ಚೀನಾ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​; ಆ ದೇಶ ನೀಡುತ್ತಿರುವ ಅಂಕಿಅಂಶಗಳನ್ನು ನಂಬಲಾಗುತ್ತಿಲ್ಲವಂತೆ...!

Trump 24 Feb 20
Published on

ವಾಷಿಂಗ್ಟನ್​: ಚೀನಾದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅನುಮಾನ ವ್ಯಕ್ತಪಡಿಸಿದ್ದಾರೆ.

ಕರೊನಾ ವೈರಸ್​ನಿಂದ ಮೃತಪಟ್ಟವರ ನಿಖರ ಮಾಹಿತಿಯನ್ನು ಚೀನಾ ದೇಶ ನೀಡುತ್ತಿಲ್ಲ. ಬೀಜಿಂಗ್ ಆಡಳಿತ ಜಗತ್ತಿನ ಎದುರು ಮರೆಮಾಚುತ್ತಿದೆ. ಅಮೆರಿಕ ಗುಪ್ತಚರ ಇಲಾಖೆ ಅಧಿಕಾರಿಗಳು ನೀಡುತ್ತಿರುವ ಅಂಕಿಅಂಶಗಳಿಗೂ, ಚೀನಾ ನೀಡುತ್ತಿರುವ ಸಂಖ್ಯೆಗೂ ತಾಳೆಯಾಗುತ್ತಿಲ್ಲ ಎಂದು ಟ್ರಂಪ್​ ಸರ್ಕಾರದ ಶಾಸಕರು ಧ್ವನಿ ಎತ್ತಿದ್ದರು.

ಅದನ್ನು ಒಪ್ಪಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ​, ಚೀನಾ ಕರೊನಾ ವೈರಸ್​ನಿಂದ ಮೃತಪಟ್ಟವರ ಸಂಖ್ಯೆಯನ್ನು ನೀಡಿದೆ. ಆದರೆ ಅದು ನಿಖರವಾಗಿದೆ ಎಂದು ನಾವು ನಂಬುವುದು ಹೇಗೆ? ತುಂಬ ಕಡಿಮೆ ಸಂಖ್ಯೆಯನ್ನು ತೋರಿಸುತ್ತಿದ್ದಾರೆ ಎನ್ನಿಸುತ್ತದೆ ಎಂದು ಹೇಳಿದರು.

ಚೀನಾದೊಂದಿಗೆ ಅಮೆರಿಕ ಸಂಬಂಧ ಉತ್ತಮವಾಗಿದೆ. ಅಧ್ಯಕ್ಷ ಕ್ಸಿ ಜಿನ್​ಪಿಂಗ್​ರೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ಸಂಬಂಧ ಹೀಗೆ ಮುಂದುವರಿಯಲಿದೆ ಎಂದು ಟ್ರಂಪ್​ ಒತ್ತಿ ಹೇಳಿದರು.

ಅಮೆರಿಕ ಸೇನೆಯೇ ಕರೊನಾ ವೈರಸ್​ ತಂದು ಚೀನಾದಲ್ಲಿ ಹಾಕಿದೆ ಎಂದು ಚೀನಾ ಆರೋಪ ಮಾಡಿತ್ತು. ಅದಾದ ಬಳಿಕ ಡೊನಾಲ್ಡ್​ ಟ್ರಂಪ್​ ಕಿಡಿಕಾರಿದ್ದರು. ಚೀನಿ ವೈರಸ್​ ಎಂದೇ ಕರೆಯಲು ಪ್ರಾರಂಭ ಮಾಡಿದ್ದರು. ಅಂದಿನಿಂದಲೂ ಇವೆರಡೂ ದೇಶಗಳ ನಡುವಿನ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ.

ಅಮೆರಿಕ ಗುಪ್ತಚರ ಇಲಾಖೆ ಬೀಜಿಂಗ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಚೀನಾದಲ್ಲಿ ಕರೊನಾ ವೈರಸ್​ನಿಂದ ಆಗಿರುವ ಸಾವಿನ ಬಗ್ಗೆ ಪೂರ್ತಿಯಾಗಿ ಏನನ್ನೂ ಹೇಳುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಖರ ಸಂಖ್ಯೆ ಹೇಳುತ್ತಿಲ್ಲ ಎಂದು ವರದಿ ನೀಡಿದೆ.

ಚೀನಾದ ವುಹಾನ್​ನಲ್ಲಿ 2019ರಿಂದಲೇ ಕರೊನಾ ವೈರಸ್​ ಪ್ರಾರಂಭವಾಗಿದೆ. ಬುಧವಾರ (ಏ.1)ದವರೆಗೆ 3316 ಮಂದಿ ಕರೊನಾ ವೈರಸ್​ನಿಂದ ಮೃತಪಟ್ಟಿದ್ದಾರೆ, 82,361 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಚೀನಾ ಹೇಳಿದೆ.

ಹಾಗೇ ಅಮೆರಿಕದಲ್ಲಿ ಇದುವರೆಗೆ 2,06,207 ಜನರಲ್ಲಿ ಸೋಂಕು ದೃಢಪಟ್ಟಿದೆ. 4,542 ಮಂದಿ ಮೃತಪಟ್ಟಿದ್ದಾರೆ.

ಟ್ರಂಪ್​ ಅಷ್ಟೇ ಅಲ್ಲದೆ ರಿಪಬ್ಲಿಕನ್ ಸೆನೆಟರ್ ಬೆನ್ ಸಾಸ್ಸೆ ಕೂಡ ಚೀನಾ ವಿರುದ್ಧ ಹರಿಹಾಯ್ದಿದ್ದಾರೆ. ಬೀಜಿಂಗ್​ ಜಗತ್ತಿನೆದುರು ಪ್ರಸ್ತುತ ಪಡಿಸುತ್ತಿರುವ ಸಾವಿನ ಸಂಖ್ಯೆಯನ್ನು ಡಸ್ಟ್​​ಬಿನ್​ಗೆ ಹಾಕಬೇಕು. ಕರೊನಾ ವೈರಸ್​ನಿಂದ ಅಮೆರಿಕದಲ್ಲಿ ಚೀನಾಕ್ಕಿಂತ ಜಾಸ್ತಿ ಸಾವಾಗಿದೆ ಎಂಬ ವರದಿ ಸುಳ್ಳು. ಚೀನಾದಲ್ಲೇ ಜಾಸ್ತಿ ಜನ ಸತ್ತಿದ್ದಾರೆ. ಆ ದೇಶ ಮುಚ್ಚಿಡುತ್ತಿದೆ ಎಂದು ಹೇಳಿದ್ದಾರೆ.

ಅವರಂತೆ ಅನೇಕರ ಶಾಸಕರು, ಪ್ರಮುಖರು ಚೀನಾ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net