮದಿ ಎಂದರೆ ಏನು ಎನ್ನುವುದು ಈಗ ಅರ್ಥವಾಗಿದೆ’.

ಆಹಾರ ಮತ್ತು ಮನಸ್ಸು

ಆಹಾರಗಳು ಹೇಗೆ ನಮ್ಮದೇಹದ ಆರೋಗ್ಯವನ್ನು ಪೋಷಿಸುತ್ತವೆೆಯೊ ಹಾಗೆಯೇ ನಮ್ಮ ಮನಸ್ಸು, ಭಾವನೆ ಹಾಗೂ ನಡುವಳಿಕೆಗಳನ್ನೂ ಪೋಷಿಸುತ್ತವೆ. ದೇಹ ಮತ್ತು ಮನಸ್ಸು ಒಂದರೊಳಗೊಂದು ಬೆರೆತಿದ್ದರೂ, ದೇಹ ಮತ್ತು ಮನಸ್ಸು ಬೇರೆ ಬೇರೆ. ಅದರಲ್ಲೂ ಮನಸ್ಸು ಸರ್ವತಂತ್ರ ಸ್ವಾತಂತ್ರ್ಯವನ್ನು ಹೊಂದಿದೆ. ಮನಸ್ಸಿಗೆ ಭಿನ್ನವಾದ ಅಸ್ತಿತ್ವ ಇದೆ ಎಂದಾದರೆ ನಾವು ಸ್ವೀಕರಿಸುವ ಆಹಾರ ಅದರ ಮೇಲೆ ಭಿನ್ನವಾಗಿ ವರ್ತಿಸುವುದಿಲ್ಲ ಎಂದು ಹೇಗೆ ಹೇಳಲು ಆಗುತ್ತದೆಯಲ್ಲವೆ? ನಮಗಿಷ್ಟವಾದ ತಿಂಡಿಯನ್ನು ತಿಂದಾಗ ಸಿಗುವ ಸುಖ, ಆರೋಗ್ಯಕ್ಕಾಗಿಯೇ ತಿನ್ನುವ ಪದಾರ್ಥಗಳನ್ನು ತಿಂದಾಗ ಬರದಿರಬಹುದು. ಆದರೂ ರಾಸಾಯನಗಳು, ಚಯಾಪಚಯಕ್ರಿಯೆಯ ನಂತರದ ಹಂತಗಳಲ್ಲಿ ನಮ್ಮ ಭಾವ, ಬುದ್ಧಿ ಮತ್ತು ಸ್ವಭಾವಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ಸ್ಪಷ್ಟವಾಗಿ ತಿಳಿಸಲು ಆಧುನಿಕ ವಿಜ್ಞಾನ ಸೋತಿದೆ. ಇದರ ಸ್ಪಷ್ಟ ಅರಿವು ನಮಗಿದ್ದರೆ, ಮಾನಸಿಕ ದೌರ್ಬಲ್ಯಗಳಲ್ಲಿ ಸಿಕ್ಕಿಕೊಂಡವರಿಗೂ, ಸಮಾಜಘಾತುಕ ಕೆಲಸಗಳಲ್ಲಿ ನಿರತರಾಗಿರುವವರಿಗೂ ಚಿಕಿತ್ಸೆಯ ರೂಪದಲ್ಲಿ ಆಹಾರಗಳು ಸಹಾಯ ಮಾಡಬಹುದೇನೊ? ಇಂಥದ್ದೇ ಆಹಾರವನ್ನು ತಿಂದರೆ ಇಂಥದ್ದೇ ಖಚಿತವಾದ ಸ್ವಭಾವವನ್ನು ಇಂಥವರಿಂದ ಎಂದು ನಿರೀಕ್ಷಿಸಬಹುದೇನೊ!

ಡಾ.ಹೆಚ್.ಎಸ್.ಪ್ರೇಮಾ ಆಹಾರ ತಜ್ಞೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net