

ಶಿವಮೊಗ್ಗ: ನಗರ ಸ್ಥಳೀಯಸಂಸ್ಥೆಗಳ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆಗಳಿದ್ದರೂ ತಕ್ಷಣವೇ ಸರಿಪಡಿಸಿಕೊಂಡು ಶೀಘ್ರವಾಗಿ ಫಲಾನುಭವಿಗಳಿಗೆ ಮನೆಗಳನ್ನು ಒದಗಿಸಬೇಕು ಎಂದು ಡಿಸಿ ಡಾ. ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಗುರುವಾರ ನಗರ ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, 2021-22ನೇ ಸಾಲಿನ ಅಂಬೇಡ್ಕರ್ ನಗರ ವಸತಿ, ವಾಜಪೇಯಿ ನಗರ ವಸತಿ ಯೋಜನೆಯಡಿ 1,740 ವಸತಿ ನೀಡುವ ಗುರಿ ಹೊಂದಿದ್ದು 531 ಮನೆಗಳು ಅನುಮೋದನೆ ನೀಡಲಾಗಿದೆ. ಬಾಕಿ ಇರುವ 444 ಮನೆಗಳ ವಿತರಣೆಗೆ ಅಧಿಸೂಚನೆ ಹೊರಡಿಸುವಂತೆ ಜಿಲ್ಲಾ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್ ಅವರಿಗೆ ಸೂಚಿಸಿದರು.
ವೈಯಕ್ತಿಕ ಮನೆ ನಿರ್ಮಾಣ ಕಾರ್ಯ ಚುರುಕುಗೊಳಿಸಬೇಕು. ತಾಂತ್ರಿಕ ತೊಂದರೆ ಇತರೆ ಸಮಸ್ಯೆಗಳನ್ನು ಗುರುತಿಸಿ ಪರಿಹಾರೋಪಾಯಗಳನ್ನು ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಶಿವಮೊಗ್ಗ ತಾಲೂಕಿನ ಗೋವಿಂದಾಪುರದಲ್ಲಿ 249.02 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 3,000 (125 ಬ್ಲಾಕ್) ಗುಂಪು ಮನೆ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಯುಜಿಡಿ, ಎಸ್‌ಟಿಪಿ ಮತ್ತು ವಿದ್ಯುತ್ ಈ ಮೂರು ಕೆಲಸಗಳು ಒಟ್ಟೊಟ್ಟಿಗೆ ಆಗಬೇಕು. ಯಾವುದೇ ವಸತಿ ನಿರ್ಮಾಣ ಕಾರ್ಯದಲ್ಲಿ ಸಮರ್ಪಕ ಯೋಜನೆ ರೂಪಿಸಿ ಈ ಎಲ್ಲ ಕಾರ್ಯ ಕೈಗೊಳ್ಳಬೇಕು ಎಂದರು.
ನವುಲೆ ಗ್ರಾಮದಲ್ಲಿ ಕೈಗೊಂಡಿರುವ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯು ಮಂದಗತಿಯಲ್ಲಿ ಸಾಗುತ್ತಿದ್ದು, ಶೀಘ್ರವಾಗಿ ಪೂರ್ಣಗೊಳಿಸಬೇಕು. ಭದ್ರಾವತಿಯಲ್ಲಿ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಾಣವಾದ ಮನೆಗಳನ್ನು ಒಳಚರಂಡಿ ಇತರೆ ವ್ಯವಸ್ಥೆಗೊಳಿಸಿ ನೀಡಬೇಕು. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಫಲಾನುಭವಿಗಳು ಅರ್ಜಿ ಸಲ್ಲಿಸದಿರುವ ಕಾರಣ ಗಿಹಿಂದಿರುಗಿಸುವಂತೆ ಸೂಚಿಸಿದರು. ಸಿಎಒ ಮೋಹನ್‌ಕುಮಾರ್, ಎಇಇ ಮಂಜುನಾಥ್, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಅಭಿಯಂತರರು ಇತರೆ ಅಧಿಕಾರಿಗಳು ಹಾಜರಿದ್ದರು.