

ಮುಂಬೈ: ನಟ ಆಶಿಶ್ ವಿದ್ಯಾರ್ಥಿ ಕಳೆದ ತಿಂಗಳು ರೂಪಾಲಿ ಬರುವಾ ಅವರನ್ನು ವಿವಾಹವಾಗಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ, 57 ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗಿದ್ದಕ್ಕಾಗಿ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ನಟ ಆಶಿಶ್ ವಿದ್ಯಾರ್ಥಿ ಮೇ ತಿಂಗಳಲ್ಲಿ, ಅಸ್ಸಾಂ ಮೂಲದ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರೊಂದಿಗೆ ವಿವಾಹವಾದರು. ಇದು ಆಶಿಶ್ ವಿದ್ಯಾರ್ಥಿ ಅವರ ಎರಡನೇ ಮದುವೆಯಾಗಿದೆ. ಈ ಹಿಂದೆ ರಾಜೋಶಿ ವಿದ್ಯಾರ್ಥಿ, ಅಲಿಯಾಸ್ ಪಿಲೂ ವಿದ್ಯಾರ್ಥಿ ಅವರನ್ನು ವಿವಾಹವಾಗಿದ್ದರು, ಆದಾಗ್ಯೂ, ಅವರು 2021 ರಲ್ಲಿ ಪರಸ್ಪರ ಬೇರ್ಪಟ್ಟರು.
ಇತ್ತೀಚಿನ ಸಂದರ್ಶನವೊಂದರಲ್ಲಿ, ಆಶಿಶ್ ವಿದ್ಯಾರ್ಥಿ 57 ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗುವ ನಿರ್ಧಾರದಿಂದಾಗಿ ಅವರು ಎದುರಿಸುತ್ತಿರುವ ಟ್ರೋಲಿಂಗ್ ಬಗ್ಗೆ ಮಾತನಾಡಿದ್ದಾರೆ. ‘ಟ್ರೋಲ್‌ಗಳು ತನಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಮುದುಕ ಎಂಬಿತ್ಯಾದಿ ಅವಹೇಳನಕಾರಿ ಕಮೆಂಟ್ ನಾನು ಓದಿದ್ದೇನೆ. ಪ್ರತಿಯೊಬ್ಬರಿಗೂ ವಯಸ್ಸಾಗುತ್ತದೆ. ವಯಸ್ಸಾಯ್ತು ಎಂಬ ಕಾರಣಕ್ಕೆ ನಾವು ಏನನ್ನೂ ಮಾಡಬಾರದು ಅಂತ ಹೇಳಲಾಗುತ್ತಿದೆ. ಹಾಗಂತ ಖುಷಿ ಇಲ್ಲದೇ ಸಾಯಬೇಕಾ? ಸಂಗಾತಿ ಬೇಕು ಎನಿಸಿದರೆ ಯಾಕೆ ಪಡೆಯಬಾರದು?' ಎಂದು ಆಶಿಶ್ ವಿದ್ಯಾರ್ಥಿ ಪ್ರಶ್ನೆ ಮಾಡಿದ್ದಾರೆ.
ಮುದುಕ ಎಂಬಿತ್ಯಾದಿ ಅವಹೇಳನಕಾರಿ ಕಮೆಂಟ್ ನಾನು ಓದಿದ್ದೇನೆ:
'ಅದೆಷ್ಟೋ ವಿಚಾರಗಳಲ್ಲಿ ನಮಗೆ ನಾವೇ ಗೋಡೆ ಕಟ್ಟಿಕೊಂಡು ಗೆರೆ ಎಳೆದುಕೊಂಡು ಜೀವನ ನಡೆಸುತ್ತಿದ್ದೀವಿ. ನಾನು ಲೀಗಲ್ ಆಗಿ ಕೆಲಸ ಮಾಡುತ್ತಾ ಸರಿಯಾದ ಸಮಯಕ್ಕೆ ಟ್ಯಾಕ್ಸ್ ಕಟ್ಟುವೆ ವಯಸ್ಸಾಗಿದ್ದರೂ ಶ್ರಮದಿಂದ ಕೆಲಸ ಮಾಡುತ್ತಿರುವೆ. ಒಬ್ಬ ವ್ಯಕ್ತಿ ವೈಯಕ್ತಿಕ ನಿರ್ಧಾರ ಮಾಡುತ್ತಿದ್ದಾರೆ ಜೀವನದಲ್ಲಿ ಖುಷಿಯಾಗಿರ ಬೇಕು ಸಂಸಾರ ಕಟ್ಟಬೇಕು ಎಂದು ಕುಟುಂಬಸ್ಥರ ಸಮ್ಮುಖದಲ್ಲಿ ಲೀಗಲ್ ಆಗಿ ಮದುವೆ ಮಾಡಿಕೊಳ್ಳುತ್ತಿರುವೆ. ಜನರ ಟ್ರೋಲ್ ಮತ್ತು ಕಾಮೆಂಟ್‌ಗಳನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನಗೆ ಇದೊಂದು ಬಿಗ್ ಶಾಕ್ ಕೊಟ್ಟಿದೆ' ಎಂದು ಆಶಿಶ್ ಹೇಳಿದ್ದಾರೆ.