ಎಲ್ಲಿಗೆ ಬಂತು ಜಲಜೀವನ್?; 11 ಜಿಲ್ಲೆಗಳಲ್ಲಿ ಕಡಿಮೆ ಪ್ರಗತಿ; ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚನೆ

Jaljivan
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆಯನ್ನು ರಾಜ್ಯದಲ್ಲಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಈ ಯೋಜನೆ ಅನುಷ್ಠಾನದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿದ್ದು, ಆಗಿಂದಾಗ್ಗೆ ಪ್ರಗತಿಪರಿಶೀಲನಾ ಸಭೆ ನಡೆಸಿದ್ದಾರೆ. ವಿವಿಧ ತಾಂತ್ರಿಕ ಕಾರಣದಿಂದ ರಾಜ್ಯದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೆ ಇರುವುದು ಅವರ ಗಮನಕ್ಕೆ ಬಂದಿದ್ದು, ಈ ಹಿಂದೆ ಕೇಂದ್ರ ಜಲಶಕ್ತಿ ಸಚಿವರು ರಾಜ್ಯಕ್ಕೆ ಆಗಮಿಸಿ ಪ್ರಗತಿ ಪರಿಶೀಲಿಸಿ, ವೇಗ ನೀಡಲು ಸೂಚಿಸಿದ್ದರು. ಅದಾದ ಬಳಿಕ ಸಿಎಂ ಕೂಡ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಸಿದ್ದಾರೆ.

ಈ ನಡುವೆ ಯೋಜನೆ ಪ್ರಗತಿ ಬಗ್ಗೆ ವಿಜಯವಾಣಿಗೆ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಯೋಜನೆಯಡಿ 25 ಲಕ್ಷ ಮನೆಗಳಿಗೆ ಸೌಲಭ್ಯ ಕಲ್ಪಿಸುವ ಗುರಿಹಾಕಿಕೊಂಡಿದ್ದು, ಸುಸ್ಥಿರ ನೀರಿನ ಮೂಲ ಇರುವ ಕಡೆ ಯೋಜನೆ ಕಾರ್ಯಾರಂಭವಾಗಿದೆ. ಪ್ರಸ್ತುತ ಅನೇಕ ಕಡೆಗಳಲ್ಲಿ ಯೋಜನೆಗಳು ಕಾರ್ಯಾರಂಭವಾಗುತ್ತಿದ್ದು ಪ್ರತಿದಿನ ಸರಾಸರಿ 10 ಸಾವಿರ ಮನೆಗಳಿಗೆ ಕೊಳಾಯಿ ಸಂಪರ್ಕ ನೀಡಲಾಗುತ್ತಿದೆ. ಮುಂದಿನ 2-3 ತಿಂಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಪರ್ಕ ಸಿಗಲಿದೆ ಎಂದು ವಿವರಿಸಿದರು.ಒಂದು ವರ್ಷದಿಂದೀಚೆಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಯೋಜನೆ ಕಾರ್ಯಗತಗೊಳಿಸಲು ನಮ್ಮ ಇಲಾಖೆ ವಿಶೇಷ ಶ್ರಮ ಹಾಕಿದೆ. 2023ರೊಳಗೆ ಪೂರ್ಣ ಗುರಿ ಮುಟ್ಟಬೇಕೆಂದು ಕೇಂದ್ರ ಹೇಳಿದೆ, ಆದರೆ, ಕಾಟಾಚಾರಕ್ಕೆ ಕಾಮಗಾರಿ ಮುಗಿಸಬಾರದೆಂಬ ಕಾರಣಕ್ಕೆ 2024ರವರೆಗೆ ಕಾಲಾವಕಾಶ ಕೋರಿದ್ದೇವೆ ಎಂದರು.

ರಾಜ್ಯ ಮತ್ತು ಕೇಂದ್ರದ ಅನುದಾನದ ಸಹಭಾಗಿತ್ವ ಇರುವ ಯೋಜನೆ ಸದ್ಭಳಕೆಗೆ ಹಲವು ಶಾಸಕರು ಮುತುವರ್ಜಿ ವಹಿಸುತ್ತಿದ್ದಾರೆ. ಹಣಕಾಸಿನ ಕೊರತೆಯೂ ಇಲ್ಲ, ಸುಸ್ಥಿರ ನೀರಿನ ಮೂಲ ಇರುವ ಕಡೆ ಆದ್ಯತೆ ಮೇಲೆ ಮಂಜೂರಾತಿ ನೀಡಿ, ಟೆಂಡರ್ ಕರೆದು ಕೆಲಸ ಆರಂಭಿಸುತ್ತಿದ್ದೇವೆಂದರು.

