ಕ್ರಿಕೆಟ್ ತರಬೇತಿ ಹೇಗೆ ಪಡೆಯುತ್ತೀರಿ? ಅಂಧ ಕ್ರೀಡಾಪಟುಗಳಿಗೆ ಸಿಎಂ ಪ್ರಶ್ನೆ

BLIND CRICKET
Published on

ಬೆಂಗಳೂರು: ಕ್ರಿಕೆಟ್‌ಗೆ ಹೇಗೆ ತರಬೇತಿ ಪಡೆಯುತ್ತೀರಿ, ಬಾಲನ್ನು ಹೇಗೆ ಗುರುತಿಸುತ್ತೀರಿ, ಎಷ್ಟು ಪಂದ್ಯಗಳನ್ನು ಆಡಿದ್ದೀರಿ...ಇವು ಅಂಧ ಕ್ರಿಕೆಟ್ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ ಕುತೂಹಲಕರ ಪ್ರಶ್ನೆಗಳು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಐ.ಬಿ.ಎಸ್.ಎ ವಿಶ್ವ ಕ್ರಿಕೆಟ್ ಪಂದ್ಯಗಳಲ್ಲಿ ( ಕ್ರಿಕೆಟ್ ಫಾರ್ ಬ್ಲೈಂಡ್) ಪಾಲ್ಗೊಂಡು ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡ ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದ ಕರ್ನಾಟಕದ ಆಟಗಾರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ ವೇಳೆ ಆಟಗಾರರೊಂದಿಗೆ ಸಿಎಂ ಸಿದ್ದರಾಮಯ್ಯ ಕೆಲ ಕಾಲ ಸಂವಾದ ನಡೆಸಿ ಅಚ್ಚರಿ ಮೂಡಿಸಿದರು.

ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಕರ್ನಾಟಕದ ಯು.ವರ್ಷಾ ಹಾಗೂ ತಂಡದ ಆಟಗಾರರಾದ ದೀಪಿಕಾ, ಗಂಗವ್ವ ಮತ್ತು ಪುರುಷರ ತಂಡದ ಜೆ. ಪ್ರಕಾಶ್, ಸುನೀಲ್ ಕುಮಾರ್, ಬಸಪ್ಪ ಒಡ್ಡಗೋಲ್ ಅವರನ್ನು ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಅಭಿನಂದಿಸಿದರು.

ಕರ್ನಾಟಕ ರಾಜ್ಯ ಒಲಂಪಿಕ್ ಸಂಸ್ಥೆ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರ ನೇತೃತ್ವದಲ್ಲಿ ಪದಕ ವಿಜೇತ ಆಟಗಾರರ ತಂಡ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿತು.

ಗೋವಿಂದರಾಜು ಅವರ ಜತೆ ಪ್ರತ್ಯೇಕವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ನಸೀರ್ ಅಹಮದ್ , ಕ್ರಿಕೆಟ್ ಅಸೋಸಿಯೇಷನ್ ಫಾರ್ ಬ್ಲೈಂಡ್ ಇಂಡಿಯಾದ ಆಜೀವ ಅಧ್ಯಕ್ಷ ಮಹಾಂತೇಶ್, ಕ್ಯಾಬಿ ಅಧ್ಯಕ್ಷ ಬೂಸಾಗೌಡ ಸಮರ್ಥನಮ್ ಟ್ರಸ್ಟ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net