ರಾತ್ರಿ ಹೊತ್ತು ಸೊಳ್ಳೆಗಳು ಮನುಷ್ಯರನ್ನು ಹೇಗೆ ಟಾರ್ಗೆಟ್ ಮಾಡ್ತವೆ? ಇಲ್ಲಿದೆ ರೋಚಕ ಸಂಗತಿ! | Mosquito Attraction Science

Mosquito Attraction Science
ಕತ್ತಲಿದ್ದರೂ ಕರಾರುವಕ್ಕಾಗಿ ನಿಮ್ಮನ್ನೇ ಹುಡುಕುವ ಸೊಳ್ಳೆಗಳ ರಹಸ್ಯ
Published on: 

Mosquito bites: ರಾತ್ರಿ ಹೊತ್ತು ಲೈಟ್ ಆಫ್ ಮಾಡಿ ಮಲಗಿದ ತಕ್ಷಣ ಸೊಳ್ಳೆಗಳು ಕಿವಿಯ ಹತ್ತಿರ ಬಂದು 'ಗುಂಯ್' ಅಂತ ಸೌಂಡ್ ಮಾಡೋಕೆ ಶುರು ಮಾಡುತ್ತವೆ. 'ಇಷ್ಟೊಂದು ಕತ್ತಲಿದ್ದರೂ ಈ ಸೊಳ್ಳೆಗಳಿಗೆ ನಾನು ಇಲ್ಲೇ ಇದ್ದೀನಿ ಅಂತ ಹೇಗೆ ಗೊತ್ತಾಗುತ್ತಪ್ಪಾ?' ಅಂತ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ?

ಹಾಗಾದರೆ, ಕತ್ತಲಲ್ಲಿ ಸೊಳ್ಳೆಗಳು ನಿಮ್ಮನ್ನು ಎಷ್ಟು ಅಕ್ಯುರೇಟ್ ಆಗಿ ಹುಡುಕುತ್ತವೆ ಅನ್ನೋದರ ಹಿಂದಿರೋ ವಿಜ್ಞಾನದ ಆಸಕ್ತಿದಾಯಕ ಕಥೆ ಇಲ್ಲಿದೆ.

ಕತ್ತಲಲ್ಲಿ ಸೊಳ್ಳೆಗಳು ನಿಮ್ಮನ್ನು ಹುಡುಕೋದು ಹೇಗೆ?

ಸಂಪೂರ್ಣ ಕತ್ತಲ ಕೋಣೆಯಲ್ಲೂ ಸೊಳ್ಳೆಗಳು ನಮ್ಮನ್ನು ಸರಿಯಾಗಿ ಪತ್ತೆಹಚ್ಚಲು ಅವುಗಳಲ್ಲಿರೋ ಅತ್ಯಾಧುನಿಕ ಇಂದ್ರಿಯ ಶಕ್ತಿಯೇ ಕಾರಣ. ವಿಜ್ಞಾನದ ಪ್ರಕಾರ ಸೊಳ್ಳೆಗಳು ಮನುಷ್ಯರನ್ನು ಹುಡುಕಲು ಮುಖ್ಯವಾಗಿ ಈ ಮೂರು ದಾರಿಗಳನ್ನು ಬಳಸುತ್ತವೆ.

ಕಾರ್ಬನ್ ಡೈಆಕ್ಸೈಡ್ (CO2): ನಾವು ಉಸಿರು ಹೊರಬಿಡುವಾಗ ಕಾರ್ಬನ್ ಡೈಆಕ್ಸೈಡ್ ಅನಿಲ ಬರುತ್ತದೆ. ಇದನ್ನು ಸೊಳ್ಳೆಗಳು ಬೊಂಬಾಟ್ ಆಗಿ ಗ್ರಹಿಸುತ್ತವೆ. ಸುಮಾರು 30 ರಿಂದ 50 ಮೀಟರ್ ದೂರದಲ್ಲಿದ್ದರೂ ತಮ್ಮ ಆಂಟೆನಾ ಬಳಸಿ 'ಇಲ್ಲೆ ಎಲ್ಲೋ ಮನುಷ್ಯರಿದ್ದಾರೆ' ಅನ್ನೋದನ್ನು ಮೊದಲೇ ತಿಳಿದುಕೊಳ್ಳುತ್ತವೆ.

ದೇಹದ ಕಾವು ಮತ್ತು ಇನ್‌ಫ್ರಾರೆಡ್ ಕಿರಣಗಳು: ಇತ್ತೀಚಿನ ಸಂಶೋಧನೆಗಳ ಪ್ರಕಾರ, ಕತ್ತಲಲ್ಲಿ ನಮ್ಮ ದೇಹದಿಂದ ಹೊರಬರುವ ಶಾಖ ಹಾಗೂ ಇನ್‌ಫ್ರಾರೆಡ್ ಕಿರಣಗಳನ್ನು ಗುರುತಿಸುವ ಸಾಮರ್ಥ್ಯ ಸೊಳ್ಳೆಗಳಿಗಿದೆ. ಕತ್ತಲಲ್ಲಿ ನಾವು ಮಲಗಿದ್ದರೂ ನಮ್ಮ ದೇಹದ ಕಾವು ಅವುಗಳಿಗೆ ಲೈಟ್‌ಹೌಸ್ ತರ ಕಾಣಿಸುತ್ತದೆ.