ಈ ಯೋಜನೆ ಅನುಷ್ಠಾನಕ್ಕೆ ನಮ್ಮ ಇಲಾಖೆ ನಿರಂತರ ಶ್ರಮಹಾಕುತ್ತಿದೆ. ಸದ್ಯ ಪ್ರತಿದಿನ 10 ಸಾವಿರ ಮನೆಗಳ ಲೆಕ್ಕದಲ್ಲಿ ನಳ ಸಂಪರ್ಕ ನೀಡಲಾಗುತ್ತಿದೆ. ಇದೊಂದು ಗಮನಾರ್ಹ ಸಂಗತಿ. | ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ

ಸ್ಟೇಟಸ್ ರಿಪೋರ್ಟ್: ಜಲಜೀವನ್ ಮಿಷನ್ ಅಡಿಯಲ್ಲಿ 25,17,060 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಗುರಿ ಹಾಕಿಕೊಂಡಿದ್ದು, 2021ರ ಡಿಸೆಂಬರ್ 26ರವರೆಗಿನ ತಾಜಾ ಮಾಹಿತಿ ಪ್ರಕಾರ 14,77,545 ಮನೆ ಗಳಿಗೆ ಸಂಪರ್ಕ ನೀಡಲಾಗಿದೆ. ಈ ಮೂಲಕ ಶೇ.59 ಪ್ರಗತಿ ಸಾಧಿಸಲಾಗಿದೆ. ಅದೇ ರೀತಿ 7883 ಕೋಟಿ ರೂ. ಬಳಸಿಕೊಳ್ಳಲು ಅವಕಾಶವಿದ್ದು, 1385.85 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಅವಧಿ ವಿಸ್ತರಣೆ ಏಕೆ?

  • ರಿಟ್ರೋಫಿಟ್ಟಿಂಗ್ ಮತ್ತು ವರ್ಧನೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ನೀಡುವ ಟೈಮ್​ಲೈನ್​ ಮಾರ್ಚ್ 2022ಕ್ಕೆ ಮುಕ್ತಾಯವಾಗುತ್ತಿದೆ.
  • ರಾಜ್ಯದ ಬಹುತೇಕ ಗ್ರಾಮಗಳಲ್ಲಿ ಪೈಪ್ ವಾಟರ್ ಸಿಸ್ಟಂ ಇದ್ದರೂ, ಸರಿಯಾದ ನೆಟ್​ವರ್ಕ್ ಇಲ್ಲ. ಇಂತಹ ಗ್ರಾಮಗಳನ್ನು ಜೆಜೆಎಂ ಅಡಿ ತರಲು ಎಲ್ಲ ಹಳ್ಳಿಗಳಲ್ಲಿ ರೆಟ್ರೋಫಿಟಿಂಗ್ ಅನಿವಾರ್ಯ
  • ರಾಜ್ಯವು ಶುಷ್ಕ ಪ್ರದೇಶದಲ್ಲಿರುವುದರಿಂದ ಅಂತರ್ಜ ಲದ ಮೇಲಿನ ಅವಲಂಬನೆ ಸೂಕ್ತವಲ್ಲ. ಹೀಗಾಗಿ ಹೆಚ್ಚಿನ ಹಳ್ಳಿಗಳಲ್ಲಿ ಮೇಲ್ಮೈ ನೀರಿನ ಯೋಜನೆಗಳನ್ನು ಜೆಜೆ ಎಂಗೆ ಅನುಗುಣವಾಗಿ ರೂಪಿಸಬೇಕಿದೆ.
  • ನೀರಿನ ಒತ್ತಡದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು(ಗ್ರಾಮೀಣ), ಬೆಂಗಳೂರು ನಗರ, ತುಮಕೂರು ಮತ್ತು ಬೀದರ್, ಕಲಬುರಗಿ ಭಾಗದಲ್ಲಿ ಸುಸ್ಥಿರ ಲಭ್ಯತೆ ಆಧಾರದಲ್ಲಿ ಕಾಮಗಾರಿ ರೂಪಿಸಬೇಕಿದೆ.

ಮುಖ್ಯಮಂತ್ರಿ ಎಚ್ಚರಿಕೆ: ಜಲಜೀವನ್ ಮಿಷನ್ ವಿಷಯದಲ್ಲಿ ಯೋಜನೆಯ ಯಶಸ್ಸು, ವೈಫಲ್ಯ ಎರಡಕ್ಕೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ಹೊಣೆ. ಯಶಸ್ವಿಯಾದವರಿಗೆ ಮನ್ನಣೆ ನೀಡಲಾಗುವುದು, ವಿಫಲರಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದ್ದಾರೆ. ಜತೆಗೆ ರಾಜ್ಯ ಪ್ರವಾಸ ನಡೆಸಲು ಇಲಾಖೆ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗೆ ಸೂಚನೆಯನ್ನೂ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net