

ಚಿಕ್ಕಬಳ್ಳಾಪುರ: ಆಂಧ್ರ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಕಾಣಿಸಿಕೊಂಡಿರುವ ಕರ್ನಾಟಕದಲ್ಲೂ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ.
ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯಲ್ಲಿ ಹಕ್ಕಿ ಜ್ವರಕ್ಕೆ 40 ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ರಾಯಚೂರು ಭಾಗಗಳಲ್ಲೂ ಪ್ರಕರಣಗಳು ವರದಿಯಾಗಿವೆ. ಇದರ ನಡುವೆ ಕಾಯಿಲೆಗಳ ಹರಡುವಿಕೆ, ಮುಂಜಾಗ್ರತಾ ಕ್ರಮಗಳು ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
*ಹಕ್ಕಿ ಜ್ವರ ಹರಡುವಿಕೆ*
ಹಕ್ಕಿ ಜ್ವರವು H5N1 ವೈರಸ್‌ನಿಂದ ಹರಡುವ ರೋಗವಾಗಿದ್ದು, ಇದು ಟರ್ಕಿ, ಕೋಳಿ, ಗಿನಿ ಕೋಳಿ, ಬಾತುಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಬರುವ ಸಾಂಕ್ರಾಮಿಕ ಖಾಯಿಲೆಯಾಗಿದೆ. ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಕೆಲವೊಮ್ಮೆ ರೋಗಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ರೋಗ ಪೀಡಿತ ಕೋಳಿ ಅಥವಾ ಹಕ್ಕಿಯ ಮಾಂಸವನ್ನು ಸರಿಯಾಗಿ ಬೇಯಿಸದೆ ತಿನ್ನುವುದರಿಂದ ಹಾಗೂ ಸೋಂಕಿರುವ ಹಸಿ ಮೊಟ್ಟೆಗಳನ್ನು ಸೇವಿಸುವುದರಿಂದ ಹಾಗೂ ಕೋಳಿಗಳ ಹಿಕ್ಕೆಗಳು,ತ್ಯಾಜ್ಯಗಳು ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಾಗ ಈ ಖಾಯಿಲೆ ಹರಡುತ್ತದೆ. ಮತ್ತು ಕೆಲವು ಸಂದರ್ಭದಲ್ಲಿ ಗಾಳಿಯ ಮೂಲಕವು ಮನುಷ್ಯರಿಗೆ ಹರಡುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ತಿಳಿಸಿದ್ದಾರೆ.
*ರೋಗ ಲಕ್ಷಣಗಳು*
ಹಕ್ಕಿಜ್ವರ ರೋಗ ಪೀಡಿತರಲ್ಲಿ ಜ್ವರ, ಕೆಮ್ಮು, ಶಿತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಮತ್ತು ಭೇದಿಯೂ ಆಗಬಹುದು ಉಸಿರಾಟದಲ್ಲಿ ತೊಂದರೆ ಈ ಲಕ್ಷಣಗಳು ಕಾಣಿಸಿದ ಕೂಡಲೇ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಬೇಕು.
*ತೆಗೆದುಕೊಳ್ಳಬೇಕಾದ ಮುನ್ನೆಚರಿಕೆ ಕ್ರಮಗಳು*
ಶಂಕಿತ ಹಕ್ಕಿಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಹಾಗೂ ಬಾತುಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರವಹಿಸುವುದು. ಬೇರೆಯವರ ಮನೆಗೆ ಭೇಟಿ ನೀಡಿದಾಗ ಅಲ್ಲಿರುವ ಶಂಕಿತ ಹಕ್ಕಿಜ್ವರ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಸ್ಪರ್ಶಿಸಬಾರದು. ಹಕ್ಕಿಜ್ವರ ಶಂಕಿತ ಅಥವಾ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು. ಹಕ್ಕಿಜ್ವರ ಹರಡಿರುವ ಫಾರಂನ ವಾತಾವರಣದ ಸಂಪರ್ಕಕ್ಕೆ ಬಂದಲ್ಲಿ ತಕ್ಷಣ ತಮ್ಮ ಕೈಕಾಲು ಮತ್ತು ಮುಖವನ್ನು ತೊಳೆದುಕೊಂಡು ಬಟ್ಟೆಯನ್ನು ಬದಲಾಯಿಸಿಕೊಳ್ಳುವುದು. ಮತ್ತು ಮುಂದಿನ 4 ದಿನಗಳವರೆಗೆ ತಮ್ಮ ದೇಹದ ಉಷ್ಣಾಂಶದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುವುದು. ಒಂದು ವೇಳೆದ ಜ್ವರದ ಲಕ್ಷಣಗಳು ಕಾಣಿಸಿಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸುವುದು. ಸೋಂಕಿರುವ ಪ್ರದೇಶದಲ್ಲಿ ಯಾವುದೇ ವಸ್ತುವನ್ನು ಮುಟ್ಟಿದಾಗ ಯಾವಾಗಲೂ ಕೈಗಳನ್ನು ಸೋಪಿನಿಂದ ತೊಳೆಯಬೇಕು.
*ಸರಿಯಾಗಿ ಬೇಯಿಸಿದರೆ ಬರಲ್ಲ*
ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್‌ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವಷ್ಟೇ ಸೇವಿಸಬೇಕು. ಅಡುಗೆಗಾಗಿ ಕೋಳಿ ಮಾಂಸವನ್ನು ಸಿದ್ಧಪಡಿಸಿದ ನಂತರ ಕೈಗಳನ್ನು ನಂಜುನಾಶಕದಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಸೋಂಕಿತ ಹಸಿ ಮೊಟ್ಟೆಯನ್ನು ಸೇವಿಸಬಾರದು. ಹಕ್ಕಿಜ್ವರವು ಮುನ್ನೆಚರಿಕೆಯಿಂದ ತಡೆಯಬಲ್ಲ ಖಾಯಿಲೆ ಆದ್ದರಿಂದ ಖಾಯಿಲೆಯ ಲಕ್ಷಣಗಳು ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಪಶು ವೈದ್ಯಕೀಯ ಆಸ್ಪತ್ರೆಗಳಿಗೆ ಮಾಹಿತಿಯನ್ನು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆಮಾಡಿ ಎಂದು ಡಿಎಚ್ ಒ ತಿಳಿಸಿದ್ದಾರೆ.