ದೇಹದ ವಾಸನೆ ಮತ್ತು ಬೆವರು: ನಮ್ಮ ಚರ್ಮದಿಂದ ಹೊರಬರುವ ಬೆವರು, ಲ್ಯಾಕ್ಟಿಕ್ ಆಸಿಡ್ ಮತ್ತು ಬ್ಯಾಕ್ಟೀರಿಯಾಗಳ ವಾಸನೆ ಸೊಳ್ಳೆಗಳನ್ನು ಎಳೆದುಕೊಳ್ಳುತ್ತದೆ. ಪ್ರತಿಯೊಬ್ಬರ ದೇಹದ ವಾಸನೆ ಬೇರೆ ಬೇರೆಯಾಗಿರುವುದರಿಂದಲೇ ಕೆಲವರಿಗೆ ಸೊಳ್ಳೆಗಳು ಜಾಸ್ತಿ ಕಚ್ಚುತ್ತವೆ.

ನೆನಪಿರಲಿ, ಮನುಷ್ಯರನ್ನು ಕಚ್ಚಿ ರಕ್ತ ಹೀರೋದು ಕೇವಲ ಹೆಣ್ಣು ಸೊಳ್ಳೆಗಳು ಮಾತ್ರ. ಅವುಗಳಿಗೆ ಮೊಟ್ಟೆ ಇಡಲು ಮತ್ತು ಮರಿ ಮಾಡಲು ಪ್ರೋಟೀನ್ ಬೇಕು, ಅದು ನಮ್ಮ ರಕ್ತದಿಂದ ಸಿಗುತ್ತದೆ. ಗಂಡು ಸೊಳ್ಳೆಗಳು ಸಸ್ಯಗಳ ರಸ ಕುಡಿದು ಸೈಲೆಂಟ್ ಆಗಿರುತ್ತವೆ.

Mosquito bites
ಸೊಳ್ಳೆಗಳು

ಸೊಳ್ಳೆಗಳು ಯಾರನ್ನು ಜಾಸ್ತಿ ಆಕರ್ಷಿಸುತ್ತವೆ?

ಕೆಲವರನ್ನು ಸೊಳ್ಳೆಗಳು ಟಾರ್ಗೆಟ್ ಮಾಡಿ ಕಚ್ಚೋದನ್ನು ನೀವು ನೋಡಿರಬಹುದು. ಅದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ

'ಒ' ಗ್ರೂಪ್ ರಕ್ತ ಇರುವವರು: 'ಒ' ರಕ್ತದ ಗುಂಪು (O Blood Group) ಹೊಂದಿರುವವರನ್ನು ಸೊಳ್ಳೆಗಳು 'ಎ' ಅಥವಾ 'ಬಿ' ಗ್ರೂಪ್‌ನವರಿಗಿಂತ ಎರಡು ಪಟ್ಟು ಹೆಚ್ಚಾಗಿ ಆಕರ್ಷಿಸುತ್ತವಂತೆ.

ಹೆಚ್ಚು ಬೆವರುವವರು ಮತ್ತು ಗರ್ಭಿಣಿಯರು: ಕಸರತ್ತು ಅಥವಾ ಕೆಲಸ ಮಾಡುವಾಗ ದೇಹದಲ್ಲಿ ಲ್ಯಾಕ್ಟಿಕ್ ಆಸಿಡ್ ಮತ್ತು ಕಾವು ಹೆಚ್ಚಾಗುತ್ತದೆ. ಹಾಗೆಯೇ ಗರ್ಭಿಣಿಯರು ಸಾಮಾನ್ಯರಿಗಿಂತ ಹೆಚ್ಚು ಕಾರ್ಬನ್ ಡೈಆಕ್ಸೈಡ್ ಹೊರಬಿಡುತ್ತಾರೆ ಮತ್ತು ಅವರ ದೇಹ ಸ್ವಲ್ಪ ಬಿಸಿಯಾಗಿರುತ್ತದೆ. ಇದು ಸೊಳ್ಳೆಗಳಿಗೆ ಈಸಿಯಾಗಿ ಸಿಕ್ಕಿಬೀಳುವಂತೆ ಮಾಡುತ್ತದೆ.

ಇದನ್ನೂ ಓದಿ: ದೇಹದ ಸುತ್ತ 52 ಮದ್ಯದ ಬಾಟಲಿಗಳು: ಸಿನಿಮೀಯ ಸ್ಟೈಲ್‌ನಲ್ಲಿ ಸಿಕ್ಕಿಬಿದ್ದ ಖದೀಮರು! | Liquor Smuggling

ಗಾಢ ಬಣ್ಣದ ಬಟ್ಟೆಗಳು: ಸೊಳ್ಳೆಗಳಿಗೆ ಮೂಗು ಮಾತ್ರವಲ್ಲ, ಕಣ್ಣೂ ಕೆಲಸ ಮಾಡುತ್ತದೆ. ಕಪ್ಪು, ನೇವಿ ಬ್ಲೂ ಅಥವಾ ಗಾಢ ಕೆಂಪು ಬಣ್ಣದ ಬಟ್ಟೆ ಹಾಕಿಕೊಂಡರೆ ಸೊಳ್ಳೆಗಳ ಕಣ್ಣಿಗೆ ಮನುಷ್ಯರು ಆರಾಮವಾಗಿ ಗುರುತು ಸಿಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net